ADVERTISEMENT

ಹಾರೋಹಳ್ಳಿ | ರಸ್ತೆ ಸವಾರರಿಗೆ ಅಪಾಯದ ಕರೆಗಂಟೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 3:32 IST
Last Updated 15 ಜನವರಿ 2024, 3:32 IST
ಹಾರೋಹಳ್ಳಿ - ಬಿಡದಿ ಮೇಡಮಾರನಹಳ್ಳಿಯಿಂದ ಕಂಚುಗಾರನಹಳ್ಳಿವರೆಗೆ ರಸ್ತೆ ಕಿತ್ತು ಗುಂಡಿ ಬಿದ್ದಿರುವುದು
ಹಾರೋಹಳ್ಳಿ - ಬಿಡದಿ ಮೇಡಮಾರನಹಳ್ಳಿಯಿಂದ ಕಂಚುಗಾರನಹಳ್ಳಿವರೆಗೆ ರಸ್ತೆ ಕಿತ್ತು ಗುಂಡಿ ಬಿದ್ದಿರುವುದು   

ಹಾರೋಹಳ್ಳಿ: ಎಲ್ಲೆಂದರಲ್ಲಿ ಎದುರಾಗುವ ರಸ್ತೆ ಗುಂಡಿ. ವಾಹನ ಸವಾರರು ಸಂಚಾರ ಮಾಡಲು ನಿತ್ಯ ನರಕ ಅನುಭವಿಸಬೇಕಾಗಿದೆ. ಹಾರೋಹಳ್ಳಿ-ಬಿಡದಿ ಮಾರ್ಗದ ಮೇಡಮಾರನಹಳ್ಳಿಯಿಂದ ಕಂಚುಗಾರನಹಳ್ಳಿ 3-4 ಕಿಲೋ ರಸ್ತೆಯಲ್ಲಿ ಸಂಚಾರ ಮಾಡುವ ಪ್ರತಿನಿತ್ಯ ವಾಹನ ಸವಾರರು ಪರದಾಡುವಂತಾಗಿದೆ.

ರಸ್ತೆ ಗುಂಡಿಮಯ: ರಸ್ತೆ ಗುಂಡಿಗಳ ದೂಳಿನಿಂದ ಸವಾರರು ಪರದಾಡುವಂತಾಗಿದೆ. ರಸ್ತೆಯಲ್ಲಿ ಸರಾಗವಾಗಿ ಸಾಗುವುದೇ ದುಸ್ತರವಾಗಿದೆ. ರಸ್ತೆ ಸಮತಟ್ಟಾಗಿದೆ ಎಂದು ಭಾವಿಸಿ ವಾಹನಗಳನ್ನು ವೇಗವಾಗಿ ಚಲಾಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಬಿದ್ದು ಏಳುತ್ತಿರುವ ಪ್ರಯಾಣಿಕರು: ದ್ವಿಚಕ್ರ ವಾಹನಗಳಲ್ಲಿ ಓಡಾಡುವವರ ಪಾಡಂತು ಹೇಳತೀರದಾಗಿದೆ. ಇನ್ನು ಸಣ್ಣಪುಟ್ಟ ಕಾರುಗಳು ಗುಂಡಿಗೆ ಇಳಿದರೆ ಮಧ್ಯಭಾಗ (ಛಾರ್ಸಿ) ಭೂಮಿಗೆ ತಾಗಿ ದಾರಿ ಹೋಕರ ಸಹಾಯ ಪಡೆಯಬೇಕಾದ ಸ್ಥಿತಿ ತಲುಪಿದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವವರು ರಸ್ತೆಯಲ್ಲಿನ ಗುಂಡಿ ಆಳ ತಿಳಿಯದೆ ಅದೆಷ್ಟೋ ಪ್ರಯಾಣಿಕರು ಬಿದ್ದಿರುವ ಪ್ರಕರಣಗಳನ್ನು ಪ್ರತ್ಯಕ್ಷದರ್ಶಿಗಳು ಕಂಡಿದ್ದಾರೆ.

ADVERTISEMENT

ಬೃಹತ್ ಸರಕು ಸಾಗಣೆ ವಾಹನ ಸಂಚಾರ: ಈ ರಸ್ತೆಗೆ ಹೊಂದಿಕೊಂಡತೆ ಹಾರೋಹಳ್ಳಿ ಬಿಡದಿ ಕೈಗಾರಿಕಾ ಪ್ರದೇಶಗಳು ಇರುವುದರಿಂದ ದಿನಪೂರ್ತಿ ಭಾರಿ ವಾಹನಗಳು ಇಲ್ಲಿ ಸಂಚರಿಸುವುದರಿಂದ ಕಡಿಮೆ ಸಾಮರ್ಥ್ಯದ ಈ ರಸ್ತೆಗಳಲ್ಲಿ ಪದೇಪದೇ ಗುಂಡಿಗಳು ಬೀಳುತ್ತಿವೆ.

ಮನೆಗಳಿಗೆ ದೂಳು: ರಸ್ತೆ ಮೇಲಿನ ದೂಳು ಮೇಡಮಾರನಹಳ್ಳಿ ರಸ್ತೆ ಬದಿ ಮನೆಗಳ ಮೇಲೆ ದೂಳು ಅವರಿಸಿಕೊಳ್ಳುತ್ತಿದೆ. ಅಲ್ಲದೆ, ಹಿಂಬದಿಯಿಂದ ಬರುವ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಸಂಚಕಾರವಾಗಿ ಪರಿಣಮಿಸಿದೆ.

ಉಸಿರಾಟದ ತೊಂದರೆ: ಮೇಡಮಾರನಹಳ್ಳಿ ರಸ್ತೆ ಬದಿ ವಾಸ ಮಾಡುವ ಮನೆಗಳ ನಿವಾಸಿಗಳಿಗೆ ಉಸಿರಾಟದ ತೊಂದರೆಯಾಗಿದೆ. ಎಷ್ಟೋ ಸಲ ಅಸ್ಪತೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.

ಭೂ ವ್ಯಾಜ್ಯ ಬಗೆಹರಿದಿಲ್ಲ: ಮೇಡಮಾರನಹಳ್ಳಿ ರಸ್ತೆ ಅಭಿವೃದ್ಧಿಗೆ ಜಾಗ ಹಾಗೂ ಮನೆಗಳ ಭೂ ವ್ಯಾಜ್ಯದ ಸಮಸ್ಯೆಗೆ ಮುಕ್ತಿ ಸಿಕ್ಕಿ ಗ್ರಾಮದವರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಹಾಗಾಗಿ ರಸ್ತೆ ಅಭಿವೃದ್ಧಿ ಆಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.

ಇನ್ನೆಷ್ಟು ವರ್ಷ ಬೇಕು: ರಸ್ತೆಗಳ ದುರಸ್ತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಯಡಿ ಕೋಟ್ಯಂತರ ಅನುದಾನ ನೀಡುತ್ತಿದೆ. ಆದರೆ, ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಾದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಹಾಗೂ ಅಧಿಕಾರಿಗಳ ನಿಷ್ಕಾಳಜಿಯಿಂದ ರಸ್ತೆ ಮಾತ್ರ ಹಾಗೇ ಉಳಿಯುವಂತಾಗಿದೆ.

ಜನಪ್ರತಿನಿಧಿಗಳಿಗೆ ಕಾಣಿಸುವುದಿಲ್ಲವೇ: ವಾಹನ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಗಿದೆ. ಈಗಾಗಲೇ ಬೈಕ್‌ಗಳಲ್ಲಿ ಓಡಾಡುವ ಅದೆಷ್ಟೋ ನಾಗರಿಕರು ಗುಂಡಿಗಳನ್ನು ತಪ್ಪಿಸಲು ಹೋಗಿ ಕೆಲವು ಬಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.

ಮೇಡಮಾರನಹಳ್ಳಿ ರಸ್ತೆಗೆ ಸಂಬಂಧಪಟ್ಟಂತೆ ಜಮೀನು ವ್ಯಾಜ್ಯವಿದೆ. ಇದರಿಂದ ರಸ್ತೆ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ.
ವಿಜಿಯಣ್ಣ, ತಹಶೀಲ್ದಾರ್ ಹಾರೋಹಳ್ಳಿ
ಮೇಡಮಾರನಹಳ್ಳಿಯಿಂದ ಕಂಚುಗಾರನಹಳ್ಳಿವರಗೆ ರಸ್ತೆ ಅಭಿವೃದ್ಧಿಪಡಿಸಿ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿ ಕೊಡಲಿ.
ಶಿವರಾಜು, ಮೇಡಮಾರನಹಳ್ಳಿ ನಿವಾಸಿ
ರೈತರು ಕಾರ್ಮಿಕರು ಶಾಲಾ-ಕಾಲೇಜು ವಿದ್ಯಾರ್ಥಿಗಳು ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ರಸ್ತೆ ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ
ಸಿದ್ದರಾಜು, ವಾಹನ ಸವಾರ
 ರಸ್ತೆಯಲ್ಲಿ ಬೃಹತ್ ಸರಕು ಸಾಗಣೆ ವಾಹನ ಸಂಚಾರ ಮಾಡುತ್ತಿರುವುದು
ಬಿಡದಿ ಹಾರೋಹಳ್ಳಿ ರಸ್ತೆಯಲ್ಲಿ ವಾಹನಗಳ ಸಂಚಾರ
ಬಿಡದಿ-ಹಾರೋಹಳ್ಳಿ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.