ADVERTISEMENT

ನಿಯಮ ಪಾಲಿಸಿದರೆ ಅಪಘಾತ ಇಳಿಕೆ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ನ್ಯಾಯಧೀಶೆ ಪಿ.ಆರ್. ಸವಿತಾ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 2:48 IST
Last Updated 7 ಜನವರಿ 2026, 2:48 IST
<div class="paragraphs"><p>ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟನೆ ಸಮಾರಂಭದಲ್ಲಿ</p></div>

ರಾಮನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಉದ್ಘಾಟನೆ ಸಮಾರಂಭದಲ್ಲಿ

   

ರಾಮನಗರ: ‘ಜೀವಕ್ಕಿಂತ ಅಮೂಲ್ಯವಾದದ್ದು ಯಾವುದೂ ಇಲ್ಲ. ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳು ತಾನಾಗೇ ಇಳಿಕೆಯಾಗಲಿವೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪಿ.ಆರ್. ಸವಿತಾ ಅಭಿಪ್ರಾಯಪಟ್ಟರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಹಯೋಗದಲ್ಲಿ ಆರ್‌ಟಿಒ ಕಚೇರಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಜನವರಿ: 2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಹಿಂದೆ ಯಾವುದೇ ರಸ್ತೆಗಳು ಇರಲಿಲ್ಲ. ಕಾಡುದಾರಿ ಇತ್ತು. ರಸ್ತೆಗಳು ನಿರ್ಮಾಣವಾದ ನಂತರ ಅಪಘಾತಗಳಿಂದ ಸಾವು-ನೋವುಗಳು ಹೆಚ್ಚಾಗಿವೆ. ಈಗ ಹೆದ್ದಾರಿಯಲ್ಲಿ ಸಂಚರಿಸುವುದಕ್ಕೆ ಭಯಪಡುವ ಸ್ಥಿತಿ ಇದೆ. ವಾಹನ ಚಲಾಯಿಸುವಾಗ ಹಾಗೂ ಪಾದಾಚಾರಿ ಮಾರ್ಗದಲ್ಲಿ ನಡೆದು ಹೋಗುವಾಗಲೂ ನಿಯಮಗಳನ್ನು ತಪ್ಪದೆ ಅನುಸರಿಸಬೇಕು’ ಎಂದು ಸಲಹೆ ನೀಡಿದರು.

‘ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸಬಾರದು. ಮದ್ಯಪಾನ ಮಾಡಿದಾಗಲೂ ವಾಹನ ಚಾಲನೆ ಮಾಡಬಾರದು. ನಾಲ್ಕು ಚಕ್ರ ವಾಹನಗಳನ್ನು ಚಾಲನೆ ಮಾಡುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಹಾಗೂ ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಬೇಕು’ ಎಂದು ತಿಳಿಸಿದರು.

‘ಹೆದ್ದಾರಿಗಳಲ್ಲಿ ಸರಣಿ ಅಪಘಾತ ತಪ್ಪಿಸಲು, ಒಂದು ವಾಹನದಿಂದ ಮತ್ತೊಂದು ವಾಹನದ ನಡುವೆ ಅಂತರ ಕಾಯ್ದುಕೊಳ್ಳಬೇಕು. ವಾಹನಗಳನ್ನು ಸುಸ್ಥಿತಿಯಲ್ಲಿಡಬೇಕು. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಬಾರದು. ಮೊಬೈಲ್‌ನಲ್ಲಿ ಮಾತನಾಡಲೇಬೇಕಾದ ಅನಿವಾರ್ಯವಿದ್ದಾಗ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮಾತನಾಡಬೇಕು’ ಎಂದು ಕಿವಿಮಾತು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಚ್. ರಾಮಚಂದ್ರಯ್ಯ ಮಾತನಾಡಿ, ‘ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 39 ಮಂದಿ ಕೊಲೆಯಾಗಿದ್ದರೆ, ರಸ್ತೆ ಅಪಘಾತದಿಂದ 438 ಮಂದಿ ಸಾವನ್ನಪ್ಪಿದ್ದಾರೆ. ಕೊಲೆಗಿಂತ, ಹೆಚ್ಚಾಗಿ ರಸ್ತೆ ಅಪಘಾತದಲ್ಲಿ ಹೆಚ್ಚು ಸಾವು ಸಂಭವಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ದ್ವಿಚಕ್ರ ವಾಹನವನ್ನು ಅತಿ ವೇಗದಲ್ಲಿ ಚಲಾಯಿಸುವ ಯುವಜನರು ರಸ್ತೆ ಅಪಘಾತದಲ್ಲಿ ಹೆಚ್ಚಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಬುದ್ಧಿವಾದ ಹೇಳಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮಗಳ ಕುರಿತು ಪೊಲೀಸ್ ಹಾಗೂ ಸಾರಿಗೆ ಇಲಾಖೆ ಜಾಗೃತಿ ಮೂಡಿಸುತ್ತಿವೆ. ಎಲ್ಲರೂ ನಿಯಮ ಪಾಲಿಸಿ ಅಪಘಾತ ಇಳಿಕೆಗೆ ಸಹಕರಿಸಬೇಕು’ ಎಂದರು.

ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ಟಿ.ಎ. ಸತೀಶ್ ಬಾಬು ಅವರು, ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಚಟುವಟಿಕೆಗಳ ಕುರಿತು ಮಾತನಾಡಿದರು. ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ 11 ವಿವಿಧ ಬಗೆಯ ಪೋಸ್ಟರ್‌ಗಳು ಹಾಗೂ ಕರಪತ್ರಗಳನ್ನು ಗಣ್ಯರು ಬಿಡುಗಡೆ ಮಾಡಿದರು..

ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಹಾಗೂ ಜಿಲ್ಲಾ ರಸ್ತೆ ಸುರಕ್ಷತೆ ಸಮಿತಿ ಕಾರ್ಯದರ್ಶಿ ಶಂಕರ್, ಆರ್‌ಟಿಒ ಇನ್‌ಸ್ಪೆಕ್ಟರ್‌ಗಳಾದ ವಿದ್ಯಾ ಎನ್., ಕುಮಾರಸ್ವಾಮಿ ಎಂ.ಬಿ, ಜಿಲ್ಲಾ ವೈದ್ಯಾಧಿಕಾರಿ ಡಾ. ಶಶಿ ಕಿರಣ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಕೆಂಪಯ್ಯ, ಲಯನ್ಸ್ ಕ್ಲಬ್‌ನ ವೆಂಕಟ ಸುಬ್ಬಯ್ಯ,  ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಇದ್ದರು.

ಗಮನ ಸೆಳೆದ ಸೆಲ್ಫಿ ಸ್ಟ್ಯಾಂಡ್!

ವೇದಿಕೆ ಕಾರ್ಯಕ್ರಮದ ನಂತರ ರಸ್ತೆ ಸುರಕ್ಷತಾ ಸಂಬಂಧ ನಿರ್ಮಿಸಿರುವ ಸೆಲ್ಫಿ ಸ್ಟ್ಯಾಂಡ್ ಅನ್ನು ಗಣ್ಯರು ಉದ್ಘಾಟಿಸಿದರು. ಸೆಲ್ಫಿ ಸ್ಟ್ಯಾಂಡ್‌ನಲ್ಲಿ ಸಾರ್ವಜನಿಕರು ತಮ್ಮ ಫೋಟೋ ಅಥವಾ ವಿಡಿಯೊ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದರೆ ಅವುಗಳೇನಾದರೂ ಹೆಚ್ಚಿನ ವೀಕ್ಷಣೆ ಕಂಡರೆ ಅಂತಹವರಿಗೆ ಬಹುಮಾನ ನೀಡಲಾಗುತ್ತದೆ ಪುರಸ್ಕಾರವನ್ನು ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಆರ್‌ಟಿಒ ಕಚೇರಿ ಆವರಣದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಜರುಗಿತು. ರಸ್ತೆ ಸುರಕ್ಷತೆ ಕುರಿತು ಅರಿವು ಮೂಡಿಸುವ ಸಂಚಾರಿ ಪ್ರಚಾರ ವಾಹನಕ್ಕೆ ಹಾಗೂ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ರಸ್ತೆಗೆ ಸುರಕ್ಷತೆ ಕುರಿತಾದ ಅರಿವು ಮೂಡಿಸುವ ಧ್ವನಿವಾಹಿನಿ ಹೊಂದಿರುವ ಕಸ ವಿಲೇವಾರಿ ವಾಹನಗಳಿಗೆ ಗಣ್ಯರು ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.