ADVERTISEMENT

ಜೂಜಾಡಿದರೆ ರೌಡಿಶೀಟರ್‌ ಪಟ್ಟ!

ಇನ್ನು ಮುಂದೆ ಠಾಣೆಯಲ್ಲಿ ಸಿಗದು ಜಾಮೀನು

​ಪ್ರಜಾವಾಣಿ ವಾರ್ತೆ
Published 30 ಮೇ 2021, 3:27 IST
Last Updated 30 ಮೇ 2021, 3:27 IST

ರಾಮನಗರ: ಹಳ್ಳಿಗಳಲ್ಲಿನ ಹೊರವಲಯದ ತೋಟಗಳಲ್ಲಿ, ಗುಂಡು ತೋಪುಗಳಲ್ಲಿ ಇಸ್ಪೀಟ್ ಜೂಜಾಟದ ಮೋಜು ಮಾಡುತ್ತಾ ಕಾಲ ಕಳೆಯುವವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು, ರೌಡಿಶೀಟರ್ ಪಟ್ಟ ಕಟ್ಟಿ ಜೈಲಿಗಟ್ಟುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಗ್ರಾಮೀಣ ಭಾಗದ ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪಾಗಿ ಜೂಜಾಟ ಆಡಿ ಸಿಕ್ಕಿ ಬೀಳುವವರಿಗೆ ಈವರೆಗೆ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆ 87ರ ಅಡಿ ಪ್ರಕರಣ ದಾಖಲಿಸುತ್ತಿದ್ದರು. ಇಂತಹ ಆರೋಪಿಗಳು ಠಾಣೆಯ ಜಾಮೀನು ಪಡೆದು ಹೊರಬರಬಹುದಿತ್ತು. ನ್ಯಾಯಾಲಯ–ಜೈಲು ಎಂದೆಲ್ಲ ಅಲೆಯುವ ಭಯ
ಇರಲಿಲ್ಲ.

ಆದರೆ, ಈಗ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಇಂತಹ ಆರೋಪಿಗಳ ವಿರುದ್ಧ ಅಪಿಡೆಮಿಕ್ ಹಾಗು ಡಿಎಂಎ ಕಾಯ್ದೆ ಅಸ್ತ್ರ ಪ್ರಯೋಗಿಸುತ್ತಿದೆ. ಈ ಪ್ರಕರಣಗಳ ಆರೋಪಿಗಳಿಗೆ ಇನ್ನು ಮುಂದೆ ಠಾಣಾ ಜಾಮೀನು ಸಿಗುವುದಿಲ್ಲ. ಬದಲಾಗಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯಬೇಕಿದೆ. ಹೀಗೆ ಪದೇ ಪದೇ ಸಿಕ್ಕಿ ಬೀಳುವವರು ಠಾಣೆಯ ರೌಡಿಶೀಟರ್‌ಗಳ ಪಟ್ಟಿಯನ್ನೂ ಸೇರಲಿದ್ದಾರೆ.

ADVERTISEMENT

ಲಾಕ್‌ಡೌನ್ ವೇಳೆ ಗ್ರಾಮೀಣ ಪ್ರದೇಶಗಳಲ್ಲಿ ಜೂಜಾಟ ಹೆಚ್ಚಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಲ್ಲಲ್ಲಿ ಜೂಜು ಮತ್ತು ಪಾರ್ಟಿಗಳನ್ನು ಆಯೋಜಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಇದರಿಂದ ನಿಯಮ ಉಲ್ಲಂಘನೆ ಜೊತೆಗೆ ಕೋವಿಡ್ ಸೋಂಕು ಸಹ ಹೆಚ್ಚುತ್ತಿದೆ. ಹೀಗಾಗಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

68 ಪ್ರಕರಣ: ಈ ತಿಂಗಳು ಒಂದರಲ್ಲಿಯೇ ಕಳೆದ 25 ದಿನದಲ್ಲಿ ಜಿಲ್ಲೆಯ ಪೊಲೀಸರು ವಿವಿಧೆಡೆ ಇಸ್ಪೀಟ್‌ ಜೂಜಾಡುತ್ತಿದ್ದವರ ವಿರುದ್ಧ 68 ಪ್ರಕರಣ ದಾಖಲಿಸಿದ್ದಾರೆ. ಇವರಿಂದ ₹6,65,354 ನಗದು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ ಆರೋಪಿಗಳ ಹತ್ತಾರು ವಾಹನಗಳೂ ಸೀಜ್‌ ಆಗಿವೆ. ಈ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳಿಗೆ ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ.

ರೌಡಿಶೀಟರ್ ಅಸ್ತ್ರ: ಜಿಲ್ಲೆಯಲ್ಲಿ ಸದ್ಯ 279 ರೌಡಿಶೀಟರ್‌ಗಳಿದ್ದಾರೆ. ಒಮ್ಮೆ ರೌಡಿ ಶೀಟರ್ ಪಟ್ಟ ‍ಪಡೆದುಕೊಂಡರೆ, ಮುಂದೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಎಲ್ಲಿ ಅಪರಾಧಗಳು ನಡೆದರೂ ಮೊದಲು ಪೊಲೀಸರ ಕಣ್ಣು ಬೀಳುವುದು ಇವರ ಮೇಲೆಯೇ. ಅಷ್ಟೇ ಅಲ್ಲ ಯಾವಾಗ ಕರೆಯುತ್ತಾರೋ ಆಗೆಲ್ಲ ಠಾಣೆಗಳಿಗೆ, ಪೆರೇಡ್‌ಗಳಿಗೆ ಹೋಗಿ ಕೈ ಕಟ್ಟಿ ನಿಲ್ಲಬೇಕು. ಇಂತಹವರಿಗೆ ಸರ್ಕಾರಿ ಉದ್ಯೋಗ, ಪಾಸ್‌ಪೋರ್ಟ್‌ ಸಹ ದೊರೆಯುವುದಿಲ್ಲ. ಜೊತೆಗೆ ಪೊಲೀಸರೇ ಆಗಾಗ ಹುಡುಕಿಕೊಂಡು ಮನೆಗೆ ಸಹ ಬರುವುದು
ಉಂಟು.

ಹೀಗಾಗಿ ಜೂಜಾಟಕ್ಕೆಂದು ಹೊರಗೆ ಹೋಗುವ ಮುನ್ನ ಒಮ್ಮೆ ಯೋಚಿಸಿ. ಪಾರ್ಟಿ, ಇಸ್ಪೀಟ್‌ ಆಡಿ ಹಣ ಮತ್ತು ಆರೋಗ್ಯ ಕಳೆದುಕೊಳ್ಳುವ ಬದಲು ಮನೆಯಲ್ಲೇ ಸುರಕ್ಷಿತವಾಗಿ ಇರಿ ಎನ್ನುವುದು ಪೊಲೀಸರ ಸಲಹೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.