ADVERTISEMENT

ರಾಮನಗರ | ರೌಡಿಶೀಟರ್ ಬಂಧನ: ಪತ್ನಿ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:44 IST
Last Updated 25 ಜುಲೈ 2024, 5:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಕೆಲ ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದ ನಗರದ ಐಜೂರು ಪೊಲೀಸ್ ಠಾಣೆಯ ರೌಡಿಶೀಟರ್ ಮಹಾಲಿಂಗನನ್ನು ಪೊಲೀಸರು ಬುಧವಾರ ಬಂಧಿಸಿದ ಬೆನ್ನಲ್ಲೇ, ಆತನ ಪತ್ನಿ ಅಮೃತ ಠಾಣೆಯ ಎಸ್‌ಐ ತನ್ವೀರ್ ಅವರ ವಿರುದ್ಧ ಡೆತ್ ನೋಟ್ ಬರೆದಿಟ್ಟಿರುವ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿದ್ರೆ ಮಾತ್ರೆ ಸೇವಿಸಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾ‍ಪಾಯದಿಂದ ಪಾರಾಗಿದ್ದಾರೆ.

‘ಕೊಲೆ ಯತ್ನ ಸೇರಿದಂತೆ ಕೆಲ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಹಾಲಿಂಗ, ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ. ತಲೆಮರೆಸಿಕೊಂಡಿದ್ದ ಆತ, ಚಾಮುಂಡೇಶ್ವರಿ ಕರಗದ ಹಿನ್ನೆಲೆಯಲ್ಲಿ ನಗರಕ್ಕೆ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ಐಜೂರು ಪಿಎಸ್‌ಐ ಆತನನ್ನು ಬಂಧಿಸಿದ್ದಾರೆ. ಇದರಿಂದಾಗಿ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಿಎಸ್‌ಐ ತನ್ನ ಕರ್ತವ್ಯ ನಿರ್ವಹಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಡೆತ್‌ ನೋಟ್‌ನಲ್ಲೇನಿದೆ: ‘ನನ್ನ ಸಾವಿಗೆ ಐಜೂರು ಎಸ್‌ಐ ತನ್ವೀರ್ ಕಾರಣ. ನನ್ನ ಗಂಡನನ್ನು ಟಾರ್ಗೆಟ್ ಮಾಡಿ ದ್ವೇಷದಿಂದ ಬಂಧಿಸಿದ್ದಾರೆ. ನನಗೆ ನ್ಯಾಯ ಬೇಕು. ನನ್ನ ಗಂಡನಿಗೆ ಹುಷಾರಿಲ್ಲ’ ಎಂದು ಅಮೃತ ಡೆತ್‌ನೋಟ್ ಬರೆದಿದ್ದಾರೆ. ಜೆಡಿಎಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಮಹಾಲಿಂಗನ ಮೇಲೆ ಮಾರ್ಚ್ ತಿಂಗಳಲ್ಲಿ ರೌಡಿಗಳ ಗುಂಪೊಂದು ಲಾಂಗ್ ಹಿಡಿದು ಅಟ್ಟಾಡಿಸಿ ಕೊಲೆಗೆ ಯತ್ನಿಸಿತ್ತು. ‍ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.