ADVERTISEMENT

ವಿದ್ಯುತ್‌ ಬೆಲೆ ಏರಿಕೆ ಆರ್‌ಪಿಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 4:47 IST
Last Updated 13 ಜೂನ್ 2021, 4:47 IST
ಹಾರೋಹಳ್ಳಿಯ ಬೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗದಲ್ಲಿ ಆರ್‌ಪಿಐ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಹಾರೋಹಳ್ಳಿಯ ಬೆಸ್ಕಾಂ ವಿಭಾಗೀಯ ಕಚೇರಿ ಮುಂಭಾಗದಲ್ಲಿ ಆರ್‌ಪಿಐ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಕನಕಪುರ: ವಿದ್ಯುತ್ ದರ ಏರಿಕೆ ಖಂಡಿಸಿ ಆರ್‌ಪಿಐ ಯುವ ಘಟಕದ ಪದಾಧಿಕಾರಿಗಳು ಹಾರೋಹಳ್ಳಿಯ ಬೆಸ್ಕಾಂ ಕಚೇರಿ ಮುಂದೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

ಅಧ್ಯಕ್ಷ ಅಧ್ಯಕ್ಷ ಜಿ. ಗೋವಿಂದಯ್ಯ ಮಾತನಾಡಿ, ಜನರು ಕೊರೊನಾ ಸಂಕಷ್ಟದಲ್ಲಿ ಸಿಲುಕಿ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಪರಿಸ್ಥಿತಿ ಭೀಕರ ಸ್ವರೂಪ ಪಡೆದಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಸಿದೆ. ಕಷ್ಟದಲ್ಲಿ ಇರುವವರಿಗೆ ಮತ್ತಷ್ಟು ಕಷ್ಟ ಕೊಡುತ್ತಿದೆ ಎಂದು ದೂರಿದರು.

ಈಗಾಗಲೇ, ದಿನನಿತ್ಯದ ಗೃಹ ಬಳಕೆ ವಸ್ತುಗಳು, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರುವ ಬೆನ್ನಲ್ಲೇ ವಿದ್ಯುತ್ ದರ ಏರಿಕೆಯು ಬಡಜನರಿಗೆ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರವಾಗಿವೆ. ದೀನ ದಲಿತರ, ರೈತರ ಹಾಗೂ ಆರ್ಥಿಕವಾಗಿ ಹಿಂದುಳಿದವರ ಪಾಲಿಗೆ ಗೋಮುಖ ವ್ಯಾಘ್ರದಂತಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕಷ್ಟದಲ್ಲಿರುವ ಜನತೆಯ ಸಮಸ್ಯೆ ಆಲಿಸಿಲ್ಲ. ಅವೈಜ್ಞಾನಿಕವಾಗಿ ವಿದ್ಯುತ್‌, ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಕೂಡಲೇ ಬೆಲೆ ಏರಿಕೆ ನೀತಿಯನ್ನು ಹಿಂಪಡೆದು ಜನರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.

ಕೊರೊನಾ ಲಾಕ್‌ಡೌನ್‌ ಕಾರಣ ಸಾಂಕೇತಿಕವಾಗಿ ಕಡಿಮೆ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಒಂದು ವೇಳೆ ಬೆಲೆ ಏರಿಕೆ ಹಿಂಪಡೆಯದಿದ್ದರೆ ಆರ್‌ಪಿಐ ಪಕ್ಷ ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.‌

ಪಕ್ಷದ ಮುಖಂಡರಾದ ಶ್ರೀನಿವಾಸ್ ಬೆಟ್ಟಳ್ಳಿ, ಬೆಂವಿವಿ ಸತೀಶ ಜಿ.ಕೆ., ಪುನೀತ್ ಗುಳ್ಳಟ್ಟಿ, ಗೋಪಿ, ಕೋಟೆ ಗಂಗಣ್ಣ, ಕೋನಸಂದ್ರ ವೆಂಕಟೇಶ್, ವಡೇರಹಳ್ಳಿ ಗಂಗಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.