ADVERTISEMENT

ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕಾಗಿ ಸಿಪಿವೈಗೆ ₹5 ಲಕ್ಷ ಲಂಚ: ಆರೋಪ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 5:17 IST
Last Updated 30 ಮಾರ್ಚ್ 2024, 5:17 IST
<div class="paragraphs"><p>ಲಂಚ</p></div>

ಲಂಚ

   

ಚನ್ನಪಟ್ಟಣ: ‘ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಪಡೆಯಲು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ ಅವರಿಗೆ ₹5ಲಕ್ಷ ನೀಡಿದ್ದೆ’ ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಎಂ.ಮಲುವೇಗೌಡ ಆರೋಪಿಸಿದ್ದಾರೆ. 

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲುವೇಗೌಡ, ನಾನು ಆ ಪದವಿಯನ್ನು ಉಚಿತವಾಗಿ ಪಡೆದಿಲ್ಲ. ‘ಆ ಪದವಿಗೆ ನಿಮ್ಮನ್ನು ಸೇರಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಅವರಿಗೆ ಹಣ ನೀಡಬೇಕು. ₹10ಲಕ್ಷ ಕೊಡು ಎಂದು ಸಿಪಿವೈ ಕೇಳಿದ್ದರು. ಆದರೆ, ನಾನು ₹ 5ಲಕ್ಷ ನೀಡಿದ್ದೆ. ಸ್ವತಃ ಯೋಗೇಶ್ವರ ಅವರೇ ನನ್ನಿಂದ ಹಣ ಪಡೆದು ಮತ್ತೊಬ್ಬ ಆಕಾಂಕ್ಷಿಗೆ ಹಣ ನೀಡಿದ್ದರು’ ಎಂದು ವಿವರಿಸಿದರು.

ADVERTISEMENT

‘ಬಿಜೆಪಿಯಲ್ಲಿ ಇದ್ದಾಗ ಮಲುವೇಗೌಡ ಅವರು ಉಂಡು ಹೋದರು, ಕೊಂಡೂ ಹೋದರು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷರು ಆರೋಪಿಸಿದ್ದಾರೆ. ಇದು ನಿಜಕ್ಕೂ ಹಾಸ್ಯಾಸ್ಪದ ವಿಚಾರ. ರಾಜಕಾರಣದಲ್ಲಿ ನನಗೆ ಆಗಿರುವ ಅನುಭವದಷ್ಟು ವಯಸ್ಸು ಆಗಿಲ್ಲದ ಬಿಜೆಪಿ ಅಧ್ಯಕ್ಷರು ನನ್ನ ವಿರುದ್ಧ ಮಾತನಾಡಿದ್ದಾರೆ. ಯಾರನ್ನೊ ಮೆಚ್ಚಿಸಲು ಬೊಬ್ಬೆ ಹೊಡೆಯುವ ಬದಲು ನಿಮ್ಮ ಪಕ್ಷದಿಂದ ಸಾವಿರಾರು ಸಂಖ್ಯೆಯಲ್ಲಿ ಪಕ್ಷಾಂತರ ಮಾಡುತ್ತಿರುವ ಕಾರ್ಯಕರ್ತರು, ಮುಖಂಡರನ್ನು ಉಳಿಸಿಕೊಳ್ಳಲು ಮುಂದಾಗಿ’ ಎಂದು ಸಲಹೆ ನೀಡಿದರು.

ಮುಖಂಡ ಹರೂರು ರಾಜಣ್ಣ ಮಾತನಾಡಿ, ‘ನನಗೂ ಬಿಜೆಪಿಗೂ ಸಂಬಂಧವಿಲ್ಲ. ನಾನು ಆ ಪಕ್ಷಕ್ಕೆ ಸೇರಿಯೂ ಇಲ್ಲ. ನಾನು ಸಿ.ಪಿ.ಯೋಗೇಶ್ವರ ಅವರ ಪ್ರಗತಿಗಾಗಿ ದುಡಿದಿದ್ದೇನೆ. ಯೋಗೇಶ್ವರ ಅವರು ಬಿಜೆಪಿಯಲ್ಲಿ ಇದ್ದಾಗಲೂ ಅವರ ಪರವಾಗಿ ದುಡಿದಿದ್ದೇನೆ. ಇದರಿಂದ ನಾನು ಕಾಂಗ್ರೆಸ್‌ಗೆ ದ್ರೋಹ ಮಾಡಿದ್ದೇನೆಯೇ ಹೊರತು ಬಿಜೆಪಿಗೆ ದ್ರೋಹ ಮಾಡಿಲ್ಲ. ಆ ಪಕ್ಷದಿಂದ ನಾನು ಯಾವುದೇ ಸ್ಥಾನಮಾನ ಪಡೆದೂ ಇಲ್ಲ. ಬಿಜೆಪಿಯಲ್ಲಿನ ಗುಂಪುಗಾರಿಕೆ ಕಂಡು ನಾನು ಮತ್ತೆ ಮಾತೃ ಪಕ್ಷ ಕಾಂಗ್ರೆಸ್‌ಗೆ ಮರಳಿದ್ದೇನೆ. ಬಿಜೆಪಿಯವರು ನನ್ನ ಮೇಲೆ ಆರೋಪ ಮಾಡುವಂತಿಲ್ಲ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್, ಸುನೀಲ್, ಸಿಂಗರಾಜಿಪುರ ರಾಜಣ್ಣ, ಎಚ್.ಎಸ್.ಪ್ರೇಮ್ ಕುಮಾರ್, ಶಿವಮಾದು, ನೀಲಸಂದ್ರ ಅಣ್ಣಯ್ಯ, ವೀರೇಗೌಡ, ರಮೇಶ್, ಅಕ್ಕೂರು ಶೇಖರ್, ವಂದಾರಗುಪ್ಪೆ ರಾಜೇಶ್, ನವಿಲೇಶ್, ಕೋಟೆ ಸ್ವಾಮಿ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.