
ಕನಕಪುರ: ಎರಡನೇ ದಿನದ ಕನಕೋತ್ಸವ ಯೋಗ, ಮ್ಯಾರಥಾನ್, ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ, ಸಮೂಹ ನೃತ್ಯ, ಕುಸ್ತಿ ಪಂದ್ಯಾವಳಿಯೊಂದಿಗೆ ಗುರುವಾರ ಯಶಸ್ವಿಯಾಗಿ ನಡೆಯಿತು.
ಬೆಳಿಗ್ಗೆ 5.30ಕ್ಕೆ ಯೋಗಾಸನದೊಂದಿಗೆ ತಾಲ್ಲೂಕಿನ ಜನರಿಗಾಗಿ ನಡೆಯುತ್ತಿರುವ ಕನಕೋತ್ಸವ ಪ್ರಾರಂಭಗೊಂಡಿತು.
‘ರನ್ ಫಾರ್ ಮನರೇಗಾ’ ಎಂಬ ಅಡಿ ಬರಹದೊಂದಿಗೆ ‘ಮನರೇಗಾ ಉಳಿಸಿ, ಗ್ರಾಮೀಣ ಬದುಕು ರಕ್ಷಿಸಿ’ ಘೋಷವಾಕ್ಯದೊಂದಿಗೆ 1,500 ಮಂದಿ ಮ್ಯಾರಥಾನ್ ಓಟವನ್ನು ವೇದಿಕೆ ಕಾರ್ಯಕ್ರಮ ನಡೆಯುತ್ತಿರುವ ತಾಲ್ಲೂಕು ಕ್ರೀಡಾಂಗಣದಿಂದ ಪ್ರಾರಂಭಿಸಿದರು.
ಹೌಸಿಂಗ್ ಬೋರ್ಡ್ ಮಾರ್ಗವಾಗಿ ಶಿವನಹಳ್ಳಿ, ಶಿವನಹಳ್ಳಿ ಮೆಗಾ ಡೇರಿ ಬಳಸಿಕೊಂಡು ಶಿವನಳ್ಳಿ ಮಾರ್ಗವಾಗಿ ಮತ್ತೆ ಹೌಸಿಂಗ್ ಬೋರ್ಡ್ ಮಾರ್ಗವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಮುಕ್ತಾಯಗೊಳಿಸಿದರು.
ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಮ್ಯಾರಥಾನ್ ಓಟಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸಮೂಹ ನೃತ್ಯ ಸ್ಪರ್ಧೆಯಲ್ಲಿ ನೂರಾರು ತಂಡಗಳು ಪ್ರದರ್ಶನ ನೀಡಿದವು.
ಪುಟಾಣಿಗಳು ಮತ್ತು ಯುವ ಕುಸ್ತಿ ಪಟುಗಳು, ರಾಜ್ಯಮಟ್ಟದ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಸೆಣೆಸಾಡಿ ಉತ್ತಮ ಪ್ರದರ್ಶನ ನೀಡಿದರು. ಗರಡಿ ಕುಸ್ತಿಗಳನ್ನು ನೋಡಲು ಹಿರಿಯ ಪೈಲ್ವಾನರು, ಸಾರ್ವಜನಿಕರು ಪ್ರೋತ್ಸಾಹಿಸಿದರು.
ಊಟದ ವ್ಯವಸ್ಥೆ: ಡಿಕೆಎಸ್ ಚಾರಿಟಬಲ್ ಟ್ರಸ್ಟ್‌ನಿಂದ ಉರ್ದು ಶಾಲೆ ಆವರಣದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಜನಸಾಗರ: ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮ ವೀಕ್ಷಿಸಿದರು. ನಗರದಲ್ಲಿ ಎಲ್ಲಿ ನೋಡಿದರು ಜನರೇ ಕಾಣುತ್ತಿದ್ದರು. ವೇದಿಕೆ ಮುಂಭಾಗದಲ್ಲಿ ಜನಸಾಗರವೇ ಸೇರಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.