ADVERTISEMENT

ಗ್ರಾಮೀಣ ಪ್ರದೇಶ; ಕೀಳರಿಮೆ ಬೇಡ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 13:25 IST
Last Updated 20 ಅಕ್ಟೋಬರ್ 2019, 13:25 IST
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಸತೀಶ್‌ಗೌಡ ಮಾತನಾಡಿದರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ ಸತೀಶ್‌ಗೌಡ ಮಾತನಾಡಿದರು   

ಕನಕಪುರ: ಹಳ್ಳಿಗಾಡಿನ ಕುಗ್ರಾಮದಲ್ಲಿ ಹುಟ್ಟಿದವರೂ ದೊಡ್ಡ ಸಾಧನೆ ಮಾಡಿದ್ದಾರೆ. ಗ್ರಾಮೀಣ ಪ್ರದೇಶದವರೆಂಬ ಕೀಳರಿಮೆಯನ್ನು ಬಿಟ್ಟು ಸಾಧನೆ ಮಾಡಿದರೆ ನೀವು ಸಾಧಕರಾಗಬಹುದು ಎಂದು ಜ್ಙಾನಭಾರತಿ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಡಾ.ಸತೀಶ್‌ಗೌಡ ಹೇಳಿದರು.

ಇಲ್ಲಿನ ಬೂದುಗುಪ್ಪೆ ಗ್ರಾಮದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ 2019-20ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್‌, ರೆಡ್‌ಕ್ರಾಸ್‌, ರೋವರ್ಸ್‌ ವತಿಯಿಂದ ನಡೆದ ಕಿರಿಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರಕವಿ ಕುವೆಂಪು, ಅಬ್ದುಲ್‌ ಕಲಾಂ ಇವರು ಸಣ್ಣ ಗ್ರಾಮಗಳಲ್ಲಿ ಜನಿಸಿ ಇಡೀ ರಾಷ್ಟ್ರವೇ ಅವರ ಕಡೆ ತಿರುಗಿ ನೋಡುವ ದೊಡ್ಡ ಸಾಧನೆ ಮಾಡಿದ್ದಾರೆ. ಸಾಧನೆಗೆ ಬೇಕಿರುವುದು 'ಧೃಡವಾದ ಛಲ, ಸಾಧಿಸಬೇಕೆಂಬ ಹಠ'. ನಿರ್ದಿಷ್ಟ ಗುರಿಯೊಂದಿಗೆ ಕಠಿಣ ಪರಿಶ್ರಮದಿಂದ ಪ್ರಯತ್ನಪಟ್ಟರೆ ನೀವು ಸಾಧಕರಾಗಬಹುದು ಎಂದು ಆತ್ಮವಿಶ್ವಾಸ ತುಂಬಿದರು.

ಕೀರಣಗೆರೆ ಚಾಕಾ ಸಾಕಿಣಿಕಾ ಕೇಂದ್ರದ ಜಗದೀಶ್‌ ಮಾತನಾಡಿ, ‘ನಗರ ಪ್ರದೇಶದವರೆಂಬ ಧೋರಣೆಯಾಗಲಿ, ಗ್ರಾಮೀಣ ಪ್ರದೇಶದವರೆಂಬ ಕೀಳರಿಮೆಯಾಗಲಿ ಬೇಕಿಲ್ಲ. ಶ್ರೀಮಂತರ ಮಕ್ಕಳು ಶ್ರೀಮಂತರಾಗುವುದರಲ್ಲಿ, ಐಎಎಸ್‌, ಐಪಿಎಸ್‌ ಅಧಿಕಾರಿಗಳ ಮಕ್ಕಳು ಅದರಲ್ಲಿ ಸಾಧನೆ ಮಾಡುವುದರಲ್ಲಿ, ಡಾಕ್ಟರ್‌ ಮಕ್ಕಳು ಡಾಕ್ಟರ್‌ ಆಗುವುದರಲ್ಲಿ ಯಾವುದೆ ಸಾಧನೆಯಿಲ್ಲ. ಅವರಿಗೆ ಎಲ್ಲಾ ಅನುಕೂಲಗಳು ಪೋಷಕರ ನೆರವು ಇರುತ್ತದೆ.

ಆದರೆ ಒಬ್ಬ ಕಾರ್ಮಿಕನ ಮಗ, ಕೃಷಿಕನ ಮಗ, ಆಟೋ ಚಾಲಕನ ಮಗ ಡಾಕ್ಟರ್‌, ಎಂಜಿನಿಯರ್‌, ಐಪಿಎಸ್‌, ಐಎಎಸ್‌ ಅಧಿಕಾರಿಯಾಗುವುದು ವಿಶೇಷ ಮತ್ತು ಸಾಧನೆಯಾಗುತ್ತದೆ. ಆ ನಿಟ್ಟಿನಲ್ಲಿ ನೀವು ಮುಂದೆ ಏನಾದರೂ ಸಾಧನೆ ಮಾಡಬೇಕೆಂಬ ದೊಡ್ಡ ಕನಸಿನೊಂದಿಗೆ ಜೀವನ ಸಾಕಾರಗೊಳಿಸಿಕೊಳ್ಳಿ ಎಂದು ಕರೆ ನೀಡಿದರು.

ಯಾವ ಮನುಷ್ಯನಿಗೆ ಹಸಿವಿರುತ್ತೋ, ಅವನ ಮುಂದೆ ಸವಾಲುಗಳಿರುತ್ತವೋ ಅಂತಹ ಮನುಷ್ಯ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾನೆ. ಅಪಮಾನ ಅವಮಾನಗಳು ಮನುಷ್ಯನನ್ನು ಜಾಗೃತಗೊಳಿಸುತ್ತವೆ. ಅಣಕವಾಡಿದ ಸಮಾಜದ ಮುಂದೆ ನಾವು ಏನನ್ನಾದರೂ ಸಾಧಿಸಬೇಕೆಂಬ ಛಲ ನಮ್ಮಲ್ಲಿ ಹುಟ್ಟಿಕೊಳ್ಳುತ್ತದೆ ಎಂದು ತಮ್ಮ ಜೀವನದ ಅನುಭವ ಹಂಚಿಕೊಂಡರು.

ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ವೃಷಭೇಂದ್ರ ಮಾತನಾಡಿ, ‘ಓದುವುದರಲ್ಲಿ ಸರ್ಕಾರಿ–ಖಾಸಗಿ ಶಾಲಾ ಕಾಲೇಜುಗಳೆಂಬುದನ್ನು ಬಿಡಬೇಕು. ಕಾನ್ವೆಂಟ್‌ನಲ್ಲಿ ಓದಿದರೆ ಮಾತ್ರ ಬುದ್ಧಿವಂತರಾಗುತ್ತಾರೆ ಎಂಬುದನ್ನು ಬಿಡಬೇಕು. ಪ್ರಸ್ತುತ ದೊಡ್ಡ ದೊಡ್ಡ ಉದ್ಯೋಗದಲ್ಲಿರುವವರು ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿದವರೆ ಆಗಿದ್ದಾರೆ’ ಎಂದರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಅಧ್ಯಕ್ಷ ಕೂ.ಗಿ.ಗಿರಿಯಪ್ಪ, ಜಾನಪದ ಕಲಾ ಪರಿಷತ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಚಂದ್ರ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಮುತ್ತುರಾಜು, ಡಾ.ವೆಂಕಟಾಚಲಪತಿ, ಡಾ.ವಿ.ಮಂಜುಳ, ಶಿವಲಿಂಗೇಗೌಡ, ಮುಜೀಬ್‌ಖಾನ್‌, ಎಂ.ಕೋಕಿಲ, ಆರ್‌.ರತ್ನಮ್ಮ, ಸುಮತಿ ಸೇರಿದಂತೆ ಅತಿಥಿ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.