
ಚನ್ನಪಟ್ಟಣ: ತಾಲ್ಲೂಕಿನ ಕಣ್ವ ಬಳಿ ಮಂಗಳವಾರ ಸಾಧನ ಸಂಕ್ರಾಂತಿ ಸಂಭ್ರಮ ಆಯೋಜಿಸಲಾಗಿತ್ತು. ಶಾಲೆ ಮಕ್ಕಳು ನೃತ್ಯಗಳಿಗೆ ತಕ್ಕಂತೆ ವೇಷಧರಿಸಿ ಜಾನಪದ, ಡೊಳ್ಳು ಕುಣಿತ, ಪೂಜಾ ಕುಣಿತ, ಮಾದಪ್ಪನ ಪದ, ಹಾಲಕ್ಕಿ ನೃತ್ಯ, ಯಕ್ಷಗಾನ ನಡೆಸಿಕೊಡುವ ಮೂಲಕ ಗಮನ ಸೆಳೆದರು.
ಸುತ್ತಮುತ್ತಲ ಗ್ರಾಮಗಳ ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಕರೆ ತಂದಿದ್ದರು. ಮಕ್ಕಳು ರಾಗಿ ಕಣ, ರಂಗೋಲಿ ಚಿತ್ರಗಳನ್ನು ಬಿಡಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಸಿ.ಪಿ.ಯೋಗೇಶ್ವರ್ ಪತ್ನಿ ಶೀಲಾ ಯೋಗೇಶ್ವರ್ ಮಾತನಾಡಿ, ಮಕ್ಕಳಿಗೆ ಶಾಲಾ ದಿನಗಳಿಂದಲೆ ಕಲೆ, ಸಾಹಿತ್ಯ, ಸಂಸ್ಕೃತಿ ಪರಿಚಯ ಮಾಡಿಕೊಟ್ಟಾಗ ಮಾತ್ರ ಪಾಶ್ಚಿಮಾತ್ಯ ಸೆಳೆತಕ್ಕೆ ಸಿಲುಕಿ ನಲುಗುತ್ತಿರುವ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಮಾಜಿ ಶಾಸಕ ಎಂ.ಸಿ.ಅಶ್ವಥ್, ಸಮಾಜ ಸೇವಕ ಚಕ್ಕಲೂರು ಕೃಷ್ಣಪ್ಪ, ಎಂ.ಕೆ.ದೊಡ್ಡಿ ಠಾಣೆ ಸಬ್‌ಇನ್ ಸ್ಪೆಕ್ಟರ್ ಸಹನಾ ಪಾಟೀಲ್, ರಾಂಪುರ ಗ್ರಾ.ಪಂ ಅಧ್ಯಕ್ಷ ಕನ್ನಮಂಗಲ ಯೋಗೇಶ್, ಮುಖಂಡರಾದ ಬಾಳೇನಹಳ್ಳಿ ರಾಜಶೇಖರ್, ಮಂಜುನಾಥ್, ಹಿಂದೂ ಜಾಗರಣ ವೇದಿಕೆ ಶಾ.ನಾಗರಾಜು, ಗ್ರಾ.ಪಂ.ಸದಸ್ಯ ಸಿದ್ದಾಚಾರ್, ಸಾಧನಾ ಸಂಸ್ಥೆ ಮುಖ್ಯಸ್ಥೆ ಸಾಧನಶ್ರೀ, ಟ್ರಸ್ಟಿ ಸಂಕೇತ್ ನಾಯಕ್, ಶಾಲೆ ಮುಖ್ಯ ಶಿಕ್ಷಕ ಚನ್ನವೀರಪ್ಪ, ಶಿಕ್ಷಕರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.