ರಾಮನಗರ: ‘ಕನ್ನಡದ ಮೇಲೆ ಇತರ ಭಾಷೆಗಳಿಂದಾಗುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ಕನ್ನಡಿಗರಾದ ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ನಾಡು, ನುಡಿ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು. ಆಗ ಮಾತ್ರ ಭಾಷೆ ಉಳಿಯುವ ಜೊತೆಗೆ ಬೆಳವಣಿಗೆಯಾಗುತ್ತದೆ’ ಎಂದು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಅಭಿಪ್ರಾಯಪಟ್ಟರು.
ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘವು ನಗರದ ನ್ಯೂ ಎಕ್ಸ್‌ಪರ್ಟ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಕ್ಷಕರ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಯಾವ ಭಾಷೆಯೂ ಮೇಲು ಅಥವಾ ಕೀಳಲ್ಲ. ಎಲ್ಲಾ ಭಾಷೆಗಳೂ ತಮ್ಮದೇ ಮಹತ್ವ ಹೊಂದಿವೆ. ಮಾತೃಭಾಷೆ ಬಗೆಗಿನ ಕೀಳರಿಮೆ ಬಿಟ್ಟು ಹೆಮ್ಮೆಯ ಭಾವ ಬೆಳೆಸಿಕೊಳ್ಳಬೇಕು’ ಎಂದರು.
‘ಸಮ್ಮೇಳನದಲ್ಲಿ ಬಹುತೇಕ ಶಿಕ್ಷಕರೇ ಇದ್ದಾರೆ. ಪುವೃತ್ತಿಯಲ್ಲಿ ಸಾಹಿತಿಗಳಾಗಿರುವವರು ನಾಡಿನಲ್ಲಿ ಬಹಳಷ್ಟು ಇದ್ದಾರೆ. ಕುವೆಂಪು, ಬೇಂದ್ರೆ, ವಿ.ಕೃ. ಗೋಕಾಕ್, ಪ್ರೊ. ಸಿ.ಡಿ. ನರಸಿಂಹಯ್ಯ, ಜಿ.ಪಿ. ರಾಜರತ್ನಂ ಸೇರಿದಂತೆ ಹಲವರು ವೃತ್ತಿಯಲ್ಲಿ ಬೋಧಕರಾಗಿದ್ದರು. ಇಂದಿನ ಸಮ್ಮೇಳನಾಧ್ಯಕ್ಷ ಕೂ.ಗಿ. ಗಿರಿಯಪ್ಪ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸಾಹಿತಿಯಾಗಿ ಕನ್ನಡಕ್ಕಾಗಿ ದುಡಿಯುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಎಂ. ರಮೇಶ ಕಮತಗಿ, ‘ರಾಮನಗರದ ಸಾಹಿತ್ಯ ಪ್ರೇಮಿಗಳು ನಮಗೆ ಸಹಕಾರ ನೀಡಿದ್ದರಿಂದ ಇಂತಹದ್ದೊಂದು ಸಮ್ಮೇಳನ ಆಯೋಜನೆ ಸಾಧ್ಯವಾಗಿದೆ. ಸಮ್ಮೇಳನಾಧ್ಯಕ್ಷ ಕೂ.ಗಿ. ಗಿರಿಯಪ್ಪ ಅವರು ಶಿಕ್ಷಕ ವೃತ್ತಿ ಜೊತೆಗೆ 45 ವರ್ಷಗಳ ಸುದೀರ್ಘ ಸಾಹಿತ್ಯ ಸೇವೆ ಮಾಡಿದ್ದಾರೆ. ಅವರನ್ನು ಗುರುತಿಸಿ ಗೌರವಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದು ಹೇಳಿದರು.
ಕೂ.ಗಿ. ಗಿರಿಯಪ್ಪ ಅವರ, ‘ರಾಣಿ ಕಿತ್ತೂರು ಚನ್ನಮ್ಮ’ ಕೃತಿಯನ್ನು ಭಾರತೀಯ ಸ್ತ್ರೀ ಶಕ್ತಿ ಸಂಘದ ಸಂಸ್ಥಾಪಕ ಅಧ್ಯಕ್ಷೆ ಭಾಗ್ಯ ಅವರು ಬಿಡುಗೆ ಮಾಡಿ, ಉಪನ್ಯಾಸ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ದುಡಿದ 25 ಶಿಕ್ಷಕರಿಗೆ ರಾಜ್ಯಮಟ್ಟದ ‘ಶಿಕ್ಷಣ ರತ್ನ’ ಪ್ರಶಸ್ತಿ ಹಾಗೂ 5 ಮಂದಿಗೆ ‘ಕರುನಾಡ ನಕ್ಷತ್ರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಮ್ಮೇಳನ ಪ್ರಯಕ್ತ ನಡೆದ ಕನ್ನಡದ ಧ್ವಜದ ಮೆರವಣಿಗೆಗೆ ವಿಜಯಕುಮಾರ್ ಆರ್.ಸಿ ಮತ್ತು ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಚಾಲನೆ ನೀಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್ ಧ್ವಜಾರೋಹಣ ನೆರವೇರಿಸಿದರು. ಕವಿಗೋಷ್ಠಿಯನ್ನು ಕೆ.ಪಿ. ಶಿವಪ್ಪ ಉದ್ಘಾಟಿಸಿದರು. ಚಿಕ್ಕಮರಿಗೌಡ ಉಪಸ್ಥಿತರಿದ್ದರು. 15ಕ್ಕೂ ಹೆಚ್ಚು ಶಿಕ್ಷಕರು ತಮ್ಮ ಕವಿತೆಗಳನ್ನು ವಾಚಿಸಿದರು.
ಸಾಹಿತಿಗಳಾದ ಕಾಕೋಳು ಶೈಲೇಶ್, ಸುರೇಶ್ ಕೊರಕೊಪ್ಪ ಎಲ್ಲೇಗೌಡ ಬೆಸಗರಹಳ್ಳಿ, ಬಿ.ಟಿ. ದಿನೇಶ್, ಅಂಬರೀಷ್, ಗೋವಿಂದಹಳ್ಳಿ ಕೃಷ್ಣಗೌಡ, ಕೆಂಪರಾಜು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಸಾಹಿತಿ ಸಿ. ರಮೇಶ ಹೊಸದೊಡ್ಡಿ ಮಾಡಿದರು.
ಕನ್ನಡ ನಾಡು–ನುಡಿ ಅನೇಕ ಮಹನೀಯರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಕೊಡುಗೆಯನ್ನು ನೆನೆಯುತ್ತಲೇ ನಮ್ಮ ಅಸ್ಮಿತೆಯಾದ ಭಾಷೆಯನ್ನು ಉಳಿಸಿ ಬೆಳೆಸಬೇಕು. ಈ ನಿಟ್ಟಿನಲ್ಲಿ ರಚನಾತ್ಮಕ ಕೆಲಸಗಳಾಗಬೇಕು.
– ಕೂ.ಗಿ. ಗಿರಿಯಪ್ಪ ಸಮ್ಮೇಳನಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.