ADVERTISEMENT

ರಾಮನಗರ | 2 ತಿಂಗಳಿಂದ ಸಿಕ್ಕಿಲ್ಲ ಶಿಕ್ಷಕರಿಗೆ ವೇತನ

ಖಾಸಗಿ ಶಾಲೆಗಳಿಗೆ ಆರ್ಥಿಕ ಸಂಕಷ್ಟ; ನೆರವಿಗೆ ಧಾವಿಸಲು ಸರ್ಕಾರಕ್ಕೆ ಮೊರೆ

ಆರ್.ಜಿತೇಂದ್ರ
Published 17 ಮೇ 2020, 20:00 IST
Last Updated 17 ಮೇ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಮನಗರ: ಲಾ‌ಕ್‌ಡೌನ್ ಕಾರಣಕ್ಕೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಶಿಕ್ಷಣ ಸಂಸ್ಥೆಗಳು ಆರ್ಥಿಕವಾಗಿ ದಿವಾಳಿಯಾಗುತ್ತಿವೆ. ಇದರಿಂದಾಗಿ ಈ ಶಾಲೆಗಳನ್ನೇ ನಂಬಿದ ಅಧ್ಯಾಪಕರು, ಸಿಬ್ಬಂದಿಯ ಬದುಕು ಬೀದಿಗೆ ಬಿದ್ದಿದೆ.

ಶಾಲೆಗಳು ಬಂದ್ ಆಗಿ ಎರಡು ತಿಂಗಳು ಕಳೆದಿದೆ. ಬೇರೆ ದಿನಗಳಲ್ಲಿ ಅದರೆ ಇಷ್ಟೊತ್ತಿಗೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಭಾಗಶಃ ಮುಗಿಯುತಿತ್ತು. ಆದರೆ, ಕೊರೊನಾ ಕಾರಣಕ್ಕೆ ಶಾಲೆಗಳ ಬಾಗಿಲು ತೆರೆಯುತ್ತಿಲ್ಲ. ದಾಖಲಾತಿ ಪ್ರಕ್ರಿಯೆ ಸಹ ಸ್ಥಗಿತಗೊಂಡಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಪ್ರಕ್ರಿಯೆ ಸಂದರ್ಭ ಹಣ ಕಟ್ಟುವಂತೆ ಸಾರ್ವಜನಿಕರನ್ನು ಒತ್ತಾಯಿಸುವಂತೆ ಇಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದೆ. ಹೀಗಾಗಿ ಶಿಕ್ಷಣ ಸಂಸ್ಥೆಗಳು ನಷ್ಟದಲ್ಲಿ ಇದ್ದು, ಸಂಬಳ ಕೊಡಲಾರದೇ ಸೋತಿವೆ. ಕೆಲವು ಕಡೆ ಇದೇ ಕಾರಣಕ್ಕೆ ಕೆಲ ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.

ADVERTISEMENT

ಕೆಲವು ಶಾಲೆಗಳು ತಮ್ಮ ಸಿಬ್ಬಂದಿಗೆ ಮಾರ್ಚ್‌ ತಿಂಗಳ ವೇತನ ನೀಡಿವೆ. ಆದರೆ ಹಣವಿಲ್ಲದ ಕಾರಣ ಏಪ್ರಿಲ್ ತಿಂಗಳ ಸಂಬಳ ಮಾತ್ರ ಯಾರೊಬ್ಬರ ಕೈ ಸೇರಿಲ್ಲ. ಇದೀಗ ಮೇ ತಿಂಗಳ ವೇತನಕ್ಕೂ ಕತ್ತರಿ ಬಿದ್ದಿದೆ. ಇದರಿಂದಾಗಿ ಸುಮಾರು 4-5 ಸಾವಿರದಷ್ಟು ಜನರ ಕುಟುಂಬಗಳು ಜೀವನ ನಿರ್ವಹಣೆಗೆ ಪರದಾಡುತ್ತಿವೆ.

ಶುಲ್ಕ ಸಂಗ್ರಹ ಶೂನ್ಯ: ಜಿಲ್ಲೆಯಲ್ಲಿ 205 ಖಾಸಗಿ ಶಾಲೆಗಳು ಇವೆ. ಇವುಗಳ ಪೈಕಿ ಕೇವಲ 40-50 ಶಾಲೆಗಳು ಮಾತ್ರ ಆರ್ಥಿಕವಾಗಿ ಸಧೃಢವಾಗಿವೆ. ಇನ್ನುಳಿದ ಶಾಲೆಗಳು ಆಯಾ ವರ್ಷದ ಸಂಪಾದನೆ ಮೇಲೆಯೇ ನಡೆಯುತ್ತಿವೆ. ಶಾಲೆ ಸಿಬ್ಬಂದಿಗೆ ವೇತನ, ಕಟ್ಟಡದ ಬಾಡಿಗೆ, ನಿರ್ವಹಣೆ ಖರ್ಚು ಸೇರಿದಂತೆ ವರ್ಷಕ್ಕೆ ಲಕ್ಷಾಂತರ ರುಪಾಯಿ ಬೇಕಿದೆ. ಆದರೆ ಮಾರ್ಚ್‌‌ನಿಂದ ಈವರೆಗೆ ಈ ಶಾಲೆಗಳಿಗೆ ಒಂದು ರುಪಾಯಿಯೂ ಆದಾಯ ಬಂದಿಲ್ಲ.

’ಜಿಲ್ಲೆಯಲ್ಲಿನ ಸಾಕಷ್ಟು ಅನುದಾನ ರಹಿತ ಶಾಲೆಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಇಂತಹ ಶಾಲೆಗಳು ಲಾಕ್‌ಡೌನ್‌ ಸಂಕಷ್ಟದಿಂದ ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ಬಹುತೇಕ ಶಾಲೆಗಳ ಮುಖ್ಯಸ್ಥರು ಸಾಲ ಮಾಡಿ ಸಿಬ್ಬಂದಿಗೆ ವೇತನ ನೀಡಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಪಟೇಲ್ ರಾಜು.

’ಡಿಸೆಂಬರ್‌ನಿಂದ ಈಚೆಗೆ ಶಾಲೆಗಳಿಗೆ ಹೆಚ್ಚಿನ ಪೋಷಕರು ಶುಲ್ಕ ಕಟ್ಟಿಲ್ಲ. ಮಾರ್ಚ್‌ ನಿಂದ ಅಂತೂ ಒಂದು ರುಪಾಯಿಯೂ
ಸಂಗ್ರಹವಾಗಿಲ್ಲ. ನಾನೇ 5 ಲಕ್ಷ ಸಾಲ ಮಾಡಿ ಸಿಬ್ಬಂದಿಗೆ ವೇತನ ನೀಡಿದ್ದೇನೆ. ಉಳಿದವರದ್ದೂ ಹೆಚ್ಚು ಕಡಿಮೆ ಇದೆ ಕಥೆ’ ಎಂದು
ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.