ADVERTISEMENT

ರಾಮನಗರ: ವೇತನಕ್ಕಾಗಿ ನೌಕರರ ಅಹೋರಾತ್ರಿ ಧರಣಿ

ಹರೀಸಂದ್ರ ಗ್ರಾ.ಪಂ. ಕಚೇರಿ ಎದುರು ಧರಣಿ: ಸ್ಥಳಕ್ಕೆ ತೆರಳಿ ವೇತನ ಭರವಸೆ ನೀಡಿದ ಇಒ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 2:17 IST
Last Updated 8 ನವೆಂಬರ್ 2025, 2:17 IST
ವೇತನ ಬಿಡುಗಡೆಗೆ ಆಗ್ರಹಿಸಿ ಹರೀಸಂದ್ರ ಗ್ರಾಮ ಪಂಚಾಯಿತಿಯ ವಾಟರ್‌ಮ್ಯಾನ್‌ಗಳು ಹಾಗೂ ಬಿಲ್‌ ಕಲೆಕ್ಟರ್‌ಗಳು ಪಂಚಾಯಿತಿ ಕಚೇರಿ ಎದುರು ಗುರುವಾರ ಧರಣಿ ನಡೆಸಿ, ಅಲ್ಲಿಯೇ ಮಲಗಿದ್ದ ದೃಶ್ಯ
ವೇತನ ಬಿಡುಗಡೆಗೆ ಆಗ್ರಹಿಸಿ ಹರೀಸಂದ್ರ ಗ್ರಾಮ ಪಂಚಾಯಿತಿಯ ವಾಟರ್‌ಮ್ಯಾನ್‌ಗಳು ಹಾಗೂ ಬಿಲ್‌ ಕಲೆಕ್ಟರ್‌ಗಳು ಪಂಚಾಯಿತಿ ಕಚೇರಿ ಎದುರು ಗುರುವಾರ ಧರಣಿ ನಡೆಸಿ, ಅಲ್ಲಿಯೇ ಮಲಗಿದ್ದ ದೃಶ್ಯ   

ರಾಮನಗರ: ಒಂಬತ್ತು ತಿಂಗಳಿಂತ ವೇತನ ಪಾವತಿಸುತ್ತಿಲ್ಲ ಎಂದು ತಾಲ್ಲೂಕಿನ ಹರೀಸಂದ್ರ ಗ್ರಾಮ ಪಂಚಾಯಿತಿಯ ವಾಟರ್‌ಮ್ಯಾನ್‌ಗಳು ಮತ್ತು ಬಿಲ್ ಕಲೆಕ್ಟರ್‌ಗಳು ಸೇರಿದಂತೆ 23 ನೌಕರರು ಗುರುವಾರ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು.

ವೇತನ ಪಾವತಿಗೆ ಆಗ್ರಹಿಸಿ ಬೆಳಿಗ್ಗೆಯಿಂದ ಸಂಜೆವರೆಗೆ ಧರಣಿ ನಡೆಸಿದರೂ, ಯಾರೂ ಸ್ಪಂದಿಸದಿದ್ದರಿಂದ ಅಹೋರಾತ್ರಿ ಧರಣಿ ನಡೆಸಿ ಕಚೇರಿ ಆವರಣದಲ್ಲಿ ಮಲಗಿದರು.

ಹಿಂದೆ ನೌಕರರ ಸಂಬಳವನ್ನು ಸರ್ಕಾರವೇ ಪಾವತಿಸುತ್ತಿತ್ತು. ಆದರೆ, ಕಳೆದ ಒಂದು ವರ್ಷದಿಂದ ವಾರ್ಷಿಕ ₹50 ಲಕ್ಷದ ಆದಾಯ ಸಂಗ್ರಹಿಸುವ ಪಂಚಾಯಿತಿಯು ತನ್ನ ನೌಕರರಿಗೆ ವೇತನ ಸಹ ಪಾವತಿಸಬೇಕು ಎಂಬ ನಿಯಮ ಮಾಡಲಾಗಿದೆ. ನಮ್ಮ ಪಂಚಾಯಿತಿಗೆ ವಾರ್ಷಿಕ ₹1.20 ಕೋಟಿ ಆದಾಯ ಬರುತ್ತಿದ್ದರೂ ನೌಕರರಿಗೆ ವೇತನ ಪಾವತಿಸದೆ ಸತಾಯಿಸುತ್ತಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

ADVERTISEMENT

‘ನನಗೆ 9 ತಿಂಗಳಿಂದ ವೇತನ ಪಾವತಿಸಿಲ್ಲ. ನಿವೃತ್ತಿ ಹೊಂದಿರುವವರ 15 ತಿಂಗಳ ವೇತನವನ್ನು ಸಹ ಬಾಕಿ ಉಳಿಸಿಕೊಳ್ಳಲಾಗಿದೆ. ಪಂಚಾಯಿತಿಯ 22 ಮಂದಿಗೆ ಒಟ್ಟು ₹25 ಲಕ್ಷದಷ್ಟು ವೇತನ ಬಾಕಿ ಉಳಿದಿದೆ. ಬೇರೆಲ್ಲಾ ಕೆಲಸ ಮತ್ತು ಚಟುವಟಿಕೆಗಳಿಗೆ ಖರ್ಚು ಮಾಡಲು ಪಂಚಾಯಿತಿ ಬಳಿ ಹಣವಿದೆ. ಆದರೆ, ನೌಕರರಿಗೆ ಸಂಬಳ ಕೊಡಲು ಮಾತ್ರ ಇಲ್ಲ’ ಎಂದು ವಾಟರ್‌ಮ್ಯಾನ್ ಮಂಚೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಇಒ ಭೇಟಿ: ನೌಕರರ ಅಹೋರಾತ್ರಿ ಧರಣಿ ವಿಷಯ ತಿಳಿದು ತಾ.ಪಂ. ಇಒ ಪೂರ್ಣಿಮಾ ಅವರು ಸ್ಥಳಕ್ಕೆ ಭೇಟಿ ನೀಡಿದರು. ವೇತನ ಪಾವತಿಗೆ ಕ್ರಮ ಕೈಗೊಳ್ಳುತ್ತೇವೆ. ಧರಣಿ ಹಿಂಪಡೆಯಿರಿ ಎಂದು ಮನವೊಲಿಸಲು ಯತ್ನಿಸಿದರು. ಅದಕ್ಕೆ ಜಗ್ಗದ ನೌಕರರು ವೇತನ ಪಾವತಿಸುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಬಳಿಕ ಪೂರ್ಣಿಮಾ ಅವರು, ಸದ್ಯ 2 ತಿಂಗಳ ವೇತನ ಪಾವತಿಸಲಾಗುವುದು. ಉಳಿದಿದ್ದನ್ನು ಮೂರು ತಿಂಗಳೊಳಗೆ ನೀಡಲಾಗುವುದು. ನಿವೃತ್ತಿ ಹೊಂದಿದವರಿಗೆ ಬಾಕಿ ವೇತನವನ್ನು 5 ತಿಂಗಳಿಗೊಮ್ಮೆ ಎರಡು ಕಂತಿನಲ್ಲಿ ಪಾವತಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ, ನೌಕರರು ಧರಣಿ ಹಿಂಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.