
ರಾಮನಗರ: ಸೂರ್ಯ ತನ್ನ ಪಥ ಬದಲಿಸುವ ಮಕರ ಸಂಕ್ರಮಣದ ಶುಭ ದಿನವಾದ ಗುರುವಾರ ಮಕರ ಸಂಕ್ರಾಂತಿ ಹಬ್ಬವನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಡಗರದಿಂದ ಆಚರಿಸಲಾಯಿತು. ಅನ್ನದಾತ ರೈತರ ಹಬ್ಬವಾದ ಇಂದು ಮನೆ–ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು.
ಎಳ್ಳು ಬೆಲ್ಲ ಹಂಚಿಕೆ, ಹಬ್ಬದ ವಿಶೇಷ ಭೋಜನ, ರೈತರ ಕೃಷಿ ಸಂಗಾತಿಗಳಾದ ಜಾನುವಾರುಗಳಿಗೆ ವಿಶೇಷ ಅಲಂಕಾರ, ಭತ್ತ–ರಾಗಿ ಬಣವೆಗಳಿಗೆ ಪೂಜೆ, ಸಂಜೆಯಾಗುತ್ತಿದ್ದಂತೆ ಜಾನುವಾರುಗಳಿಗೆ ಕಿಚ್ಚು ಹಾಯಿಸುವ ವಿವಿಧ ಸಂಭ್ರಮದ ಗಳಿಗೆಗಳಿಗೆ ಸಂಕ್ರಾಂತಿ ಹಬ್ಬವು ಸಾಕ್ಷಿಯಾಯಿತು.
ಹಬ್ಬದ ಪ್ರಯುಕ್ತ ಬೆಳಿಗ್ಗೆಯೇ ಎಲ್ಲಾ ಮನೆಗಳ ಎದುರು ಆಕರ್ಷಕ ರಂಗೋಲಿಗಳು ಗಮನ ಸೆಳೆದವು. ಮನೆ ಮಂದಿ ಹೊಸ ಬಟ್ಟೆ ತೊಟ್ಟು ಸಂಭ್ರಮಿಸಿದರು. ಮನೆಗಳಲ್ಲಿ ವಿಶೇಷ ಪೂಜೆ ಜರುಗಿತು. ಕಬ್ಬು ಸೇರಿದಂತೆ ತಾವು ಬೆಳೆದ ಬೆಳೆಗಳನ್ನಿಟ್ಟು ರೈತರು ಪೂಜೆ ನೆರವೇರಿಸಿದರು. ಪಾಯಸ, ಕರ್ಚಿಕಾಯಿ ಸೇರಿದಂತೆ ವಿವಿಧ ರೀತಿಯ ಹಿಸಿ ತಿನಿಸಿ ಭೋಜನವನ್ನು ಕುಟುಂಬದ ಸದಸ್ಯರು ಹಾಗೂ ಬಂಧುಗಳ ಜೊತೆ ಸವಿದರು.
ಹಳ್ಳಿಗಳ್ಳಿ ಕಿಚ್ಚಿನ ಸಂಭ್ರಮ: ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಸಂಭ್ರಮ ವಿಶೇಷವಾಗಿತ್ತು. ರೈತರು ಜಾನುವಾರುಗಳು ಹಾಗೂ ಕೃಷಿ ಸಲಕರಣೆಗಳನ್ನು ಸ್ವಚ್ಛಗೊಳಿಸಿ ಸಿಂಗರಿಸಿ ಪೂಜಿಸಿದರು. ಸಂಜೆಯಾಗುತ್ತಿದ್ದಂತೆ ಊರಿನ ಮೈದಾನದಲ್ಲಿ ಜಾನುವಾರುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮಿಸಿದರು. ಬೆಂಕಿಯ ಕೆನ್ನಾಲಿಗೆ ಲೆಕ್ಕಿಸದ ಜಾನುವಾರುಗಳು ಕಿಚ್ಚು ಹಾದವು. ಅದನ್ನು ಕಂಡ ಮಕ್ಕಳು ಸಂಭ್ರಮಿಸಿದರು.
ತಾಲ್ಲೂಕಿನ ಹಳ್ಳಿಮಾಳ, ಪಾಲಾಭೋವಿದೊಡ್ಡಿ ಗ್ರಾಮದಲ್ಲಿ ಹಬ್ಬದ ಪ್ರಯುಕ್ತ ಸಂಕ್ರಾಂತಮ್ಮ ದೇವಿಗೆ ವಿಶೇಷ ಪೂಜೆ ಜರುಗಿತು. ಗ್ರಾಮದ ರೈತರು ತಮ್ಮ ಜಾನುವಾರುಗಳನ್ನು ಸಿಂಗರಿಸಿ ಸಂಕ್ರಾಂತಮ್ಮ ದೇವಿ ಸನ್ನಿಧಿಗೆ ಕರೆದೊಯ್ದು ನಮಿಸಿದರು. ಬಳಿಕ, ಸಮೀಪದಲ್ಲೇ ಒಣ ಹುಲ್ಲು ಜೋಡಿಸಿ ಬೆಂಕಿ ಹಚ್ಚಿ, ರಾಸುಗಳಿಗೆ ಕಿಚ್ಚು ಹಾಯಿಸಿದರು.
ಹಬ್ಬದ ಹಿನ್ನೆಲೆಯಲ್ಲಿ ಬೆಳಿಗ್ಗೆ ಎಪಿಎಂಸಿ ಮಾರುಕಟ್ಟೆ, ಹಳೆ ಬಸ್ ನಿಲ್ದಾಣ ವೃತ್ತ, ಮುಖ್ಯರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ವಿವಿಧೆಡೆ ಹಬ್ಬದ ಸಾಮಾಗ್ರಿ ಖರೀದಿಯ ಭರಾಟೆ ಕಂಡುಬಂತು. ಜನರು ಪೂಜೆ ಸಾಮಗ್ರಿ, ಹೂವು, ಹಣ್ಣು, ಮಾವಿನ ಎಲೆ, ಬಾಳೆ ದಿಂಡು, ಕಬ್ಬು, ಎಳ್ಳು, ಬೆಲ್ಲ, ಜಾನುವಾರು ಸಿಂಗರಿಸುವ ವಸ್ತುಗಳು, ತರಕಾರಿ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಿದರು.
ದೇವಾಲಯಗಳಲ್ಲಿ ಭಕ್ತರ ದಂಡು
ಹಬ್ಬದ ಪ್ರಯಕ್ತ ತಾಲ್ಲೂಕು ಹಾಗೂ ನಗರದ ಪ್ರಮುಖ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಎಲ್ಲಾ ದೇವಾಲಯಗಳಲ್ಲಿ ಬೆಳಿಗ್ಗೆಯೇ ವಿಶೇಷ ಪೂಜೆ ಜರುಗಿತು. ನಗರದ ಚಾಮುಂಡೇಶ್ವರಿ ದೇವಸ್ಥಾನ ಬಲಮುರಿ ಗಣಪತಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಪಂಚಮುಖಿ ಆಂಜನೇಯ ದೇವಸ್ಥಾನ ಮಹದೇಶ್ವರ ದೇವಾಲಯ ಬನ್ನಿ ಮಹಾಂಕಾಳಿ ದೇವಸ್ಥಾನ ತಾಲ್ಲೂಕಿನ ರೇವಣ ಸಿದ್ದೇಶ್ವರ ಬೆಟ್ಟ ರಾಮದೇವರ ಬೆಟ್ಟದ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳು ದಿನವಿಡೀ ಭಕ್ತರಿಂದ ತುಂಬಿದ್ದವು. ಸಂಕ್ರಾಂತಿ ಹಬ್ಬದ ಮಹತ್ವ ಸಾರುವ ಹಾಗೂ ದೇವರನ್ನು ಕೊಂಡಾಡುವ ಗೀತೆಗಳು ಅನುರಣಿಸಿದವು. ಬೆಳಿಗ್ಗೆ ಮನೆಯಲ್ಲಿ ಪೂಜೆ ಮುಗಿದ ಬಳಿಕ ಜನರು ಕುಟುಂಬ ಸಮೇತ ದೇವಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಕೆಲ ದೇವಾಲಯಗಳ ಎದುರು ದರ್ಶನಕ್ಕೆ ಮಾರುದ್ದದ ಸರದಿ ಇದ್ದದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.