ADVERTISEMENT

ಭರತನಾಟ್ಯ ಕಲೆ ಉಳಿಸಿ ಬೆಳೆಸಿ

ಶಾಸ್ತ್ರೀಯ ಭರತನಾಟ್ಯ, ಗೀತಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 13:49 IST
Last Updated 21 ಏಪ್ರಿಲ್ 2019, 13:49 IST
ಶ್ರೀರಾಮ ದೇವಾಲಯದ ಅರ್ಚಕ ನರಸಿಂಹ ಭಟ್, ಶ್ರೀರಾಮೋತ್ಸವ ಸಂಕೀರ್ತನಾ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ.ಕೆ. ಕೃಷ್ಣಮೂರ್ತಿ, ಕಾರ್ಯದರ್ಶಿ ಎಚ್.ವಿ. ಶೇಷಾದ್ರಿ ಐಯ್ಯರ್ ಅವರಿಗೆ 'ಪಟ್ಟಾಭಿರಾಮ ಸೇವಾರತ್ನ ಪ್ರಶಸ್ತಿ' ನೀಡಿ ಗೌರವಿಸಲಾಯಿತು
ಶ್ರೀರಾಮ ದೇವಾಲಯದ ಅರ್ಚಕ ನರಸಿಂಹ ಭಟ್, ಶ್ರೀರಾಮೋತ್ಸವ ಸಂಕೀರ್ತನಾ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ.ಕೆ. ಕೃಷ್ಣಮೂರ್ತಿ, ಕಾರ್ಯದರ್ಶಿ ಎಚ್.ವಿ. ಶೇಷಾದ್ರಿ ಐಯ್ಯರ್ ಅವರಿಗೆ 'ಪಟ್ಟಾಭಿರಾಮ ಸೇವಾರತ್ನ ಪ್ರಶಸ್ತಿ' ನೀಡಿ ಗೌರವಿಸಲಾಯಿತು   

ರಾಮನಗರ : ಭಾರತ ಕಲೆ, ಸಂಸ್ಕೃತಿ, ಪರಂಪರೆಗಳ ನಾಡು. ಅದರಲ್ಲಿಯೂ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭರತನಾಟ್ಯ ಕಲೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಉಳಿಸಿ ಬೆಳೆಸುವುದು ಅಗತ್ಯವಾಗಿದೆ ಎಂದು ಸಂಗೀತ ವಿದ್ವಾನ್ ಶಿವಾಜಿರಾವ್ ಹೇಳಿದರು.

ಇಲ್ಲಿನ ಶ್ರೀರಾಮ ದೇವಾಲಯದ ಸೀತಾರಾಮ ಭಜನಾ ಮಂದಿರದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಸಂಜೆ ನಡೆದ ಶಾಸ್ತ್ರೀಯ ಭರತನಾಟ್ಯ, ಗೀತಗಾಯನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ದಕ್ಷಿಣ ಕನ್ನಡ ಭಾಗದಲ್ಲಿ ಭರತನಾಟ್ಯ ಕಲೆಯನ್ನು ಹೆಚ್ಚಾಗಿ ಕಾಣುತ್ತೇವೆ. ಭರತನಾಟ್ಯ ಕಲಿಕೆಯಿಂದ ಮಕ್ಕಳ ಆರೋಗ್ಯ ಸುಧಾರಣೆ ಆಗಲಿದ್ದು, ಸಾಂಸ್ಕೃತಿಕ ಪರಂಪರೆಯೂ ಮುಂದುವರಿಯಲಿದೆ ಎಂದು ತಿಳಿಸಿದರು.

ADVERTISEMENT

ಮನುಷ್ಯನಲ್ಲಿ ಇಚ್ಛಾಶಕ್ತಿ ಇದ್ದರೆ ಏನೆಲ್ಲ ಸಾಧಿಸಬಹುದು ಎಂಬುದನ್ನು ಇತರ ಚಟುವಟಿಕೆಗಳ ಮೂಲಕ ಶಿಕ್ಷಕರು ಚಿಕ್ಕ ಮಕ್ಕಳಿಗೆ ಕಲಿಸಬೇಕು. ಸಂಗೀತ ಹಾಗೂ ನೃತ್ಯ ಕಲೆಯು ಕಲೆ, ಸಾಹಿತ್ಯದ ಹೆಬ್ಬಾಗಿಲಾಗಿದೆ. ಮಕ್ಕಳಲ್ಲಿ ಕಲೆ, ಸಾಂಸ್ಕೃತಿಕತೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದು ತಿಳಿಸಿದರು.

ಶಾಂತಲಾ ಚಾರಿಟಬಲ್ ಟ್ರಸ್ಟಿನ ಕಾರ್ಯದರ್ಶಿ ಕವಿತಾರಾವ್ ಮಾತನಾಡಿ, ಮಕ್ಕಳನ್ನು ಕಲೆಯತ್ತ ನಡೆಸಿ ಬೆಳೆಸಬೇಕು. ಇದರಿಂದ ಮಕ್ಕಳು ಏಕಾಗ್ರತೆ ಹೊಂದಿ ಕಲೆಯಲ್ಲಿ ಬಲಿಷ್ಟವಾಗಲು ಸಾಧ್ಯವಾಗುತ್ತದೆ. ಮಕ್ಕಳ ಮನೋಸ್ಥಿತಿಯನ್ನು ಅರಿಯಲು ಕಲೆ ಬಹುಮುಖ್ಯವಾಗಿದೆ. ನೃತ್ಯ, ಸಂಗೀತ, ನಾಟಕದಂತಹ ಕಲೆಗಳಿಂದ ಪ್ರತಿಯೊಬ್ಬ ಮಗು ಸತ್ಪ್ರಜೆಯಾಗಲು ಸಾದ್ಯ ಎಂದು ತಿಳಿಸಿದರು.

ಕಲೆ ಮಾನವನನ್ನು ದೈವತ್ವದತ್ತ ತೆಗೆದುಕೊಂಡು ಹೋಗುತ್ತದೆ. ಈ ಕಲೆ ಮಕ್ಕಳನ್ನು ಆಸ್ವಾದಿಸಿ, ಮನಸ್ಸು ಪ್ರಫುಲ್ಲವಾಗಿ ಓದಿನ ಕಡೆಗೆ ಮಕ್ಕಳ ಮನಸ್ಸನ್ನು ತುಡಿಯುವಂತೆ, ಮಿಡಿಯುವಂತೆ ಮಾಡುತ್ತದೆ. ಮನಸ್ಸು ತೃಪ್ತಿಯಾಗಿ, ಮನಸ್ಸಿನ ಮೂಲಕ ಶ್ರೀಮಂತನಾಗಲು ಸಾಧ್ಯ ಎಂದು ತಿಳಿಸಿದರು.

ಶ್ರೀಕೃಷ್ಣ ಸೇವಾ ಟ್ಟಸ್ಟಿನ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ ಮಕ್ಕಳ ಶಿಕ್ಷಕರ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂದಿನ ಈ ಮಕ್ಕಳು ದೇಶದ ಬೆನ್ನೆಲುಬು ಪೋಷಕರು ವಿದ್ಯಾಭ್ಯಾಸದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿ ವಸಂತ್ ಕುಮಾರ್, ಮುಖಂಡರಾದ ಶೇಷಗಿರಿ, ಜಯಣ್ಣ, ನಾಗೇಂದ್ರರಾವ್, ಟಿ.ಎಸ್. ಸಿದ್ದೇಗೌಡ, ಗಂಗಾಧರಯ್ಯ, ಬಿ.ಟಿ. ರಾಜೇಂದ್ರ, ನೃತ್ಯ ಕಲಾವಿದೆ ಚಿತ್ರರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.