ADVERTISEMENT

ಸಾವನದುರ್ಗ ಕಾಡು ಉಳಿಸಿ

ಮಾರ್ಕಂಡಪುರಂ ಶ್ರೀನಿವಾಸ್‌ ಮನವಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 13:21 IST
Last Updated 14 ಡಿಸೆಂಬರ್ 2018, 13:21 IST
ಓಹಿಲೇಶ್ವರ ಲಕ್ಷ್ಮಣ್‌ ಅಭಿನಯಿಸಿದ ಬೊಮ್ಮನ ಹಳ್ಳಿ ಕಿಂದರಿ ಜೋಗಿ ನಾಟಕ
ಓಹಿಲೇಶ್ವರ ಲಕ್ಷ್ಮಣ್‌ ಅಭಿನಯಿಸಿದ ಬೊಮ್ಮನ ಹಳ್ಳಿ ಕಿಂದರಿ ಜೋಗಿ ನಾಟಕ   

ಮಾಗಡಿ: ಕುವೆಂಪು ರಚಿಸಿರುವ ಸಾಹಿತ್ಯದ ಕೃತಿಗಳನ್ನು ಓದುವಂತೆ ಯುವಜನತೆಗೆ ಪ್ರೇರೇಪಣೆ ನೀಡಬೇಕು ಎಂದು ಸಾಹಿತಿ ಮಾರ್ಕಂಡಪುರಂ ಶ್ರೀನಿವಾಸ್‌ ಕರೆ ನೀಡಿದರು.

ಕುವೆಂಪು ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮಲೆನಾಡಿನ ದಟ್ಟ ಹಸಿರಿನಲ್ಲಿ ಮಿಂದೆದ್ದ ರಸ ಋಷಿಯ ಹೆಸರಿನಲ್ಲಿ ನಾಡಿನ ವನಸಂಪತ್ತು ರಕ್ಷಿಸಿ, ಮುಂದಿನ ಪೀಳಿಗೆಗೆ ಉಳಿಸುವುದು ಅತಿಮುಖ್ಯವಾಗಿದೆ. ಸಾವನದುರ್ಗದಲ್ಲಿನ ಅರಣ್ಯ ಸಂಪತ್ತು ನಿತ್ಯ ಕರಗುತ್ತಿದೆ. ಕುವೆಂಪು ಕಂಡ ಕನಸು ನನಸು ಮಾಡಲು ಅವರ ಸಾಹಿತ್ಯ ಕೃತಿಗಳ ಅಧ್ಯಯನದ ಜತೆಗೆ ಅವರು ಪ್ರತಿಪಾದಿಸಿದ್ದ ನಿರಂಕುಶಮತಿಗಳಾಗಿ, ವಿಶ್ವಮಾನವ ಸಂದೇಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

‘ವಿಶ್ವಮಾನವ ಕುವೆಂಪು ಅವರನ್ನು ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಎಲ್ಲರೂ ಕುವೆಂಪು ಸಾಹಿತ್ಯ ಕೃತಿಗಳನ್ನು ಓದುವುದರ ಮೂಲಕ ಅನಿಕೇತನರಾಗಬೇಕು’ ಎಂದರು.

ಸಂಸ್ಕೃತ ವಿದ್ವಾಂಸ ಡಾ, ಸಿ.ನಂಜುಂಡಯ್ಯ ಮಾತನಾಡಿ, ‘ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕುವೆಂಪು ಅವರ ಆಶಯಗಳನ್ನು ಜನತೆಯಲ್ಲಿ ಬಿತ್ತಿ ಬೆಳೆಸಲು ಶ್ರಮಿಸುತ್ತಿದೆ. ಮೌಢ್ಯತೆಯನ್ನು ದೂರ ಮಾಡಿ, ವೈಜ್ಞಾನಿಕ ದೃಷ್ಟಿಕೋನವನ್ನು ಬಿತ್ತಿ ಬೆಳೆಸುವುದು. ರೈತಾಪಿ ವರ್ಗದವರ ಪ್ರಗತಿ ಮತ್ತು ಮಕ್ಕಳಲ್ಲಿ ಕುವೆಂಪು ರಚಿಸಿರುವ ಸಾಹಿತ್ಯ, ನಾಟಕ, ಕವನ, ಕಾವ್ಯಗಳನ್ನು ಓದಿಸುವುದನ್ನು ಕಲಿಸಲಾಗುತ್ತಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕ ಎಂ.ರಾಜು ಮಾತನಾಡಿ, ‘ಕೆಲವು ಸಂಘ ಸಂಸ್ಥೆಗಳು ಸಹಾಯಧನಕ್ಕಾಗಿ ಜಗಳ ತೆಗೆಯುತ್ತಿವೆ. ಇನ್ನೂ ಕೆಲವು ಸಂಸ್ಥೆಗಳು ಸಹಾಯಧನ ಪಡೆಯದೆ ಜನಮುಖಿ ಕಾರ್ಯಕ್ರಮ ರೂಪಿಸುತ್ತಿವೆ. ಸಮೃದ್ಧಿ ಗ್ರಾಮಾಭಿವೃದ್ದಿ ಸಂಸ್ಥೆ ಕುವೆಂಪು ನಾಟಕೋತ್ಸವ ಮಾಡುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್‌.ಮಾತನಾಡಿ, ‘ಕುವೆಂಪು ಕಂಡ ವಿಶ್ವಮಾನವ ತತ್ವವನ್ನು ಮಕ್ಕಳಲ್ಲಿ ಬಿತ್ತಿ ಬೆಳೆಸುವುದು ನಮ್ಮೆಲ್ಲರ ಆದ್ಯತೆಯಾಗಿದೆ’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಕಲ್ಪನಾ ಶಿವಣ್ಣ, ಮಲಿಯಪ್ಪನ ಪಾಳ್ಯದ ಧನಂಜಯ, ಲೇಖಕ ಡಿ.ಸಿ.ರಾಮಚಂದ್ರ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಸಿ.ಬಿ.ಅಶೋಕ್‌, ನಟ ಹುಲಿವಾನ ಗಂಗಾಧರಯ್ಯ ವೇದಿಕೆಯಲ್ಲಿದ್ದರು. ಓಹಿಲೇಶ್ವರ ಲಕ್ಷ್ಮಣ್‌ ನಿರ್ದೇಶನದಲ್ಲಿ ಬೊಮ್ಮನ ಹಳ್ಳಿ ಕಿಂದರಿ ಜೋಗಿ ನಾಟಕ ಅಭಿನಯಿಸಲಾಯಿತು. ಶಾಲಾ ಮಕ್ಕಳು, ಶಿಕ್ಷಕರು ಕಿಕ್ಕಿರಿದು ತುಂಬಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.