ADVERTISEMENT

ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಕೆ: BJPಯ ಸಿ.ಟಿ. ರವಿ ವಿರುದ್ಧ ಆಕ್ರೋಶ

ಸವಿತಾ ಸಮಾಜದ ವಿರುದ್ದ ಅವಹೇಳನಕಾರಿ ಪದ ಬಳಕೆ; ಸವಿತಾ ಸಮಾಜ, ಹಿಂದುಳಿದ ಜಾತಿಗಳ ಒಕ್ಕೂಟದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 5:00 IST
Last Updated 5 ನವೆಂಬರ್ 2025, 5:00 IST
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸವಿತಾ ಸಮಾಜದ ಕುರಿತು ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ರಾಮನಗರದ ಐಜೂರು ವೃತ್ತದಲ್ಲಿ ಸವಿತಾ ಸಮಾಜ ಮತ್ತು ಹಿಂದುಳಿದ ಜಾತಿಗಳ ಮಹಾ ಒಕ್ಕೂಟದವರು ಮಂಗಳವಾರ ರವಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸವಿತಾ ಸಮಾಜದ ಕುರಿತು ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ರಾಮನಗರದ ಐಜೂರು ವೃತ್ತದಲ್ಲಿ ಸವಿತಾ ಸಮಾಜ ಮತ್ತು ಹಿಂದುಳಿದ ಜಾತಿಗಳ ಮಹಾ ಒಕ್ಕೂಟದವರು ಮಂಗಳವಾರ ರವಿ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು   

ರಾಮನಗರ: ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಸವಿತಾ ಸಮಾಜದ ವಿರುದ್ದ ಅವಹೇಳನಕಾರಿ ಪದ ಬಳಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ, ಜಿಲ್ಲಾ ಸವಿತಾ ಸಮಾಜ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಸವಿತಾ ಸಮಾಜ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎಸ್. ಮುತ್ತುರಾಜ್, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು ನೇತೃತ್ವದಲ್ಲಿ ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪದಾಧಿಕಾರಿಗಳು ಕತ್ತೆಗಳಿಗೆ ರವಿ ಚಿತ್ರವಿರುವ ಪೋಸ್ಟರ್ ಹೊದಿಸಿ, ರವಿ ವಿರುದ್ಧ ಘೋಷಣೆ ಕೂಗಿದರು. ಅವಹೇಳನಕಾರಿ ಪದ ಬಳಕೆಗೆ ಬಹಿರಂಗವಾಗಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮುತ್ತುರಾಜ್, ‘ಸವಿತಾ ಸಮಾಜವು ಜಾತಿ ಮತ್ತು ಧರ್ಮ ನೋಡದೆ ಎಲ್ಲರಿಗೂ ಕ್ಷೌರ ಮಾಡುವ ಶ್ರಮಿಕ ವರ್ಗವಾಗಿದೆ. ಎಲ್ಲರೂ ನಮ್ಮ ಸಮುದಾಯದ ಮುಂದೆ ತಲೆ ಬಾಗಿಸುತ್ತಾರೆ. ಅಂತಹ ಸಮುದಾಯದ ಬಗ್ಗೆ ಸಿ.ಟಿ. ರವಿ ಆಡಿರುವ ಮಾತುಗಳು ಖಂಡನೀಯ. ಮಾಜಿ ಸಚಿವರೂ ಆಗಿರುವ ರವಿ ತಮ್ಮ ಸ್ಥಾನದ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದರು.

ADVERTISEMENT

‘ಜನಪ್ರತಿನಿಧಿಯಾದವನು ಎಲ್ಲಾ ಸಮುದಾಯಗಳನ್ನು ಪ್ರೀತಿ–ವಿಶ್ವಾಸದಿಂದ ಕಾಣಬೇಕು. ಅಪ್ಪಿತಪ್ಪಿಯೂ ಯಾರ ಭಾವನೆಗೂ ನೋವಾಗದಂತೆ ನಡೆ–ನುಡಿಯಲ್ಲಿ ಎಚ್ಚರಿಕೆ ವಹಿಸಬೇಕು. ಆದರೆ, ಕೆಂಪೇಗೌಡರು ಮತ್ತು ಕುವೆಂಪು ಅವರಂತಹ ಮಹನೀಯರು ಜನಿಸಿದ ಒಕ್ಕಲಿಗ ಸಮುದಾಯದವರಾಗಿದ್ದರೂ ಮಾತಿನಲ್ಲಿ ಸಂಸ್ಕಾರವಿಲ್ಲ. ಕೂಡಲೇ ರವಿ ತನ್ನ ತಪ್ಪು ಒಪ್ಪಿಕೊಂಡು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ರೈಡ್ ನಾಗರಾಜ್ ಮಾತನಾಡಿ, ‘ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿ ಮೂರೂ ಬಿಟ್ಟಿರುವ ವ್ಯಕ್ತಿ. ಸಮುದಾಯಗಳು ಮತ್ತು ಅವರ ನಾಯಕರನ್ನು ತುಚ್ಛವಾಗಿ ಕಾಣುವುದನ್ನೇ ಚಾಳಿ ಮಾಡಿಕೊಂಡಿದ್ದಾರೆ. ಸವಿತಾ ಸಮಾಜದ ಕುರಿತು ಅವರು ಬಳಸಿರುವ ಪದವು ಆತನ ಹಿನ್ನೆಲೆ ಎಂತಹದ್ದು ಎಂಬುದನ್ನು ತೋರಿಸುತ್ತದೆ’ ಎಂದು ಆಕ್ರೋಶ ಹೊರಹಾಕಿದರು.

‘ಸವಿತಾ ಸಮಾಜ ಎಂದರೆ ಶುಭದ ಪ್ರತೀಕ. ಯಾವುದೇ ಶುಭ ಕಾರ್ಯ ಈ ಸಮಾಜದವರ ಮಂಗಳವಾದ್ಯವಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಜನಪ್ರತಿನಿಧಿಯಾಗಿದ್ದರೂ ಸಮುದಾಯಗಳ ಮಹತ್ವದ ಬಗ್ಗೆ ಅರಿವಿಲ್ಲದ ರವಿ ವಿರುದ್ದ ಪ್ರಕರಣ ದಾಖಲಿಸಬೇಕು. ಮತದಾರರು ಸಹ ಇಂತಹ ನಾಲಾಯಕ್ ಜನಪ್ರತಿನಿಧಿಗೆ ಮತ ನೀಡದೆ ತಿರಸ್ಕರಿಸಬೇಕು’ ಎಂದರು.

ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಜಿ.ವಿ. ಶ್ರೀನಿವಾಸ್, ಉಪಾಧ್ಯಕ್ಷ ಮುನಿಕೃಷ್ಣ, ಮಾಗಡಿ ತಾಲ್ಲೂಕು ಅಧ್ಯಕ್ಷ ಸುರೇಶ್, ಕನಕಪುರ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ಆರ್.ಪಿ‌. ಲೋಕೇಶ್, ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಯುವ ಘಟಕದ ಅಧ್ಯಕ್ಷ ಜನಾರ್ಧನ್, ಹಾರೋಹಳ್ಳಿ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಮಹಿಳಾ ಘಟಕದ ಶ್ರುತಿ, ಮಂಜುಳಾ, ಅನಿತಾ, ಮುಖಂಡರಾದ ವೆಂಕಟೇಶ್, ರವಿಕುಮಾರ್, ಪ್ರವೀಣ್, ವಿನು ಶಿವಾನಂದ್, ರಮೇಶ್, ಗೋವಿಂದ್ ರಾಜು, ಭರತ್ ಹಾಗೂ ಇತರರು ಇದ್ದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರಿಗೆ ಭಾಷೆ ಮತ್ತು ಸಂಸ್ಕಾರದ ಸಮಸ್ಯೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ–ನುಡಿಯನ್ನು ನೋಡಿ ಕಲಿತುಕೊಳ್ಳಲಿ.
– ಎಂ.ಎಸ್. ಮುತ್ತುರಾಜ್, ಅಧ್ಯಕ್ಷ ಸವಿತಾ ಸಮಾಜ ಅಭಿವೃದ್ಧಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.