ADVERTISEMENT

ಜಿಲ್ಲಾ ಜಾಗೃತಿ ಸಮಿತಿ ಸಭೆ: ಪರಿಶಿಷ್ಟರ ಮೇಲೆ 2024ರಲ್ಲಿ 59 ದೌರ್ಜನ್ಯ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಮೇ 2025, 16:28 IST
Last Updated 13 ಮೇ 2025, 16:28 IST
ರಾಮನಗರದ ಜಿಲ್ಲಾಧಿಕಾರಿ ಕಚೇರಿ  ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಇದ್ದಾರೆ
ರಾಮನಗರದ ಜಿಲ್ಲಾಧಿಕಾರಿ ಕಚೇರಿ  ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮಾತನಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಇದ್ದಾರೆ   

ರಾಮನಗರ: ‘ಜಿಲ್ಲೆಯ ಪರಿಶಿಷ್ಟ ಸಮುದಾಯದವರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ 2024ರಲ್ಲಿ 59 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 6ರಲ್ಲಿ ‘ಬಿ’ ವರದಿ ನೀಡಲಾಗಿದೆ. ಉಳಿದ ಪ್ರಕರಣಗಳು ಪರಿಶೀಲನಾ ಹಂತದಲ್ಲಿವೆ. ಜಿಲ್ಲೆಯಲ್ಲಿ ಸ್ಮಶಾನ ಭೂಮಿಗೆ ಕೊರತೆ ಇಲ್ಲ. ಆದರೆ, ಯಾವುದೇ ಜಾತಿ ಪ್ರತ್ಯೇಕ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಲು ಅವಕಾಶವಿಲ್ಲ’ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ದೌರ್ಜನ್ಯ ಪ್ರತಿಬಂಧಕ) ತಿದ್ದುಪಡಿ ಕಾಯ್ದೆ -2015ರ ಅನುಷ್ಠಾನ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಕೈ ಜೋಡಣೆಗೆ ₹13 ಲಕ್ಷ: ‘ಕನಕಪುರದ ಮಾಳಗಾಳು ಗ್ರಾಮದಲ್ಲಿ 2024ರಲ್ಲಿ ಅನೀಶ್ ಎಂಬ ಯುವಕನ ಕೈ ಹಿಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ₹1.50 ಲಕ್ಷ ಪರಿಹಾರ ಹಾಗೂ ₹2.50 ಲಕ್ಷ ವೈದ್ಯಕೀಯ ವೆಚ್ಚವನ್ನು ಮರು ಪಾವತಿಸಲಾಗಿದೆ. ಕೃತಕ ಕೈ ಜೋಡಿಸಲು ಅಂದಾಜು ₹13.92 ಲಕ್ಷ ಪಾವತಿಸಲು ಕ್ರಮ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ADVERTISEMENT

ಮಾಗಡಿ ಪುರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳನ್ನು ರೋಸ್ಟರ್ ಪ್ರಕಾರ ವಿತರಿಸಿಲ್ಲ ಎಂದು ಸಮಿತಿ ಸದಸ್ಯ ಗೋಪಾಲಕೃಷ್ಣ ದೂರಿದರು. ಅದಕ್ಕೆ ಸ್ಥಳೀಯ ಅಧಿಕಾರಿ, ‘ಒಂದು ಮಳಿಗೆಗೆ ಕೋರ್ಟ್ ತಡೆಯಾಜ್ಞೆ ಇದೆ’ ಎಂದು ಪ್ರತಿಕ್ರಿಯಿಸಿದರು. ಆಗ ಡಿ.ಸಿ, ‘ಉಳಿದ ಅಂಗಡಿಗಳನ್ನು ವಾರದೊಳಗೆ ನಿಯಮಾನುಸಾರ ಹಂಚಿಕೆ ಮಾಡಿ ವರದಿ ನೀಡಿ’ ಎಂದು ಸೂಚನೆ ನೀಡಿದರು.

‘ಕಾನೂನು ಅರಿವು ಮೂಡಿಸಿ’: ‘ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಅನುಭವಿ ವಕೀಲರಿಂದ ಕಾನೂನು ಅರಿವು ಮೂಡಿಸುವ ಜೊತೆಗೆ ನೆರವು ನೀಡಬೇಕು. ಪರಿಶಿಷ್ಟ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಉದ್ಯೋಗಕ್ಕಾಗಿ ವಿಶೇಷ ತರಬೇತಿ ಆಯೋಜಿಸಬೇಕು’ ಎಂದು ಸಮಿತಿ ಸದಸ್ಯ ಚೆಲುವರಾಜು ಒತ್ತಾಯಿಸಿದರು. ಅದಕ್ಕೆ ಡಿ.ಸಿ, ‘ಈ ಕುರಿತು ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದರು.

‘2015ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಗಡಿ ಗ್ರಾಮವಾದ ಚನ್ನಪಟ್ಟಣ ತಾಲ್ಲೂಕಿನ ಮೆಂಗಹಳ್ಳಿ ಗ್ರಾಮದ 430 ಮತದಾರರ ಹೆಸರನ್ನು 7 ಕಿ.ಮೀ. ದೂರದಲ್ಲಿರುವ ಸುಳ್ಳೇರಿ ಗ್ರಾಮದ ಮತದಾರರ ಪಟ್ಟಿಗೆ ಸೇರಿಸಿ ಯಡವಟ್ಟು ಮಾಡಲಾಗಿದೆ. ಪ್ರತ್ಯೇಕ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಮತ್ತು ಅಭಿವೃದ್ಧಿ ವಿಚಾರದಲ್ಲಿ ಹಿಂದಿನಿಂದಲೂ ಅನ್ಯಾಯವಾಗುತ್ತಿದೆ’ ಎಂದು ಅದೇ ಗ್ರಾಮದವರಾದ ಸಮಿತಿ ಸದಸ್ಯ ಮಹೇಶ್ ಒತ್ತಾಯಿಸಿದರು. ‘ಸಮಸ್ಯೆಯನ್ನು ಪರಿಶೀಲಿಸಿ ವರದಿ ನೀಡಿ’ ಎಂದು ಚನ್ನಪಟ್ಟಣ ತಹಶೀಲ್ದಾರ್‌ಗೆ ಡಿ.ಸಿ ಸೂಚಿಸಿದರು.

ಪತ್ತೆಯಾಗದ ದುಷ್ಕರ್ಮಿಗಳು:

ನಗರದ ಗಾಂಧಿನಗರದಲ್ಲಿ ಅಳವಡಿಸಿರುವ ಬೋರ್ಡ್‌ಗಳಲ್ಲಿರುವ ಅಂಬೇಡ್ಕರ್ ಚಿತ್ರಕ್ಕೆ ಗುಟಕಾ ಜಗಿದು ಉಗಿದ ಪ್ರಕರಣ ತನಿಖೆ ಏನಾಯಿತು? ಎಂದು ಸಮಿತಿ ಸದಸ್ಯರು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ‘ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದೆ. ದುಷ್ಕರ್ಮಿಗಳು ವಿದ್ಯುತ್ ಕಡಿತವಾದಾಗ ಕೃತ್ಯ ಎಸಗಿದ್ದಾರೆ. ತನಿಖೆ ನಡೆಯುತ್ತಿದ್ದು ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ಹೇಳಿದರು.

ಹಾರೋಹಳ್ಳಿ ಬಳಿಯ ರುದ್ರಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಪರಿಶಿಷ್ಟ ಸಮುದಾಯದವರಿಗೆ ಅವಕಾಶ ನೀಡುತ್ತಿಲ್ಲ ಎಂದು ಸಮಿತಿ ಸದಸ್ಯ ಶಿವರಾಜು ಸಭೆಯ ಗಮನ ಸೆಳೆದರು. ‘ಈ ಕುರಿತು ಪರಿಶೀಲಿಸಿ, ವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ತರಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಭೂ ದಾಖಲೆಗಳ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.