ADVERTISEMENT

ಅಭಿವೃದ್ಧಿಗೆ ಮಠಗಳ ಕೊಡುಗೆ ಅಪಾರ: ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 13:47 IST
Last Updated 4 ಜನವರಿ 2020, 13:47 IST
ಎಸ್‌ಎನ್‌ ಪಬ್ಲಿಕ್‌ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಮ್ಮಡಿ ನಿರ್ವಾಣಸ್ವಾಮಿ ಮಾತನಾಡಿದರು
ಎಸ್‌ಎನ್‌ ಪಬ್ಲಿಕ್‌ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಮ್ಮಡಿ ನಿರ್ವಾಣಸ್ವಾಮಿ ಮಾತನಾಡಿದರು   

ಕನಕಪುರ: ‘ಮಠಮಾನ್ಯಗಳು ಶೈಕ್ಷಣಿಕ ಕ್ಷೇತ್ರಕ್ಕೆ ಅಮೋಘ ಕೊಡುಗೆಯನ್ನು ಕೊಟ್ಟಿವೆ. ಶ್ರೀಮಠಗಳು ಸಂಸ್ಕಾರಯುಕ್ತ ವಿದ್ಯೆಯನ್ನು ಕಲಿಸುವುದರಿಂದ ಇಲ್ಲಿ ಬೆಳೆದ ಮಕ್ಕಳು ಆದರ್ಶಪ್ರಾಯರಾಗಿ ಇರುತ್ತಾರೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಶಿವಕುಮಾರ್‌ ಹೇಳಿದರು.

ಇಲ್ಲಿನ ಕರಡಿಗುಡ್ಡೆ ಬಳಿಯಿರುವ ದೇಗುಲಮಠ ಶಿಕ್ಷಣ ಸಂಸ್ಥೆಯ ಎಸ್‌ಎನ್‌ ಪಬ್ಲಿಕ್‌ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಹಿಂದಿನ ಕಾಲದಲ್ಲಿ ಈಗಿನಷ್ಟು ಶೈಕ್ಷಣಿಕ ವ್ಯವಸ್ಥೆ, ಅನಕೂಲಗಳು ಇರಲಿಲ್ಲ. ಮಠಗಳೇ ಊಟ ವಸತಿ ನೀಡಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ಕಲಿಸಿಕೊಡುತ್ತಿದ್ದವು. ಆ ಕೆಲಸವನ್ನು ಮಠಗಳು ಮಾಡದಿದ್ದರೆ ಶೈಕ್ಷಣಿಕವಾಗಿ ನಾವು ಸಾಕಷ್ಟು ಹಿಂದೆ ಉಳಿಯುತ್ತಿದ್ದೆವು’ ಎಂದು ಮಠಗಳ ಶೈಕ್ಷಣಿಕ ಕಾರ್ಯವನ್ನು ಶ್ಲಾಘಿಸಿದರು.

ADVERTISEMENT

ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಉಪನ್ಯಾಸಕ ಪಿ.ಕೆ.ರಾಜಶೇಖರ್‌ ಮಾತನಾಡಿ, ತ್ರಿವಿಧ ದಾಸೋಹಗಳ ಮೂಲಕ ಮಠಗಳು ಸಮಾಜವನ್ನು ಮುನ್ನೆಡೆಸಿವೆ. ಎಷ್ಟೋ ಮಕ್ಕಳಿಗೆ ಓದುವ ಅವಕಾಶವೇ ಇರಲಿಲ್ಲ. ಪೋಷಕರ ಮನವೊಲಿಸಿ ಅಂತಹ ಮಕ್ಕಳನ್ನು ಮಠದಲ್ಲೇ ಉಳಿಸಿಕೊಂಡು ಶಿಕ್ಷಣ ಕೊಡಿಸಿದ್ದಾರೆ ಎಂದರು.

ಇಲ್ಲಿ ವ್ಯಾಸಂಗ ಮಾಡಿದವರೆಲ್ಲರೂಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಅಂದು ಮಠಗಳಲ್ಲಿ ಓದುವುದೇ ಒಂದು ಭಾಗ್ಯವಾಗುತ್ತಿತ್ತು. ಕಾಲ ಬದಲಾದಂತೆ ಮಠಗಳಲ್ಲಿ ಮಕ್ಕಳನ್ನು ಓದಿಸಲು ಇಂದಿನ ಪೋಷಕರು ಒಪ್ಪುವುದಿಲ್ಲ. ತಮ್ಮ ಮಕ್ಕಳು ದೊಡ್ಡ ಕಾನ್ವೆಂಟ್‌ಗಳಲ್ಲಿ ಓದಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಮಠವು ಉಚಿತ ಶಿಕ್ಷಣದ ಜತೆಗೆ ಪಬ್ಲಿಕ್‌ ಶಾಲೆಯನ್ನು ತೆರೆದು ಅದರಲ್ಲೂ ಗ್ರಾಮೀಣ ಜನತೆಗೆ ಅನುಕೂಲವಾಗುವಂತೆ ಕಡಿಮೆ ಶುಲ್ಕವನ್ನು ಪಡೆಯುತ್ತಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ದೇಗುಲಮಠದ ಮುಮ್ಮಡಿ ನಿರ್ವಾಣಸ್ವಾಮಿ ಆಶೀರ್ವಚನ ನೀಡಿ, ‘ಬದಲಾದ ಕಾಲದಲ್ಲೂ ಜೀವನದಲ್ಲಿ ಮೌಲ್ಯವನ್ನು ಅಳವಡಿಸಿಕೊಂಡು ಸುಸಂಸ್ಕೃತರಾಗಿ ಬಾಳಬೇಕು. ಇನ್ನೊಬ್ಬರಿಗೆ ತೊಂದರೆ ಕೊಡುವುದು, ಅಸೂಯೆ ಪಡುವುದನ್ನು ಮಾಡಬಾರದು. ಯಾರು ಒಳ್ಳೆಯದನ್ನು ಮಾಡುತ್ತಾರೋ ಖಂಡಿತ ಅವರಿಗೆ ಒಳ್ಳೆಯದೇ ಆಗುತ್ತದೆ’ ಎಂದು ಹಿತವಚನ ನೀಡಿದರು.

ಶಿಕ್ಷಕರ ತರಬೇತಿ ಕೇಂದ್ರದ ಉಪನ್ಯಾಸಕ ಭೀಮಾನಾಯ್ಕ್‌, ದೇಗುಲಮಠದ ಕಾರ್ಯ ನಿರ್ವಾಹಕ ಕಾರ್ಯದರ್ಶಿ ಟಿ.ಬಸವರಾಜು, ಆಡಳಿತಾಧಿಕಾರಿ ಆರ್‌.ರಂಗನಾಥ್‌, ಶಾಲೆಯ ಪ್ರಾಂಶುಪಾಲ ಎ.ಆರ್‌.ಮಮತಶ್ರೀ, ಉಪನ್ಯಾಸಕ ನಾಗೇಂದ್ರ ಉಪಸ್ಥಿತರಿದ್ದರು. ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.