ADVERTISEMENT

ರಾಮನಗರ: ಸದ್ದು ಮಾಡುತ್ತಿದೆ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನ

ಓದೇಶ ಸಕಲೇಶಪುರ
Published 2 ಏಪ್ರಿಲ್ 2025, 5:18 IST
Last Updated 2 ಏಪ್ರಿಲ್ 2025, 5:18 IST
‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನದ ಕುರಿತು, ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ಕ್ಲಸ್ಟರ್ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಟಿ.ಎನ್ ಅವರು ಮಾತನಾಡಿದ ವಿಡಿಯೊ ಫೇಸ್‌ಬುಕ್‌ನಲ್ಲಿ 10 ಲಕ್ಷ ವೀಕ್ಷಣೆಯಾಗಿದೆ
‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನದ ಕುರಿತು, ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ಕ್ಲಸ್ಟರ್ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಟಿ.ಎನ್ ಅವರು ಮಾತನಾಡಿದ ವಿಡಿಯೊ ಫೇಸ್‌ಬುಕ್‌ನಲ್ಲಿ 10 ಲಕ್ಷ ವೀಕ್ಷಣೆಯಾಗಿದೆ   

ರಾಮನಗರ: ಶಾಲಾ ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಗೀಳು ಬಿಡಿಸಲು ತಾಲ್ಲೂಕಿನ ಬನ್ನಿಕುಪ್ಪೆ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಟಿ.ಎನ್ ಆರಂಭಿಸಿರುವ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನಕ್ಕೆ ರಾಜ್ಯದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮೂರೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ವಿದ್ಯಾರ್ಥಿಗಳ ಜೊತೆಗೆ ಪೋಷಕರನ್ನೂ ಒಳಗೊಂಡಿರುವ ಅಭಿಯಾನವು ಕ್ಲಸ್ಟರ್ ವ್ಯಾಪ್ತಿಯ 14 ಶಾಲೆಗಳಲ್ಲಿ ನಡೆಯುತ್ತಿದೆ.

ವಾರಕ್ಕೊಮ್ಮೆ ನಡೆಯುವ ಅಭಿಯಾನವು ವಿದ್ಯಾರ್ಥಿಗಳಲ್ಲಿ ಮೊಬೈಲ್‌ ಬಳಕೆಯನ್ನು ತಗ್ಗಿಸಿ, ಪುಸ್ತಕದತ್ತ ಆಸಕ್ತಿ ಹೊರಳಿಸಿದೆ. ಮಕ್ಕಳಿಗೆ ಮೊಬೈಲ್ ನೀಡದೆ, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರಲ್ಲಿ ಜಾಗೃತಿ ಮೂಡಿಸುವಲ್ಲಿ ಅಭಿಯಾನ ಯಶಸ್ವಿಯಾಗಿದೆ.

ADVERTISEMENT
‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನದಲ್ಲಿ ಪುಸ್ತಕದೊಂದಿಗೆ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರು

ಚಿಕ್ಕವೀರಯ್ಯ ನಡೆಸುತ್ತಿರುವ ಈ ಅಭಿಯಾನದ 1 ನಿಮಿಷ 32 ಸೆಕೆಂಡ್‌ ವಿಡಿಯೊ ತುಣುಕು ಕ್ರಿಯೇಟಿವ್ ಮೈಂಡ್ಸ್ ಎಂಬ ಫೇಸ್‌ಬುಕ್ ಪುಟದಲ್ಲಿ ಹಂಚಿಕೆಯಾಗಿದ್ದು, ಮೂರು ದಿನದಲ್ಲಿ 10 ಲಕ್ಷ ವೀಕ್ಷಣೆ ಕಂಡಿದೆ. 25 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೊ ಲೈಕ್ ಮಾಡಿದ್ದಾರೆ.

ಅಭಿಯಾನಕ್ಕೆ ಕಾರಣ: ‘ಕಲಿಕೆ ಮತ್ತು ಬರಹದಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಮೂಲಭೂತ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ (ಎಫ್‌ಎಲ್‌ಎನ್‌) ಚಟುವಟಿಕೆಗಳ ಬಲವರ್ಧನೆಗೆ ‘ಕಲಿಕಾ ಹಬ್ಬ’ ಕಾರ್ಯಕ್ರಮದಡಿ, ವಿಶೇಷ ತರಗತಿ ಆರಂಭಿಸಿದೆ. ಶಾಲೆಯಲ್ಲಿ ಮಕ್ಕಳ ಪೋಷಕರ ಸಭೆ ನಡೆಸಿದಾಗ, ಮೊಬೈಲ್ ಕಾರಣಕ್ಕೆ ತಮ್ಮ ಮಕ್ಕಳು ಪುಸ್ತಕ ಹಿಡಿಯುತ್ತಿಲ್ಲ ಎಂಬ ಅಸಹಾಯಕತೆಯನ್ನು ಬಹುತೇಕ ಪೋಷಕರು ತೋಡಿಕೊಂಡಿದ್ದರು’ ಎಂದು ಚಿಕ್ಕವೀರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲಿಕಾ ಹಬ್ಬ ಕಾರ್ಯಕ್ರಮದ ಪರಿಣಾಮಕಾರಿ ಜಾರಿ ಜೊತೆಗೆ, ಮಕ್ಕಳಲ್ಲಿ ಮೊಬೈಲ್‌ ಬಳಕೆ ತಗ್ಗಿಸಲು ಪೂರಕವಾಗಿ ‘ಮೊಬೈಲ್ ಬಿಡಿ, ಪುಸ್ತಕ ಹಿಡಿ’ ಅಭಿಯಾನವನ್ನು ಕ್ಲಸ್ಟರ್‌ನ ಶಿಕ್ಷಕರ ಜೊತೆಗೂಡಿ ರೂಪಿಸಲಾಯಿತು. ಪ್ರತಿ ಶನಿವಾರ ಶಾಲಾವಧಿ ಮುಗಿಯುತ್ತಿದ್ದಂತೆ ಮಧ್ಯಾಹ್ನ 12ರಿಂದ 1 ಗಂಟೆವರೆಗೆ ಶಾಲೆಯ ಗ್ರಂಥಾಲಯದಲ್ಲಿ ಒಂದು ತಾಸು ಅಭಿಯಾನ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವಂತೆ ಪೋಷಕರಿಗೂ ತಿಳಿಸುತ್ತೇವೆ. ಹಲವರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ಅಭಿಯಾನದಡಿ ಗ್ರಂಥಾಲಯದಲ್ಲಿ ಪುಸ್ತಕ ಓದುವುದರಲ್ಲಿ ನಿರತ ವಿದ್ಯಾರ್ಥಿಗಳು

ಓದಿನ ಜೊತೆಗೆ ವಿವರಣೆ: ‘ವಿದ್ಯಾರ್ಥಿಗಳು ತಮಗಿಷ್ಟವಾದ ಪುಸ್ತಕವನ್ನು ಒಂದು ತಾಸು ಓದಿ ಕಡೆಗೆ ಆ ಕುರಿತು ತಮಗೆ ಅರ್ಥವಾಗಿದ್ದನ್ನು ಹಂಚಿಕೊಳ್ಳುತ್ತಾರೆ. ಪ್ರತಿ ಶಾಲೆಯಲ್ಲಿ ಇದನ್ನು ತಪ್ಪದೆ ಮಾಡಲಾಗುತ್ತಿದೆ. ಇದರಿಂದಾಗಿ, ಮಕ್ಕಳಲ್ಲಿ ಪುಸ್ತಕದ ಮೇಲಿನ ಆಸಕ್ತಿ ಹೆಚ್ಚಾಗಿ, ಮೊಬೈಲ್ ಆಕರ್ಷಣೆ ಕಡಿಮೆಯಾಗುತ್ತಿದೆ. ಅಭಿಯಾನದ ವಿಡಿಯೊ ತುಣಕನ್ನು ಶಾಲಾ ಮಕ್ಕಳ ಪೋಷಕರ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಳ್ಳುತ್ತೇವೆ. ಅಂತಹ ವಿಡಿಯೊವನ್ನು ಕ್ರಿಯೇಟಿವ್ ಮೈಂಡ್ಸ್ ತಂಡ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡ ಬಳಿಕ, ಅಭಿಯಾನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಮೆಚ್ಚುಗೆ ಹರಿದು ಬರುತ್ತಿದೆ’ ಎಂದು ತಿಳಿಸಿದರು.

‘ವಿಡಿಯೊ ವೀಕ್ಷಿಸಿದ ರಾಜ್ಯದ ವಿವಿಧ ಭಾಗಗಳ ಶಿಕ್ಷಕರು, ವೈದ್ಯರು, ವಕೀಲರು, ಪೋಷಕರು ಸೇರಿದಂತೆ ವಿವಿಧ ಕ್ಷೇತ್ರಗಳ ಜನರು ಅಭಿಯಾನವನ್ನು ಶ್ಲಾಘಿಸಿದ್ದಾರೆ. ಸ್ವಾಮೀಜಿಯೊಬ್ಬರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ಶಿಕ್ಷಕರು ತಮ್ಮ ಶಾಲೆಯಲ್ಲೂ ಅಭಿಯಾನ ಆರಂಭಿಸುವ ಇರಾದೆ ವ್ಯಕ್ತಪಡಿಸಿದ್ದಾರೆ’ ಎಂದು ಚಿಕ್ಕವೀರಯ್ಯ ಸಂತಸ ಹಂಚಿಕೊಂಡರು.

ತಮ್ಮ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡುವುದೇ ಪೋಷಕರಿಗೆ ಸವಾಲಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರನ್ನು ಒಳಗೊಂಡು ಚಿಕ್ಕವೀರಯ್ಯ ಮಾಡುತ್ತಿರುವ ಅಭಿಯಾನವು ಪರಿಣಾಮಕಾರಿಯಾಗಿದೆ
– ಪಿ. ಸೋಮಲಿಂಗಯ್ಯ ಕ್ಷೇತ್ರ ಶಿಕ್ಷಣಾಧಿಕಾರಿ ರಾಮನಗರ

ಸೃಜನಶೀಲತೆ ಕುಗ್ಗಿಸುವ ಮೊಬೈಲ್

‘ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯು ಅವರಲ್ಲಿನ ಸೃಜನಶೀಲತೆಗೆ ದೊಡ್ಡ ಅಡ್ಡಿಯಾಗಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿನ ಆಸಕ್ತಿಯನ್ನು ಕುಂದಿಸುತ್ತಿದೆ. ಶಾಲೆ ಮುಗಿಸಿ ಮನೆಗೆ ಬಂದ ಕೂಡಲೇ ಪೋಷಕರ ಮೊಬೈಲ್‌ ಫೋನ್‌ನೊಂದಿಗೆ ಹಿಡಿಯುವ ಮಕ್ಕಳು ರೀಲ್ಸ್ ಯೂಟ್ಯೂಬ್‌ ಗೇಮ್ ಸಿನಿಮಾಗಳಲ್ಲಿ ಮುಳುಗುತ್ತಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿ ದೃಷ್ಟಿ ದೋಷವು ಹೆಚ್ಚಾಗುತ್ತಿದೆ. ಮಕ್ಕಳನ್ನು ಮೊಬೈಲ್‌ನಿಂದ ಸಂಪೂರ್ಣವಾಗಿ ವಿಮುಖರನ್ನಾಗಿ ಮಾಡಲು ಸಾಧ್ಯವಿಲ್ಲ. ಆದರೆ ಮಾಹಿತಿಗಷ್ಟೇ ಮೊಬೈಲ್ ಬಳಕೆಯನ್ನು ಸೀಮಿತಗೊಳಿಸಿ ಪುಸ್ತಕ ಓದುವಿಕೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ಅಭಿರುಚಿ ಬೆಳೆಸುವುದು ಅಭಿಯಾನದ ಉದ್ದೇಶವಾಗಿದೆ’ ಎಂದು ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.