ADVERTISEMENT

ಬಸ್ ಟಿಕೆಟ್ ದರ ಹೆಚ್ಚಳಕ್ಕೆ ಎಸ್‌ಡಿಪಿಐ ಖಂಡನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 6:05 IST
Last Updated 10 ಜನವರಿ 2025, 6:05 IST
ಸರ್ಕಾರಿ ಬಸ್‌ಗಳಲ್ಲಿ ಟಿಕೆಟ್ ದರ ಹೆಚ್ಚಳ  ಖಂಡಿಸಿ, ಎಸ್‌ಡಿಪಿಐ ಕಾರ್ಯಕರ್ತರು ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು
ಸರ್ಕಾರಿ ಬಸ್‌ಗಳಲ್ಲಿ ಟಿಕೆಟ್ ದರ ಹೆಚ್ಚಳ  ಖಂಡಿಸಿ, ಎಸ್‌ಡಿಪಿಐ ಕಾರ್ಯಕರ್ತರು ರಾಮನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು   

ರಾಮನಗರ: ಸರ್ಕಾರವು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಟಿಕೆಟ್ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದರು. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕರಪತ್ರ ಹಂಚಿದ ಕಾರ್ಯಕರ್ತರು ರಾಜ್ಯ ಸರ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರವು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎಂಡಬ್ಲ್ಯೂಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಸೇರಿದಂತೆ ರಾಜ್ಯದ ಎಲ್ಲ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ಶೇ 15ರಷ್ಟು ಏರಿಕೆ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಅದರಲ್ಲೂ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ನಿತ್ಯ ಓಡಾಡುವವರಿಗೆ ಆರ್ಥಿಕ ಹೊರೆಯಾಗಲಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.

ಜನ ಈಗಾಗಲೇ ಬೆಲೆ ಏರಿಕೆ ಮತ್ತು ಹೆಚ್ಚುತ್ತಿರುವ ಜೀವನ ನಿರ್ವಹಣಾ ವೆಚ್ಚಗಳಿಂದ ಹೈರಾಣಾಗಿದ್ದಾರೆ. ಇದೀಗ ಬಸ್ ಟಿಕೆಟ್ ದರ ಏರಿಕೆ ಮಾಡಿರುವುದರಂದ ಜನರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದಂತಾಗಿದೆ. ದರ ಏರಿಕೆಯಿಂದ ಶಕ್ತಿ ಯೋಜನೆಯ ಫಲಾನುಭವಿ ಮಹಿಳೆಯರಿಗೆ ಹೊರೆಯಾಗದಿದ್ದರೂ, ಪುರುಷರರ ಜೇಬಿಗೆ ಕತ್ತರಿ ಬೀಳಲಿದೆ. ಇದರಿಂದ ಕುಟುಂಬಕ್ಕೆ ಹೊರೆಯಾಗಲಿದೆ ಎಂದರು.

ADVERTISEMENT

ಸರ್ಕಾರವು ದರಗಳನ್ನು ಕಡಿಮೆ ಮಾಡುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು. ಆ ಮೂಲಕ ಜನರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಬಸ್ ಟಿಕೆಟ್ ದರ ಏರಿಕೆ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪಕ್ಷದ ರಾಮನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಮ್ಜದ್ ಶರೀಫ್, ಉಪಾಧ್ಯಕ್ಷ ಮಹಬೂಬ್ ಪಾಷಾ, ಮುಖಂಡ ಅಸಾದುಲ್ಲಾ ಶರೀಫ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.