ADVERTISEMENT

ರಾಮನಗರ ಸೀಲ್‌ಡೌನ್ | ಅಗತ್ಯ ವಸ್ತು ಕೊರತೆ; ಜನರ ಪರದಾಟ

ಮನೆಮನೆಗೆ ಸಾಮಗ್ರಿ ಪೂರೈಕೆಗೆ ವರ್ತಕರ ಹಿಂದೇಟು

ಆರ್.ಜಿತೇಂದ್ರ
Published 7 ಜುಲೈ 2020, 3:31 IST
Last Updated 7 ಜುಲೈ 2020, 3:31 IST
ಸೀಲ್‌ಡೌನ್‌ನಿಂದಾಗಿ ಮಾರುತಿ ನಗರದ ಬೀದಿ ಬಿಕೋ ಎನ್ನುತ್ತಿರುವುದು
ಸೀಲ್‌ಡೌನ್‌ನಿಂದಾಗಿ ಮಾರುತಿ ನಗರದ ಬೀದಿ ಬಿಕೋ ಎನ್ನುತ್ತಿರುವುದು   

ರಾಮನಗರ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಪ್ರಸ್ತುತ 12 ಪ್ರದೇಶಗಳು ಸೀ‌ಲ್‌ಡೌನ್ ಆಗಿವೆ. ಇವುಗಳಲ್ಲಿನ ಜನರಿಗೆ ಅಗತ್ಯ ವಸ್ತು ಪೂರೈಸುವುದೇ ಅಧಿಕಾರಿಗಳಿಗೆ ತಲೆನೋವಾಗಿದೆ.

ದಿನ ಕಳೆದಂತೆ ನಗರದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಉಲ್ಬಣವಾಗುತ್ತಿದೆ. ಹೀಗೆ ಸೋಂಕಿತರು ಕಂಡು ಬಂದ ಪ್ರದೇಶಗಳನ್ನು ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೀಲ್‌ಡೌನ್ ಮಾಡುತ್ತಾ ಬಂದಿದ್ದಾರೆ. ಪ್ರಕರಣಗಳ ಸಂಖ್ಯೆ ಹೆಚ್ಚಾದಂತೆಲ್ಲ ಸೀಲ್‌ಡೌನ್‌ ವ್ಯಾಪ್ತಿಯೂ ಕಿರಿದಾಗುತ್ತಾ ಬರತೊಡಗಿದೆ. ಬಹಳಷ್ಟು ಮಂದಿ ಮನೆಯಲ್ಲಿಯೇ ಕಾಲ ಕಳೆಯುವಂತಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ.‌

ಸೀಲ್‌ಡೌನ್‌ಗೆ ಒಳಗಾದ ಪ್ರದೇಶದ ನಿವಾಸಿಗಳು ಮನೆ ಬಿಟ್ಟು ಹೊರ ಬರುವಂತಿಲ್ಲ. ಈ ಪ್ರದೇಶಗಳಲ್ಲಿನ ಜನರಿಗೆ ಅವರು ಇರುವಲ್ಲಿಯೇ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಬೇಕು ಎಂಬ ನಿಯಮವಿದೆ. ಆದರೆ, ಅನೇಕ ಕಡೆಗಳಲ್ಲಿ ಸಕಾಲಕ್ಕೆ ಜನರಿಗೆ ದಿನಸಿ, ಕುಡಿಯುವ ನೀರು ಸೇರಿದಂತೆ ಅಗತ್ಯ ವಸ್ತುಗಳು ಸಿಗುತ್ತಿಲ್ಲ ಎಂಬ ದೂರುಗಳಿವೆ.

ADVERTISEMENT

ಅಧಿಕಾರಿಗಳು ಹೇಳುವುದೇನು?: ‘ಸೀಲ್‌ಡೌನ್‌ಗೆ ಒಳಪಟ್ಟ ಪ್ರದೇಶದಲ್ಲಿ ಮೊದಲು ಸ್ಯಾನಿಟೈಸ್ ಮಾಡುವ ಜತೆಗೆ ಅಗತ್ಯ ವಸ್ತು ಸರಬರಾಜಿಗೆ ಆದ್ಯತೆ ನೀಡಲಾಗುತ್ತಿದೆ. ಅವರಿಗೆ ಸ್ಥಳೀಯವಾಗಿ ಆಹಾರ, ನೀರು, ಗ್ಯಾಸ್ ಸಿಲಿಂಡರ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲು ವರ್ತಕರನ್ನು ಗುರುತಿಸಿ ಅವರಿಗೆ ಪೊಲೀಸರಿಂದ ಇ-ಪಾಸ್ ಕೊಡಿಸಲಾಗುತ್ತಿದೆ. ಪ್ರತಿ ಪ್ರದೇಶದಲ್ಲೂ ಅಲ್ಲಿನ ನಿವಾಸಿಗಳ ವಾಟ್ಸ್‌ಆ್ಯಪ್ ಗುಂಪು ರಚಿಸಿ ಅಲ್ಲಿಂದಲೇ ದೂರು ಆಲಿಸಲಾಗುತ್ತಿದೆ. ಹೆಚ್ಚಿನ ಬಡಾವಣೆಗಳಲ್ಲಿ ಯಾವುದೇ ಸಮಸ್ಯೆ ಆಗಿಲ್ಲ’ ಎನ್ನುತ್ತಾರೆ ನಗರಸಭೆ ಆಯುಕ್ತೆ ಶುಭಾ.

‘ಮಾರುತಿ ನಗರದಲ್ಲಿ ಜನರಿಗೆ ಅಗತ್ಯ ಸಾಮಗ್ರಿ ಒದಗಿಸಲು ಯಾವ ವರ್ತಕರೂ ಮುಂದೆ ಬಾರದ ಕಾರಣ ಸಮಸ್ಯೆ ಆಗಿದೆ. ಸದ್ಯ ಅಂತಹವರಿಗಾಗಿ ಹುಡುಕಾಟ ನಡೆದಿದೆ. ಸೀಲ್‌ಡೌನ್‌ ಪ್ರದೇಶಗಳಿಗೆ ಅಗತ್ಯ ವಸ್ತು ಪೂರೈಕೆ ಮಾಡುವ ವರ್ತಕರ ಅವಶ್ಯ ಇದೆ. ಅಂತಹವರು ನಗರಸಭೆ ಅಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಅವರಿಗೆ ಪಾಸ್‌ ಸೇರಿದಂತೆ ಅಗತ್ಯವಾದ ಸೌಲಭ್ಯ ಕಲ್ಪಿಸಲಾಗುವುದು ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.