ADVERTISEMENT

ಮಠದ ಆಸ್ತಿ ಮಾರಾಟ: ಬಿಕ್ಕಟ್ಟು ಶಮನ

ಚಿಕ್ಕಕಲ್ಬಾಳ್‌ ಮಠದಲ್ಲಿ ರಂಭಾಪುರಿ ಶ್ರೀಯವರಿಂದ ಸಂಧಾನ ಸಭೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 2:46 IST
Last Updated 17 ಸೆಪ್ಟೆಂಬರ್ 2021, 2:46 IST
ಕನಕಪುರದ ಚಿಕ್ಕಕಲ್ಬಾಳ್‌ ಮಠದಲ್ಲಿ ನಡೆದ ಸಭೆಯಲ್ಲಿ ರಂಭಾಪುರಿ ಶ್ರೀ ಮಾತನಾಡಿದರು
ಕನಕಪುರದ ಚಿಕ್ಕಕಲ್ಬಾಳ್‌ ಮಠದಲ್ಲಿ ನಡೆದ ಸಭೆಯಲ್ಲಿ ರಂಭಾಪುರಿ ಶ್ರೀ ಮಾತನಾಡಿದರು   

ಕನಕಪುರ: ಅನಿವಾರ್ಯ ಸಂದರ್ಭದಲ್ಲಿ ಚಿಕ್ಕಕಲ್ಬಾಳ್‌ ಮಠದ ಶ್ರೀಗಳು ಮಠದ ಒಡೆತನದಲ್ಲಿದ್ದ ಜಮೀನನ್ನು ಮಾರಾಟ ಮಾಡಿದ್ದಾರೆ. ಮುಂದೆ ಇಂತಹದಕ್ಕೆ ಅವಕಾಶ ಕೊಡುವುದಿಲ್ಲ. ಭಕ್ತರೆಲ್ಲರೂ ಮಠದೊಂದಿಗೆ ತಮ್ಮ ಬಾಂಧವ್ಯವನ್ನು ಈ ಹಿಂದಿನಂತೆ ಮುಂದುವರಿಸಿಕೊಂಡು ಹೋಗಬೇಕು’ ಎಂದು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಮನವಿ ಮಾಡಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಚಿಕ್ಕಕಲ್ಬಾಳ್‌ ಮಠದಲ್ಲಿ ಮಠದ ಆಸ್ತಿ ಮಾರಾಟಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಉದ್ಭವವಾಗಿದ್ದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅವರು ಬುಧವಾರ ಮಠದ ಒಳಾಂಗಣದಲ್ಲಿ ಭಕ್ತರೊಂದಿಗೆ ಸಭೆ ನಡೆಸಿ ಮಾತನಾಡಿದರು.

‘ಮಠದ ಅಭಿವೃದ್ಧಿ ಮಾಡಲು ಶಿವಾನಂದ ಶಿವಾಚಾರ್ಯರು ಗೋಶಾಲೆ, ಗೋವುಗಳ ಖರೀದಿ ಮತ್ತಿತರ ಕಾರ್ಯಕ್ಕೆ ಸಾಲ ಮಾಡಿದ್ದರು. ಕೊರೊನಾ ಕಾರಣದಿಂದ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದ್ದರಿಂದ ಅಂತಿಮವಾಗಿ ಜಮೀನನ್ನು ಮಾರಾಟ ಮಾಡುವ ಬಗ್ಗೆ ತಮ್ಮ ಗಮನಕ್ಕೆ ತಂದು, ನಂತರದಲ್ಲಿ ಮಾರಾಟ ಮಾಡಿದ್ದಾರೆ. ಅದು ಮುಗಿದು ಹೋಗಿರುವ ಸಂಗತಿಯಾಗಿದೆ’ ಎಂದರು.

ADVERTISEMENT

‘ಈ ಮಠವು ಪುತ್ರ ಪರಂಪರೆಯ ಮಠವಾಗಿದೆ. ಶ್ರೀಗಳಿಗೆ ತಮ್ಮ ಹಿರಿಯರಿಂದ ಬಂದ ಆಸ್ತಿಯಾಗಿದೆ. ಯಾವುದೆ ದಾನ ದತ್ತಿಯಿಂದ ಬಂದ ಆಸ್ತಿಯಲ್ಲ, ಮೈಸೂರು ಸಂಸ್ಥಾನದಿಂದಲೂ ಬಂದ ಆಸ್ತಿಯಲ್ಲ. ಅವರ ಹಿರಿಯರಿಂದ ಪರಂಪರೆಯಾಗಿ ನಡೆದುಕೊಂಡು ಬಂದಿರುವ ಮಠವಾಗಿದ್ದು ಆಸ್ತಿ ಮಾರಾಟದ ಹಕ್ಕು ಅವರಿಗಿದೆ. ಹಾಗೆಂದು ಮುಂದೆ ಮತ್ತೆ ಆಸ್ತಿ ಮಾರಾಟಕ್ಕೆ ರಂಭಾಪುರ ಪೀಠವು ಅವಕಾಶ ಕೊಡುವುದಿಲ್ಲ’ ಎಂದು ತಿಳಿಸಿದರು.

‘ಶ್ರೀಮಠವು ಸುತ್ತಮುತ್ತಲ ಹತ್ತಾರು ಹಳ್ಳಿ, ಗ್ರಾಮಗಳ ನಿಕಟ ಸಂಪರ್ಕವನ್ನು, ಶಿ‍ಷ್ಯರನ್ನು ಭಕ್ತರನ್ನು ಹೊಂದಿದೆ. ತಲೆ ತಲಾಂತರಿಂದ ಭಕ್ತರು ಈ ಮಠವನ್ನು ಮುನ್ನೆಡೆಸಿಕೊಂಡು ಬಂದಿದ್ದಾರೆ. ಮುಂದೆಯು ಅದೇ ರೀತಿ ಗುರು ಶಿಷ್ಯರ ಬಾಂಧವ್ಯದೊಂದಿಗೆ ಮಠವನ್ನು ಮುನ್ನೆಡೆಸಬೇಕು. ಭಕ್ತರಿಲ್ಲದೆ ಮಠವಿಲ್ಲ. ಭಕ್ತರಿಗಾಗಿ, ಭಕ್ತರ ಸೇವೆಗಾಗಿಯೇ ಈ ಮಠ ಸದಾ ಸಿದ್ಧವಿರುತ್ತದೆ’ ಎಂದು ಹೇಳಿದರು.

‘ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಗಳೆರಡು ಬೇರೆ ಬೇರೆಯಾಗಿವೆ. ರಾಜಕೀಯ ನಿಲುವುಗಳಂತೆ ಧಾರ್ಮಿಕ ಕಾರ್ಯ, ಮಠಗಳ ಕಾರ್ಯವನ್ನು ಗುರುತಿಸಲಾಗದು. ಗುರುಶಿಷ್ಯರ ಪರಂಪರೆಯಂತೆ ಅನಾದಿಕಾಲದಿಂದಲೂ ಮಠಗಳು ಸಮಾಜದಲ್ಲಿ ತಮ್ಮ ಸತ್ಕಾರ್ಯ ನಿರ್ವಹಿಸುತ್ತಾ ಬಂದಿವೆ. ಧರ್ಮ ಪರಂಪರೆಯನ್ನು ಮುನ್ನಡೆಸಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕಿದೆ’ ಎಂದು ತಿಳಿಸಿದರು.

‘ಆಸ್ತಿ ಮಾರಾಟದ ವಿಚಾರದಲ್ಲಿ ಕೆಲವು ಭಕ್ತರಿಗೆ ಭಿನ್ನಾಭಿಪ್ರಾಯವಿರಬಹದು. ಇಂದು ಅವರು ಇಲ್ಲಿಗೆ ಬರದಿರಬಹುದು. ಆದರೆ ಅವರು ನಮ್ಮ ಮನಸ್ಸಿನಲ್ಲಿದ್ದಾರೆ. ಜಮೀನು ಮಾರಾಟದ ಬಿಕ್ಕಟ್ಟನ್ನು ಇಲ್ಲಿಗೆ ಸಮಾಪ್ತಿ ಮಾಡಿ ಮುಂದೆ ಮಠದ ಅಭಿವೃದ್ಧಿಗೆ ಕೈ ಜೋಡಿಸಲಿದ್ದಾರೆ ಎಂಬ ವಿಶ್ವಾಸ ತಮಗಿದೆ’ ಎಂದು ಸಭೆಯನ್ನು ಮುಕ್ತಾಯಗೊಳಿಸಿದರು.

ರೇವಣಸಿದ್ದೇಶ್ವರ ಮಠದ ರಾಜಶೇಖರ ಶಿವಾಚಾರ್ಯ, ಗುರುವಿನಪುರ ಮಠದ ಜಗದೀಶ್ವರ ಶಿವಾಚಾರ್ಯ, ಬಿಡದಿ ಚೌಕಿ ಮಠದ ಹುಚ್ಚಪ್ಪಶ್ರೀ, ಚಿಕ್ಕಕಲ್ಬಾಳು ಮಠದ ಶಿವಾನಂದ ಶಿವಾಚಾರ್ಯ, ಮಠದ ಭಕ್ತರು, ಮುಖಂಡರಾದ ದೇವುರಾ‌ವ್‌ ಜಾದವ್‌, ಗೊಲ್ಲಹಳ್ಳಿ ಸುರೇಶ್‌, ಮುದುವಾಡಿ ನಾಗರಾಜು, ಅಂಗರಳ್ಳಿ ರಮೇಶ್‌, ಸಿದ್ದರಾಜು, ಶಂಭುಲಿಂಗೇಗೌಡ, ಕೃಷ್ಣಪ್ಪ, ಕೈಲಾಸ್‌ ಶಂಕರ್‌, ಕೊಡುಗೆಹಳ್ಳಿ ಮಂಜು, ಚಂದ್ರಶೇಖರಯ್ಯ, ಮಾಗಡಿ ಶಿವಕುಮಾರ್‌, ವಿರೇಶ್‌, ಮುದುವಾಡಿ ಚಂದ್ರಶೇಖರಯ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ 50 ಕ್ಕೂ ಹೆಚ್ಚು ಮಠದ ಭಕ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.