
ಮಾಗಡಿ: ದಿಂಬದಹಳ್ಳಿ ಮಾದೇಗೌಡನ ಜಮೀನಿನ ಹಿಪ್ಪುನೇರಳೆ ತೋಟದಲ್ಲಿ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ 'ಸೆರಿ ಸುವರ್ಣ ಪದ್ಧತಿ' ಕ್ಷೇತ್ರೋತ್ಸವ ನಡೆಯಿತು.
ವಿಜ್ಞಾನಿ ಪ್ರೀತು ಡಿ.ಸಿ ಮಾತನಾಡಿ, ರೇಷ್ಮೆ ತ್ಯಾಜ್ಯವನ್ನು ಹಿಪ್ಪುನೇರಳೆ ತೋಟದ ಸಾಲುಗಳ ನಡುವಿನ ಟ್ರೆಂಚ್‌ನಲ್ಲಿ ಕಾಂಪೋಸ್ಟ್ ಮಾಡಿದರೆ 80-90 ದಿನಗಳಲ್ಲಿ ಪೋಷಕಾಂಶಯುಕ್ತ ಕಾಂಪೋಸ್ಟ್ ಆಗುತ್ತದೆ. ಇದು ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ತೇವಾಂಶ ಕಾಪಾಡುತ್ತದೆ. ಬಾಹ್ಯ ಗೊಬ್ಬರ ಅವಲಂಬನೆ ಮತ್ತು ನೀರಿನ ಬಳಕೆ ಕಡಿಮೆ ಮಾಡುತ್ತದೆ.
ಪದ್ಧತಿಯ ತಾಂತ್ರಿಕತೆ: ಇಳಿಜಾರಿಗೆ ಎದುರಾಗಿ ತೋಟ ವಿಂಗಡಿಸಿ, ಪ್ರತಿ ಎರಡನೇ ಸಾಲು ನಡುವೆ 2x1 ಅಡಿ ಗುಂಡಿ ತೆಗೆಯಬೇಕು. ಗುಂಡಿಯಲ್ಲಿ ರೇಷ್ಮೆ ತ್ಯಾಜ್ಯ, ಹಸಿರೆಲೆ, ಕಾಂಪೋಸ್ಟ್ ಮತ್ತು ಜೈವಿಕ ಗೊಬ್ಬರ ಪದರ ಪದರವಾಗಿ ತುಂಬಬೇಕು. ಉಳಿದ ಸಾಲುಗಳ ಮಣ್ಣನ್ನು ಈ ಗುಂಡಿ ಮೇಲೆ ಭರ್ತಿ ಮಾಡಿ ಎತ್ತರಿಸಿದ ಮಡಿ ಮಾಡಬೇಕು. ಗೊಬ್ಬರ ಹಾಕಿ, ಹೊದಿಕೆ ಮುಚ್ಚಬೇಕು. ಮಳೆನೀರು ಈ ಗುಂಡಿಯಲ್ಲಿ ಸಂಗ್ರಹವಾಗಿ ದೀರ್ಘಕಾಲ ತೇವಾಂಶ ನೀಡುತ್ತದೆ.
ರೈತರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಕೆವಿಕೆ ವಿಜ್ಞಾನಿ ರಾಜೇಂದ್ರ ಪ್ರಸಾದ್ ವೈಜ್ಞಾನಿಕ ತೋಟ ನಿರ್ವಹಣೆ ಪ್ರಾಮುಖ್ಯತೆ ತಿಳಿಸಿದರು.
ರೇಷ್ಮೆ ಇಲಾಖೆ ಅಧಿಕಾರಿ ಪ್ರಕಾಶ್, ಕೃಷಿ ಸಖಿ ಗಿರಿಜಾ, ರೈತ ಮಾದೇಗೌಡ, ಮಾಜಿ ಅಧ್ಯಕ್ಷ ವೆಂಕಟಚಲಯ್ಯ ಸೇರಿದಂತೆ 35ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.