ADVERTISEMENT

ವಿದ್ಯಾರ್ಥಿನಿಗೆ ಕಿರುಕುಳ: ಸಿ.ಆರ್‌.ಪಿ.ಅಮಾನತು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 18:20 IST
Last Updated 2 ಫೆಬ್ರುವರಿ 2019, 18:20 IST
   

ಮಾಗಡಿ: ಇಲ್ಲಿಗೆ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಾಚೇನಹಟ್ಟಿ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿ (ಸಿ.ಆರ್‌.ಪಿ) ರಾಜು ಅವರನ್ನು ಅಮಾನತುಗೊಳಿಸಲಾಗಿದೆ.

ಪೋಷಕರು ನೀಡಿದ್ದ ದೂರಿನ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್‌, ಸ್ಥಳ ಪರಿಶೀಲನೆ ನಡೆಸಿ ಸಲ್ಲಿಸಿದ ವರದಿಯನ್ವಯ ಡಿಡಿಪಿಐ ಗಂಗಮಾರೇಗೌಡ ಈ ಆದೇಶ ಹೊರಡಿಸಿದ್ದಾರೆ.

ಇದೇ ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ ಶಿಕ್ಷಕರಾಗಿದ್ದ ರಾಜು, ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದುದಾಗಿ ವಿದ್ಯಾರ್ಥಿನಿಯರು ದೂರಿದ್ದಾರೆ. ಶುಕ್ರವಾರಶಾಲೆಯ ತಪಾಸಣೆಗೆ ತೆರಳಿದ್ದು, ವಿದ್ಯಾರ್ಥಿನಿಯನ್ನು ಬೆಳಿಗ್ಗೆ 9.45ರ ವೇಳೆಯಲ್ಲಿ ‘ನಲಿ ಕಲಿ’ ಕೊಠಡಿಗೆ ಕರೆದೊಯ್ದು ಕಿರುಕುಳ ನೀಡುತ್ತಿದ್ದುದನ್ನು ವಿದ್ಯಾರ್ಥಿನಿಯೊಬ್ಬಳು ಗಮನಿಸಿದ್ದಳು. ಆಕೆ ಬಾಗಿಲು ಬಡಿದು, ಕೂಗಾಡಿದ್ದಾಳೆ. ಪೋಷಕರು ಸ್ಥಳಕ್ಕೆ ಬರುವ ವೇಳೆಗೆ ರಾಜು ಪರಾರಿಯಾದುದಾಗಿ ತಿಳಿದುಬಂದಿದೆ.

ADVERTISEMENT

ಶನಿವಾರ ಶಾಲೆಯ ಬಳಿ ಪೋಷಕರು ಸೇರಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಬಿಇಒ, ಪೋಷಕರು ಮತ್ತು ವಿದ್ಯಾರ್ಥಿನಿಯರಿಂದ ಮಾಹಿತಿ ಪಡೆದರು. ಪೋಷಕರು ಬಿಇಒ ಕಚೇರಿ ಬಳಿ ಸೇರಿ, ಲೈಂಗಿಕ ಕಿರುಕುಳ ನೀಡಿರುವ ರಾಜು ಅವರನ್ನು ಕರೆಸುವಂತೆ ಆಗ್ರಹಿಸಿದರು.

ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.