ರಾಮನಗರದ ಜಿಲ್ಲಾ ಪಂಚಾಯಿತಿಯ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ. ರಾಜು ಮಾತನಾಡಿದರು
ರಾಮನಗರ: ‘ಶಕ್ತಿ ಯೋಜನೆಯಡಿ ಹಾರೋಹಳ್ಳಿ ಹಾಗೂ ಸಾತನೂರಿನಿಂದ, ಬೆಂಗಳೂರು ಹಾಗೂ ಮಾಗಡಿಯಿಂದ ಕುಣಿಗಲ್‌ಗೆ ಬೆಳಿಗ್ಗೆ 7.30ರಿಂದ 10ರವರೆಗೆ ಹಾಗೂ ಸಂಜೆ ಹೆಚ್ಚುವರಿ ಬಸ್ಸುಗಳನ್ನು ಓಡಿಸಿ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಬೇಕು’ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ. ರಾಜು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿಯ ಮಿನಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಈ ಮಾರ್ಗಗಳಲ್ಲಿ ಬೆಳಗ್ಗೆ 7.30ರಿಂದ 10 ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಸಂಚರಿಸುತ್ತಾರೆ. ಹಾಗಾಗಿ, ಬಸ್ ಸಿಗದೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದರು.
‘ಗೃಹಲಕ್ಷ್ಮಿ ಯೋಜನೆಯಡಿ ಜುಲೈ ತಿಂಗಳ ಸಹಾಯಧನವನ್ನು ಈಗಾಗಲೇ ಜಿಲ್ಲೆಯ ಅರ್ಹ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಉಳಿದೆರಡು ತಿಂಗಳ ಮೊತ್ತವನ್ನು ಕೂಡಲೇ ಪಾವತಿಸಲು ಕ್ರಮ ವಹಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 3.29 ಲಕ್ಷ ಮನೆಗಳಿಗೆ ಉಚಿತವಾಗಿ ವಿದ್ಯುತ್ ನೀಡಲಾಗುತ್ತಿದೆ. ಸೆಪ್ಟೆಂಬರ್ ಅಂತ್ಯಕ್ಕೆ ₹13.87 ಕೋಟಿ ಮೊತ್ತ ಪಾವತಿಸಲಾಗಿದೆ’ ಎಂದು ಹೇಳಿದರು.
‘ಪಡಿತರ ಅಕ್ಕಿಯನ್ನು ಕಳ್ಳ ಸಾಗಣೆ ಮಾಡುವುದು ಕಂಡುಬಂದರೆ ಲಾರಿ ಹಾಗೂ ಸಂಬಂಧಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಬೇಕು. ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಸಂಬಂಧಿಸಿದಂತೆ ಮುಂದಿನ ಪ್ರಗತಿ ಪರಿಶೀಲನ ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಮಾಹಿತಿನ ನೀಡಬೇಕು’ ಎಂದು ನಿರ್ದೇಶನ ನೀಡಿದರು.
‘ಸರ್ಕಾರದ ಮಹತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಲ್ಲೆಯ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಹಾಗೂ ಇಲಾಖೆಗಳು ಶ್ರಮಿಸಬೇಕು. ಯೋಜನೆಗೆ ಅರ್ಹರಿರುವ ಯಾವುದೇ ಫಲಾನುಭವಿಯು ಗ್ಯಾರಂಟಿ ಯೋಜನೆಯಿಂದ ಹೊರಗುಳಿಯಬಾರದು’ ಎಂದರು.
ಜಿ.ಪಂ. ಸಿಇಒ ಅನ್ಮೋನ್ ಜೈನ್, ಉಪ ಕಾರ್ಯದರ್ಶಿ ಧನರಾಜ್, ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ಕೆ.ಎಂ. ಮಹದೇವ್., ಎಸ್.ಸಿ. ಶೇಖರ್, ಶಿವಪ್ರಸಾದ್ ಎಚ್.ಆರ್., ಸಿದ್ದೇಗೌಡ, ಶಂಕರ್, ರಾಮನಗರ ಗ್ಯಾರಂಟಿ ಅಧ್ಯಕ್ಷ ರಾಜು ವಿ.ಎಚ್., ಮಾಗಡಿ ಅಧ್ಯಕ್ಷ ಕೆ.ಆರ್. ಶಿವಣ್ಣ, ಚನ್ನಪಟ್ಟಣ ಅಧ್ಯಕ್ಷ ರಂಗನಾಥ, ಕನಕಪುರ ಅಧ್ಯಕ್ಷ ಕೆ.ಎನ್. ದಿಲೀಪ್, ಹಾರೋಹಳ್ಳಿ ಅಧ್ಯಕ್ಷ ಕೆ.ಟಿ. ಶಿವಮಾದಯ್ಯ, ಸದಸ್ಯರು, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ಜತೆಗೆ ತೊಗರಿಬೇಳೆ, ಅಡುಗೆ ಎಣ್ಣೆ, ಸಕ್ಕರೆ ಮತ್ತು ಉಪ್ಪು ಇರುವ ಇಂದಿರಾ ಆಹಾರ ಕಿಟ್ ನೀಡುವ ಸರ್ಕಾರದ ಪ್ರಸ್ತಾವ ಉತ್ತಮವಾಗಿದೆ. ಇದು ನವೆಂಬರ್ ಅಥವಾ ಡಿಸೆಂಬರ್‌ನಿಂದ ಜಾರಿಗೊಳ್ಳುವ ಸಾಧ್ಯತೆ ಇದೆಕೆ. ರಾಜು, ಅಧ್ಯಕ್ಷ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.