ADVERTISEMENT

ಸನ್ಮಾರ್ಗ ತೋರಿದ ಶಿವಕುಮಾರ ಸ್ವಾಮೀಜಿ: ರಾಜಶೇಖರ ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2025, 6:12 IST
Last Updated 4 ಏಪ್ರಿಲ್ 2025, 6:12 IST
<div class="paragraphs"><p>ರಾಮನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ರಾಮನಗರ ತಾಲ್ಲೂಕು ವೀರಶೈವ ಯುವಕ ಸಂಘ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದಲ್ಲಿ ಗುರುವಾರ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು.&nbsp;&nbsp;</p></div>

ರಾಮನಗರದ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ರಾಮನಗರ ತಾಲ್ಲೂಕು ವೀರಶೈವ ಯುವಕ ಸಂಘ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದಲ್ಲಿ ಗುರುವಾರ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮ ಜರುಗಿತು.  

   

ರಾಮನಗರ: ‘ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಸಮಾಜಕ್ಕೆ ಸನ್ಮಾರ್ಗ ತೋರಿದ ಮಹಾಪುರುಷರು. ಬಡವರ ಪಾಲಿಗೆ ಅನ್ನದಾತರಾಗಿ, ವಿದ್ಯಾರ್ಥಿಗಳ ಪಾಲಿಗೆ ವಿದ್ಯಾದಾತರಾಗಿ ಸಮಾಜಕ್ಕೆ ಉತ್ತಮ ಮಾರ್ಗ ತೋರಿದರು’ ಎಂದು ಅವ್ವೇರಹಳ್ಳಿಯ ರೇವಣಸಿದ್ದೇಶ್ವರ ಬೆಟ್ಟದ ಮಠಾಧ್ಯಕ್ಷ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು.

ನಗರದ ಹಳೆ ಬಸ್ ನಿಲ್ದಾಣದಲ್ಲಿ ರಾಮನಗರ ತಾಲ್ಲೂಕು ವೀರಶೈವ ಯುವಕ ಸಂಘ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ತ್ರಿವಿಧ ದಾಸೋಹ ತತ್ವವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಸ್ವಾಮೀಜಿ ಅನ್ನ, ಅಕ್ಷರ ಹಾಗೂ ಭಕ್ತಿ ದಾಸೋಹವನ್ನು ಶಿರಸಾವಹಿಸಿ ಪಾಲಿಸಿದರು. ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾದುದು. ಅವರ ಕೀರ್ತಿ ಕೇವಲ ರಾಜ್ಯಕ್ಕಷ್ಟೇ ಅಲ್ಲದೆ ಇಡೀ ದೇಶಕ್ಕೆ ಪಸರಿಸಿದೆ. ಅಂತಹವರ ಜನ್ಮದಿನವನ್ನು ನಾವೆಲ್ಲರೂ  ಆಚರಿಸುತ್ತಿರುವುದು ಪುಣ್ಯದ ಕೆಲಸ. ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗಬೇಕು’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಸ್. ಯೋಗಾನಂದ ಮಾತನಾಡಿ, ‘ತಮ್ಮ ಮಠದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಅನ್ನವನ್ನು ಕೊಟ್ಟ ಶಿವಕುಮಾರ ಶ್ರೀಗಳು, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಜ್ಞಾನದ ಬೆಳಕಾಗಿದ್ದಾರೆ. ಮಠದಲ್ಲಿ ಓದಿದವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ’ ಎಂದು ಹೇಳಿದರು.

ರಾಮನಗರ ತಾಲ್ಲೂಕು ವೀರಶೈವ ಯುವಕ ಸಂಘದ ಅಧ್ಯಕ್ಷ ಎಂ.ಆರ್. ಶಿವಕುಮಾರಸ್ವಾಮಿ, ‘ಸ್ವಾಮೀಜಿ ಅವರು ನಮ್ಮಿಂದ ದೈಹಿಕವಾಗಿ ಮಾತ್ರ ದೂರವಾಗಿದ್ದಾರೆ. ಅವರ ತತ್ವಾದರ್ಶಗಳು ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿವೆ. ಅವರ ಆದರ್ಶ ಮತ್ತು ಸಂದೇಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು’ ಎಂದರು.

ಗಣ್ಯರು ಸ್ವಾಮೀಜಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ತಾಲ್ಲೂಕುಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಯ್ಯ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಎಸ್. ಶಂಕರಪ್ಪ, ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪರಮಶಿವಯ್ಯ, ಮುಖಂಡರಾದ ರಾಜಶೇಖರ್, ಎ.ಜೆ. ಸುರೇಶ್, ಸಿ. ನಾಗರಾಜ್, ಆರ್. ರೇವಣ್ಣ, ಬಿಡದಿ ಶಿವಸ್ವಾಮಿ, ಕೆ.ಎಸ್. ರುದ್ರೇಶ್, ವಿಭೂತಿಕೆರೆ ಶಿವಲಿಂಗಯ್ಯ, ಐಜೂರು ಜಗದೀಶ್, ಅಕ್ಕಮಹದೇವಮ್ಮ ಹಾಗೂ ಇತರರು ಇದ್ದರು.

ತ್ರಿವಿಧ ದಾಸೋಹಿಯಾದ ಶಿವಕುಮಾರ ಸ್ವಾಮೀಜಿಯವರು ನಡೆದಾಡುವ ದೇವರು ಎಂದೇ ಪ್ರಸಿದ್ಧರಾದವರು. ಕಲಿಯುಗ ಕಂಡಂತಹ ಮಹಾನ್ ಚೇತನವಾದ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರವು ಅತ್ಯುನ್ನತ ನಾಗರಿಕ ಗೌರವವಾದ ಭಾರತ ರತ್ನ ನೀಡಬೇಕು
ಎಚ್.ಎಸ್. ಯೋಗಾನಂದ ಜಿಲ್ಲಾಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.