ADVERTISEMENT

ವಿವಿಧೆಡೆ ಶಿವರಾತ್ರಿ ಸಂಭ್ರಮ

ಬೆಳಗ್ಗೆಯಿಂದಲೇ ದೇಗುಲಗಳಲ್ಲಿ ಭಕ್ತರ ದಂಡು: ರಾತ್ರಿ ಜಾಗರಣೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 13:11 IST
Last Updated 4 ಮಾರ್ಚ್ 2019, 13:11 IST
ರೇವಣ ಸಿದ್ಧೇಶ್ವರ ಬೆಟ್ಟದ ಮೇಲಿನ ದೇಗುಲದಲ್ಲಿರುವ ಶಿವನ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು
ರೇವಣ ಸಿದ್ಧೇಶ್ವರ ಬೆಟ್ಟದ ಮೇಲಿನ ದೇಗುಲದಲ್ಲಿರುವ ಶಿವನ ಮೂರ್ತಿಯನ್ನು ಹೂವುಗಳಿಂದ ಅಲಂಕರಿಸಲಾಗಿತ್ತು   

ರಾಮನಗರ: ಸೋಮವಾರ ಮಹಾಶಿವರಾತ್ರಿ. ಪರಶಿವನಿಗೆ ಇಷ್ಟವಾದ ರಾತ್ರಿ. ಶಿವನ ಭಕ್ತರು ಇಡೀ ದಿನ ನೆಚ್ಚಿನ ದೈವದ ಆರಾಧನೆಯಲ್ಲಿ ತೊಡಗಿದ್ದರು.

ಮುಂಜಾನೆಯಿಂದಲೇ ಇಲ್ಲಿನ ವಿವಿಧ ಶಿವ ದೇವಾಲಯಗಳಲ್ಲಿ ಭಕ್ತರು ದೇವರ ದರ್ಶನಕ್ಕೆ ಬಂದಿದ್ದರು. ದೇವಾಲಯಗಳಲ್ಲಿ ಘಂಟೆಜಾಗಟೆಗಳ ಸದ್ದು ಮೊಳಗಿದವು. ಭಕ್ತರು ‘ಹರಹರ ಮಹಾದೇವ ಶಂಭೋ ಶಿವಶಂಕರ’ ಎಂದು ಘೋಷಣೆ ಕೂಗಿದರು.

ಈಶ್ವರನ ದೇವಾಲಯಗಳಲ್ಲಿ ರುದ್ರಾಭಿಷೇಕ, ಕ್ಷೀರಾಭಿಷೇಕ, ರುದ್ರಕಲಶ ಸ್ಥಾಪನೆ, ರುದ್ರಹೋಮ, ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು. ಮನೆಮನೆಗಳಲ್ಲಿ ಬಿಲ್ವಪತ್ರೆ ಹಾಗೂ ಹೂ ಗಳಿಂದ ಈಶ್ವರನನ್ನು ಪೂಜಿಸಲಾಯಿತು.

ADVERTISEMENT

ಇಲ್ಲಿನ ಅರ್ಕೇಶ್ವರ ಸ್ವಾಮಿ, ಬಸವೇಶ್ವರಸ್ವಾಮಿ, ಅರ್ಚಕರಹಳ್ಳಿಯ ಮಲ್ಲೇಶ್ವರ, ಮಹದೇಶ್ವರ ಮೊದಲಾದ ದೇವಾಲಯಗಳಲ್ಲಿ ಬೆಳಿಗ್ಗಿನಿಂದಲೇ ಭಕ್ತರ ಸಾಲು ನೆರೆದಿತ್ತು. ಅರ್ಕಾವತಿಯ ದಡದಲ್ಲಿ ಇರುವ ಅರ್ಕೇಶ್ವರ ದೇಗುಲದಲ್ಲಿ ವಿಶೇಷ ಪೂಜೆಗಳು ನಡೆದವು. ಇದೇ ಸಂದರ್ಭ ಶಿವನ ಬೃಹತ್‌ ಮೂರ್ತಿಯ ಉದ್ಘಾಟನೆಯೂ ನೆರವೇರಿತು.

ಇಲ್ಲಿನ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ, ಬಲಮುರಿ ಗಣಪತಿ ದೇವಸ್ಥಾನ, ಸಂಕಷ್ಟಹರ ಗಣಪತಿ ದೇವಸ್ಥಾನ, ಶ್ರೀರಾಮ ದೇವಾಲಯ, ರಾಘವೇಂದ್ರ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಬನ್ನಿ ಮಹಾಂಕಾಳಿ, ಆದಿಶಕ್ತಿ, ಬಿಸಿಲು ಮಾರಮ್ಮ ದೇವಾಲಯ, ವೆಂಕಟೇಶ್ವರಸ್ವಾಮಿ ದೇವಸ್ಥಾನ, ಕನ್ನಿಕಾಪರಮೇಶ್ವರಿ, ಕಾಳಿಕಾಂಬ ದೇವಾಲಯ ಸೇರಿದಂತೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ದೇವಾಲಯಗಳಲ್ಲಿ ಮಹಾಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ಅಲಂಕಾರವನ್ನು ಏರ್ಪಡಿಸಲಾಗಿತ್ತು.

ಶಿವರಾತ್ರಿಯ ವಿಶೇಷವೆಂದರೆ ಇಡೀ ದಿನ ಉಪವಾಸ, ನಂತರ ಇಡೀ ರಾತ್ರಿ ನಿದ್ರೆ ಮಾಡದೆ ಜಾಗರಣೆ ಇರುವ ಕಾರಣ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ ಹವನಗಳು ನಡೆದವು.

ಮಹಾಶಿವರಾತ್ರಿಯ ಅಂಗವಾಗಿ ಹಲವು ದೇವಾಲಯಗಳು ಜಾಗರಣೆ ಉದ್ದೇಶಕ್ಕಾಗಿ ಬೆಳಗಿನ ಜಾವದವರೆಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು.

ಬೆಟ್ಟದಲ್ಲಿ ಭಕ್ತರ ದಂಡು
ಶಿವರಾತ್ರಿ ಅಂಗವಾಗಿ ರೇವಣ ಸಿದ್ಧೇಶ್ವರ ಬೆಟ್ಟದ ಮೇಲಿರುವ ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ದೇವರ ಮೂರ್ತಿಯನ್ನು ಹೂವಿನಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ ಮೆಟ್ಟಿಲುಗಳನ್ನು ಏರಿ, ಬಂಡೆಯೊಳಗಿನ ದೇಗುಲದಲ್ಲಿನ ದೇವರ ಮೂರ್ತಿಗೆ ಪೂಜೆ–ಪ್ರಾರ್ಥನೆ ಸಲ್ಲಿಸಿದರು. ಮುಂಜಾನೆಯಿಂದಲೇ ಜನರ ಉದ್ದನೆಯ ಸಾಲು ನೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.