ADVERTISEMENT

ರಾಮನಗರ | ಕಾಯಕಯೋಗಿ ಶರಣ ಸಿದ್ಧರಾಮ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 5:31 IST
Last Updated 16 ಜನವರಿ 2026, 5:31 IST
ರಾಮನಗರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮ  ಜರುಗಿತು. ಪ್ರಾಧ್ಯಾಪಕ ಡಾ. ರವಿಕುಮಾರ್ ಬಾಗಿ, ಸಾಹಿತ್ಯ ಅಕಾಡೆಮಿ ಸದಸ್ಯ ಕನಕರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ಮುಖಂಡ ಕಿರಣ್ ಹಾಗೂ ಇತರರು ಇದ್ದಾರೆ
ರಾಮನಗರದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮ  ಜರುಗಿತು. ಪ್ರಾಧ್ಯಾಪಕ ಡಾ. ರವಿಕುಮಾರ್ ಬಾಗಿ, ಸಾಹಿತ್ಯ ಅಕಾಡೆಮಿ ಸದಸ್ಯ ಕನಕರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ಮುಖಂಡ ಕಿರಣ್ ಹಾಗೂ ಇತರರು ಇದ್ದಾರೆ   

ರಾಮನಗರ: ಸಾಹಿತ್ಯವನ್ನು ಕೇವಲ ಪಂಡಿತ-ಪಾಮರರಿಗೆ ಸೀಮಿತವಾಗಿಸದೆ, ಎಲ್ಲಾ ಸಮುದಾಯದವರು ಸಾಹಿತ್ಯ ರಚಿಸಬಹುದು ಎಂದು ತಿಳಿಸಿ ಕೊಟ್ಟ ಮಹಾನ್ ಜ್ಞಾನಿ ಶಿವಯೋಗಿ ಸಿದ್ಧರಾಮೇಶ್ವರು. ಬಸವಣ್ಣನ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ನಡೆದ ಈ ಸಾಹಿತ್ಯ ಕ್ರಾಂತಿಯ ಪರಿಣಾಮ ಅಗಾಧ ಎಂದು ಪ್ರಾಧ್ಯಾಪಕ ಡಾ. ರವಿಕುಮಾರ್ ಬಾಗಿ ಬಣ್ಣಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದಲ್ಲಿರುವ ಇಲಾಖೆಯ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮೇಶ್ವರರ ಕಾಲದಲ್ಲಿ ಎಲ್ಲಾ ತಳ ಸಮುದಾಯದವರು ಒಟ್ಟುಗೂಡಿ ವಚನ ರಚಿಸಿದರು.ವಚನ ಚಳುವಳಿ ಇಡಿ ವಿಶ್ವಕ್ಕೆ ಮಾದರಿಯಾಗಿತ್ತು. ಶ್ರೇಷ್ಠ ವಚನಕಾರರಾಗಿದ್ದ ಸಿದ್ಧರಾಮೇಶ್ವರರು ಭಕ್ತಿ ಹಾಗೂ ಕಾಯಕದ ಮೂಲಕ ಸಮಾಜಮುಖಿ ಕಾರ್ಯ  ಕೈಗೊಂಡರು. ಬಸವಣ್ಣ, ಅಲ್ಲಮಪ್ರಭು ಅವರ ಅನುಭವ ಮಂಟಪದಲ್ಲಿ ಸಿದ್ಧರಾಮೇಶ್ವರರು ಹಿರಿಯ ಶರಣರಾಗಿದ್ದರು ಎಂದರು.

ADVERTISEMENT

ಕಾಯಕಕ್ಕೆ ಮಹತ್ವ ನೀಡಿ, ಕೆರೆ–ಕಟ್ಟೆ ಕಟ್ಟಿಸುವ ಮೂಲಕ ರೈತರ ಬದುಕು ಹಸನಾಗಲು ಶ್ರಮಿಸಿದರು. ಆಡು ಮಾತಿನಲ್ಲಿ ಜನರ ಮನಸ್ಸಿಗೆ ನಾಟುವ ರೀತಿ ವಚನ ರಚಿಸಿದ ಅವರು ಸಮಾಜದಲ್ಲಿದ್ದ ಅಂಕುಡೊಂಕು ತಿದ್ದಲು ಯತ್ನಿಸಿದರು ಎಂದು ಹೇಳಿದರು.

ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಕನಕರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್, ಕನ್ನಡ ಕುಮಾರ್, ಗಿರೀಶ್,  ಕಿರಣ್, ಕುಂಬಾಪುರ ಪಾರ್ಥ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.