ರಾಮನಗರ: ‘ರೇಷ್ಮೆ ಇಲಾಖೆ ಆರ್ಥಿಕ ಸಂಕಷ್ಟದಲ್ಲಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ಇಲಾಖೆ ಚೇತರಿಕೆಗೆ ಏನಾದರೂ ಮಾಡೋಣ ಎಂದು ಭರವಸೆ ನೀಡಿದ್ದಾರೆ’ ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.
‘ರೇಷ್ಮೆ ಇಲಾಖೆಯಲ್ಲಿ ಎಲ್ಲವೂ ಸರಿ ಇದೆ ಎನ್ನಲಾರೆ. ಅಧಿಕಾರಿಗಳು, ಸಿಬ್ಬಂದಿ ಕೊರತೆ ಸೇರಿದಂತೆ ನಮ್ಮಲ್ಲೂ ನ್ಯೂನತೆಗಳಿವೆ. ಅದಕ್ಕೆ ಕಾರಣಗಳೂ ಇವೆ. ರೇಷ್ಮೆ ಕೃಷಿಗೆ ಸಂಬಂಧಿಸಿದ ಜಿಲ್ಲೆಗಳ ಶಾಸಕರ ನಿಯೋಗದೊಂದಿಗೆ ಒಮ್ಮೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡೋಣ. ನಂತರ ಹಂತಹಂತವಾಗಿ ಪರಿಹಾರ ಕಂಡುಕೊಳ್ಳೋಣ’ ಎಂದರು.
‘ಹಾಲಿನ ದರವನ್ನು ಏರಿಕೆ ಮಾಡಬೇಕೆಂಬ ಪ್ರಸ್ತಾವ ಸರ್ಕಾರದ ಮುಂದಿದೆ. ಆದರೆ, ಇತ್ತೀಚೆಗೆ ಹಾಲಿನ ಪ್ಯಾಕೆಟ್ ತೂಕ ಮತ್ತು ಅದಕ್ಕೆ ಅನುಗುಣವಾಗಿ ದರದಲ್ಲಿ ಸ್ವಲ್ಪ ಏರಿಕೆ ಮಾಡಲಾಗಿದೆ. ಹಾಗಾಗಿ, ಸ್ವಲ್ಪ ದಿನ ಸುಮ್ಮನಿರೋಣ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಹಾಲಿನ ದರ ಏರಿಕೆ ಮಾಡಿ ಎಂದು ಒತ್ತಾಯಿಸಿದ ರೈತರೊಬ್ಬರ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.