ADVERTISEMENT

ರಾಮನಗರ | ಮಹಿಳೆ ಕೊಲೆ ಪ್ರಕರಣ: 2ನೇ ಆರೋಪಿ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 6:47 IST
Last Updated 24 ಫೆಬ್ರುವರಿ 2026, 6:47 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ರಾಮನಗರ: ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕುಳ್ಳೇಗೌಡನಪಾಳ್ಯದಲ್ಲಿ ನಾಲ್ಕು ದಿನಗಳ ಹಿಂದೆ ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿಯಿಂದಲೇ ಕೊಲೆಯಾಗಿದ್ದ ಪತ್ನಿ ಸಿಂಚನಾ (21) ಪ್ರಕರಣಕ್ಕೆ ಸಂಬಂಧಿಸಿದಂತೆ, ಎರಡನೇ ಆರೋಪಿಯನ್ನು ಬಂಧಿಸಬೇಕು ಎಂದು ಮೃತ ಮಹಿಳೆಯ ಕುಟುಂಬದವರು ಒತ್ತಾಯಿಸಿದ್ದಾರೆ.

ADVERTISEMENT

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರನ್ನು ಸಿಂಚನಾ ಅವರ ಅಣ್ಣ ಶ್ರೇಯಸ್ ಹಾಗೂ ತಾತ ಶ್ರೀನಿವಾಸ್ ಅವರು ಸೋಮವಾರ ತಮ್ಮ ವಕೀಲ ಕಾರ್ತಿಕ್ ಅವರೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಕೊಲೆ ಮಾಡಿರುವ ಮೊದಲ ಆರೋಪಿ ರೇಣುಕಯ್ಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹೇಮಾ ಎರಡನೇ ಆರೋಪಿಯಾಗಿದ್ದಾಳೆ. ಆದರೆ, ಪೊಲೀಸರು ರೇಣುಕಯ್ಯನನ್ನು ಮಾತ್ರ ಬಂಧಿಸಿದ್ದಾರೆ. ಕೊಲೆಗೆ ಕುಮ್ಮಕ್ಕು ನೀಡಿದ ಹೇಮಾಳನ್ನು ಬಂಧಿಸಿಲ್ಲ ಎಂದು ಶ್ರೀನಿವಾಸ್ ಮಾಧ್ಯಮದವರೊಂದಿಗೆ ಅಳಲು ತೋಡಿಕೊಂಡರು.

‘ಹೇಮಾ ಕುಟುಂಬ ಪ್ರಭಾವಿಯಾಗಿದೆ. ಹಾಗಾಗಿ, ಆಕೆಯನ್ನು ಬಂಧಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ನನ್ನ ತಂಗಿ ಸಾವಿಗೆ ನ್ಯಾಯ ಸಿಗಬೇಕಾದರೆ ಹೇಮಾಳನ್ನು ಸಹ ಬಂಧಿಸಬೇಕು. ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿ, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು ಎಂದು ಕುಟುಂಬದವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.