ADVERTISEMENT

ಸೀರಳ್ಳ ಶುದ್ಧೀಕರಣ ಮರೀಚಿಕೆ

ಭಕ್ಷಿ ಕೆರೆ ಕೋಡಿ ಬಿದ್ದರೆ ಅಕ್ಕಪಕ್ಕದ ನಿವಾಸಿಗಳಿಗೆ ಸಂಕಷ್ಟ; ಒಳಚರಂಡಿ ನೀರು ಹರಿದು ಹಳ್ಳ ಮಲಿನ

ಆರ್.ಜಿತೇಂದ್ರ
Published 24 ಜೂನ್ 2018, 15:28 IST
Last Updated 24 ಜೂನ್ 2018, 15:28 IST
ರಾಮನಗರದ ಅರ್ಕೇಶ್ವರ ಕಾಲೊನಿ ಪಕ್ಕದಲ್ಲಿ ಹರಿದಿರುವ ಸೀರಳ್ಳ
ರಾಮನಗರದ ಅರ್ಕೇಶ್ವರ ಕಾಲೊನಿ ಪಕ್ಕದಲ್ಲಿ ಹರಿದಿರುವ ಸೀರಳ್ಳ   

ರಾಮನಗರ: ಮಳೆ ಬಂದರೆ ನಗರ ಹಾಗೂ ಹಳ್ಳಿಗಾಡಿನ ಮಂದಿಗೆಲ್ಲ ಸಂತಸ. ಆದರೆ ನಗರದ ಸೀರಳ್ಳ ಸುತ್ತಮುತ್ತಲಿನ ಜನರಿಗೆ ಮಾತ್ರ ಆತಂಕ ಶುರುವಾಗುತ್ತದೆ. ಮಳೆ ಪ್ರವಾಹ ಹೆಚ್ಚಿದಷ್ಟೂ ಹಳ್ಳದ ಮಗ್ಗಲಿನ ಮನೆಗಳು ಜಲಾವೃತಗೊಳ್ಳುತ್ತವೆ.


ನಗರದ ವ್ಯಾಪ್ತಿಯಲ್ಲಿ ಹಾದುಹೋಗಿರುವ ಈ ಹಳ್ಳಕ್ಕೆ ಅಲ್ಲಲ್ಲಿ ಒಂದು ಕಡೆ ಮಾತ್ರ ತಡೆಗೋಡೆ ನಿರ್ಮಿಸಲಾಗಿದ್ದು, ಇನ್ನೊಂದು ಕಡೆ ಹಾಗೆಯೇ ಬಿಡಲಾಗಿದೆ. ಹೀಗಾಗಿ ಇಲ್ಲಿ ನೀರಿನ ಮಟ್ಟ ಏರಿದಂತೆಲ್ಲ ಸುತ್ತಲಿನ ನಿವಾಸಿಗಳಿಗೆ ತೊಂದರೆ ಆಗುತ್ತಿದೆ. ಈ ಬಾರಿ ಮಳೆಗಾಲಕ್ಕೆ ಮುನ್ನವಾದರೂ ತಮ್ಮ ಕಷ್ಟಕ್ಕೆ ಮುಕ್ತಿ ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಇಲ್ಲಿನ ನಿವಾಸಿಗಳಿಗೆ ನಿರಾಸೆಯಾಗಿದೆ.


ಹಳ್ಳವು ವರ್ಷಗಳಿಂದಲೂ ಹೂಳಿನಿಂದ ತುಂಬಿ ತುಳುಕುತಿತ್ತು. ಕೆಲವು ತಿಂಗಳ ಹಿಂದೆ ಅದನ್ನು ಸ್ವಚ್ಛಗೊಳಿಸಲಾಗಿದೆ. ಹೀಗಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗಿದೆ. ಆದರೆ ಮಳೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವುದರಿಂದ ಅಕ್ಕಪಕ್ಕದ ಮನೆಗಳಿಗೆ ನುಗ್ಗುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಸುತ್ತಲಿನ ನಿವಾಸಿಗಳು. ಕೆಲವೊಮ್ಮೆ ಸತ್ತ ಪ್ರಾಣಿಗಳ ದೇಹವೂ ಇದೇ ಹಳ್ಳದಲ್ಲಿ ತೇಲುತ್ತಿದ್ದು, ಜನರು ಮುಜುಗರ ಅನುಭವಿಸುವಂತೆ ಆಗಿದೆ.

ADVERTISEMENT


ಕೊಳಚೆ ನೀರಿನ ತಾಣ: ಜಿಲ್ಲಾ ಕಚೇರಿಗಳ ಸಂಕೀರ್ಣದ ಹಿಂಭಾಗದಲ್ಲಿ ಇರುವ ಭಕ್ಷಿ ಕೆರೆಯ ಕೋಡಿ ನೀರು ಹರಿದು ಹೋಗುವ ಸಲುವಾಗಿ ಈ ಸೀರಳ್ಳವು ನಿರ್ಮಾಣವಾಗಿದೆ. ಕೆರೆಯಿಂದ ಐದಾರು ಕಿಲೊಮೀಟರ್ ಹರಿಯುವ ಹಳ್ಳವು ಅರ್ಕಾವತಿಯ ಒಡಲನ್ನು ಸೇರುತ್ತಿದೆ.


ಭಕ್ಷಿ ಕೆರೆ ಹಾಗೂ ಸುತ್ತಲಿನ ಕೆರೆಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದು, ಗುರುತ್ವಾಕರ್ಷಣೆಯ ಬಲದ ಮೂಲಕ ಕ್ರಮೇಣ ಭರ್ತಿಯಾಗುವ ನೈಸರ್ಗಿಕ ವ್ಯವಸ್ಥೆ ಇದೆ. ಮೊದಲಿಗೆ ಮೇಲ್ಬಾಗದಲ್ಲಿ ಇರುವ ಕೇತೋಹಳ್ಳಿ ಕೆರೆಯು ಭರ್ತಿಯಾಗಿ ಅದರ ಕೋಡಿ ನೀರು ಭಕ್ಷಿ ಕೆರೆಯನ್ನು ತಲುಪುತ್ತದೆ. ಅದು ಕೋಡಿ ಬಿದ್ದ ತರುವಾಯ ಸೀರಳ್ಳದಲ್ಲಿ ಪ್ರವಾಹ ಉಂಟಾಗುತ್ತದೆ.


‘ರಾಮನಗರಕ್ಕೆ ಕಾಲುವೆಯ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಸಲುವಾಗಿ ಈ ಹಳ್ಳವನ್ನು ನಿರ್ಮಾಣ ಮಾಡಲಾಗಿತ್ತು. ಸಿಹಿ ನೀರಿನ ಹಳ್ಳ ಎಂದು ಕರೆಯಲ್ಪಡುತ್ತಿದ್ದ ಹಳ್ಳ ಜನರ ಬಾಯಲ್ಲಿ ಸೀರಳ್ಳವಾಯಿತು. ಹಿಂದೆಲ್ಲ ಹೊಲಗಳಿಗೆ ಹೋಗುವವರು ಇದೇ ಹಳ್ಳದ ನೀರು ಕುಡಿದು ಮುಂದೆ ಹೋಗುತ್ತಿದ್ದರು’ ಎಂದು ನೆನಪು ಮಾಡಿಕೊಳ್ಳುತ್ತಾರೆ ಸ್ಥಳೀಯರಾದ ಉಪನ್ಯಾಸಕ ಜಿ. ಶಿವಣ್ಣ.


ನಗರೀಕರಣದ ಘೋರ ಪರಿಣಾಮಕ್ಕೆ ಈ ಹಳ್ಳವೇ ಉದಾಹರಣೆ. ರಾಮನಗರ ಎಕ್ಸ್‌ಟೆನ್ಶನ್ ಪ್ರದೇಶ ನಿರ್ಮಾಣವಾಗಿ ಪಟ್ಟಣ ಬೆಳೆದಂತೆಲ್ಲ ಹಳ್ಳದ ಪಕ್ಕವೇ ಮನೆಗಳು ನಿರ್ಮಾಣವಾದವು. ಮಣ್ಣು–ಮರಳಿಗಾಗಿ ಇದನ್ನು ಬಗೆಯುತ್ತಾ ಹೋಗಲಾಯಿತು. ಈಗ ಹತ್ತಾರು ವಾರ್ಡುಗಳ ಕೊಳಚೆ ನೀರು ಇದೇ ಹಳ್ಳದ ಮೂಲಕ ನದಿ ಸೇರುತ್ತಿದೆ. ಸುತ್ತಲಿನ ಕಸವನ್ನೂ ಅದರ ಒಳಗೆ ಎಸೆಯುತ್ತಿರುವುದರಿಂದ ಇನ್ನಷ್ಟು ಮಲಿನವಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.


ಹಳ್ಳವು ಹೋಗುವ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು. ನಗರದ ವ್ಯಾಪ್ತಿಯಲ್ಲಿ ಚರಂಡಿ ನೀರು ಹಳ್ಳಕ್ಕೆ ಸೇರುವುದನ್ನು ತಪ್ಪಿಸಬೇಕು. ಅದಾಗಬೇಕಾದರೆ ರಾಮನಗರಕ್ಕೆ ಮೊದಲು ಒಳಚರಂಡಿ ವ್ಯವಸ್ಥೆ ನಿರ್ಮಾಣಗೊಳ್ಳಬೇಕು. ಹಳ್ಳ ಮಲಿನಗೊಳಿಸದಂತೆ ಜನಜಾಗೃತಿ ಮೂಡಿಸುವ, ಅದಕ್ಕೆ ಪುನಶ್ಚೇತನ ನೀಡುವ ಕಾರ್ಯ ಆಗಬೇಕು. ಮುಖ್ಯಮಂತ್ರಿಗಳ ಕ್ಷೇತ್ರವಾದ್ದರಿಂದ ಈ ಕೆಲಸ ತ್ವರಿತಗತಿಯಲ್ಲಿ ಆಗಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಆಗ್ರಹವಾಗಿದೆ.


ಮಳೆ ಜೋರಾದರೆ, ಕೆರೆ ಕೋಡಿ ಬಿದ್ದರೆ ಹಳ್ಳದ ಅಕ್ಕಪಕ್ಕದ ಮನೆಗಳು ಜಲಾವೃತಗೊಳ್ಳುತ್ತವೆ. ತಡೆಗೋಡೆ ನಿರ್ಮಿಸುವಂತೆ ಮಾಡಿದ ಮನವಿಗೆ ಯಾರೂ ಸ್ಪಂದಿಸಿಲ್ಲ
- ನವೀನ್,ಅರ್ಕೇಶ್ವರ ಕಾಲೊನಿ ನಿವಾಸಿ

ಸೀರಳ್ಳಕ್ಕೆ ಹರಿಸಲಾಗುತ್ತಿರುವ ಚರಂಡಿ ನೀರನ್ನು ಮೊದಲು ನಿಲ್ಲಿಸಬೇಕು. ಒಳಚರಂಡಿ ನೀರು ಶುದ್ಧೀಕರಿಸಿದ ಬಳಿಕವೇ ಹಳ್ಳ ಇಲ್ಲವೇ ನದಿಗೆ ಬಿಡಬೇಕು
- ಜಿ. ಶಿವಣ್ಣ, ಉಪನ್ಯಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.