ADVERTISEMENT

ಪರಿಶಿಷ್ಟರಿಗೆ ಸಾಮಾಜಿಕ ಬಹಿಷ್ಕಾರ; ದೂರು ಕೊಟ್ಟರೂ ದಾಖಲಾಗದ ಪ್ರಕರಣ!

​ಪ್ರಜಾವಾಣಿ ವಾರ್ತೆ
Published 20 ಮೇ 2025, 16:13 IST
Last Updated 20 ಮೇ 2025, 16:13 IST
ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾರೋಹಳ್ಳಿ ತಾಲ್ಲೂಕಿನ ಬನವಾಸಿ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಕನಕಪುರ ತಾಲ್ಲೂಕಿನ ಸಹಾಯಕ ನಿರ್ದೇಶಕ ಜೈಪ್ರಕಾಶ್ ಮಂಗಳವಾರ ಭೇಟಿ ನೀಡಿ, ಗ್ರಾಮಸ್ಥರು ಹಾಗೂ ದಲಿತ ಮುಖಂಡರೊಂದಿಗೆ ಸಭೆ ನಡೆಸಿದರು  
ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾರೋಹಳ್ಳಿ ತಾಲ್ಲೂಕಿನ ಬನವಾಸಿ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಕನಕಪುರ ತಾಲ್ಲೂಕಿನ ಸಹಾಯಕ ನಿರ್ದೇಶಕ ಜೈಪ್ರಕಾಶ್ ಮಂಗಳವಾರ ಭೇಟಿ ನೀಡಿ, ಗ್ರಾಮಸ್ಥರು ಹಾಗೂ ದಲಿತ ಮುಖಂಡರೊಂದಿಗೆ ಸಭೆ ನಡೆಸಿದರು     

ಹಾರೋಹಳ್ಳಿ (ರಾಮನಗರ): ಗ್ರಾಮದಲ್ಲಿ ನಡೆಯುವ ಮಾರಮ್ಮನ ಹಬ್ಬದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಕೇಳಿದ ತಾಲ್ಲೂಕಿನ ಬನವಾಸಿ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ಒಕ್ಕಲಿಗ ಸಮುದಾಯದವರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಬಹಿಷ್ಕಾರ ಹಾಕಿದ ಬಗ್ಗೆ ಎರಡು ದಿನದ ಹಿಂದೆ ಗ್ರಾಮದಲ್ಲಿ ದಲಿತ ವ್ಯಕ್ತಿಯಿಂದಲೇ ಡಂಗೂರ ಸಾರಿಸಿದ್ದಾರೆ.

ಬಹಿಷ್ಕಾರ ಹಾಕಿದ ಒಕ್ಕಲಿಗ ಸಮುದಾಯದ ಏಳು ಮಂದಿ ವಿರುದ್ಧ ಪರಿಶಿಷ್ಟ ಸಮುದಾಯದವರು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ ಎರಡು ದಿನವಾದರೂ ಇನ್ನೂ ಪ್ರಕರಣ ದಾಖಲಾಗಿಲ್ಲ.

ಗ್ರಾಮದ ಅಂಗಡಿಗಳಲ್ಲಿ ಪರಿಶಿಷ್ಟರಿಗೆ ದಿನಸಿ ಸಾಮಗ್ರಿ ಕೊಡಬಾರದು. ಡೇರಿಗೆ ಹಾಲು ಹಾಕಿಸಿಕೊಳ್ಳಬಾರದು ಮತ್ತು ನೀಡಬಾರದು.  ಕುಡಿಯುವ ನೀರು ಮುಟ್ಟಲು ಬಿಡಬಾರದು ಹಾಗೂ ಕೃಷಿ ಕೆಲಸಗಳಿಗೆ ಪರಿಶಿಷ್ಟ ಸಮುದಾಯದವರನ್ನು ಕರೆಯಬಾರದು ಎಂದು ಒಕ್ಕಲಿಗ ಸಮುದಾಯದವರು ಷರತ್ತು ಹಾಕಿದ್ದರು. ಉಲ್ಲಂಘಿಸಿದವರು ₹10 ಸಾವಿರ ದಂಡ ಕಟ್ಟಬೇಕು ಎಂದು ದಲಿತ ವ್ಯಕ್ತಿಯಿಂದಲೇ ಗ್ರಾಮದಲ್ಲಿ ಡಂಗೂರ ಸಾರಿಸಿದ್ದರು.

ADVERTISEMENT

ಮೇ 18ರಂದು ನಡೆದಿದ್ದ ಘಟನೆ ಕುರಿತು ತಹಶೀಲ್ದಾರ್ ಮತ್ತು ಪೊಲೀಸರಿಗೆ ಪರಿಶಿಷ್ಟ ಸಮುದಾಯದವರು ದೂರು ನೀಡಿ ಎರಡು ದಿನವಾದರೂ ಪ್ರಕರಣ ದಾಖಲಾಗಿಲ್ಲ. ವಿಷಯ ತಿಳಿದು ಗ್ರಾಮಕ್ಕೆ ದಲಿತ ಮುಖಂಡರು ಮಂಗಳವಾರ ಭೇಟಿ ನೀಡುತ್ತಿದ್ದಂತೆಯೇ ಸಮಾಜ ಕಲ್ಯಾಣ ಇಲಾಖೆಯ ಕನಕಪುರ ತಾಲ್ಲೂಕಿನ ಸಹಾಯಕ ನಿರ್ದೇಶಕರು ಸಹ ಗ್ರಾಮಕ್ಕೆ ದೌಡಾಯಿಸಿ ಸಂತ್ರಸ್ತರ ಅಹವಾಲು ಆಲಿಸಿದ್ದಾರೆ.

ಏನಿದು ಘಟನೆ?: ಗ್ರಾಮದಲ್ಲಿ ಮಾರಮ್ಮನ ಹಬ್ಬ ಆಚರಣೆ ಕುರಿತು ಬನವಾಸಿ, ಜುಟ್ಟೇಗೌಡನವಲಸೆ ಹಾಗೂ ವಡೇರಹಳ್ಳಿ ಗ್ರಾಮದ ಮುಖಂಡರ ಸಭೆ ನಡೆದಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಒಕ್ಕಲಿಗ ಸಮುದಾಯದ ಮುಖಂಡರು, ‘ಹಿಂದಿನಿಂದ ನಡೆದುಕೊಂಡು ಬಂದಿರುವಂತೆ ದಲಿತರು ಹಬ್ಬದಲ್ಲಿ ಭಾಗವಹಿಸಬಾರದು’ ಎಂದು ತಾಕೀತು ಮಾಡಿದ್ದರು.

ಅದಕ್ಕೆ ಆಕ್ಷೇಪಿಸಿದ್ದ ಪರಿಶಿಷ್ಟರು, ‘ಹೀಗೆ ಹೇಳುವುದು ಕಾನೂನಿಗೆ ವಿರುದ್ಧವಾಗುತ್ತದೆ. ನಾವು ಸಹ ನಿಮ್ಮೊಂದಿಗೆ ಸಾಮರಸ್ಯದಿಂದ ಹಬ್ಬದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಿ’ ಎಂದಿದ್ದರು. ಇದರಿಂದ ಕೆರಳಿದ ಒಕ್ಕಲಿಗರು ಏಕವಚನದಲ್ಲಿ ನಿಂದಿಸಿದ್ದರು. ಇದರಿಂದ ನೊಂದ ದಲಿತರು ಸಭೆಯಿಂದ ಹೊರನಡೆದಿದ್ದರು.

ಸಭೆ ಮುಗಿದ ಬಳಿಕ ಮೂರು ಗ್ರಾಮಗಳ ಸವರ್ಣೀಯ ಮುಖಂಡರು, ಬನವಾಸಿಯ 12 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಬಳಿಕ ದಲಿತರು ಅದೇ ಗ್ರಾಮದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್ ಸೇರಿದಂತೆ ಏಳು ಮುಖಂಡರ ವಿರುದ್ಧ ತಹಶೀಲ್ದಾರ್ ಮತ್ತು ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.