ADVERTISEMENT

‘ಸಮಾಜ ಸುಧಾರಕ ಸಿದ್ಧಲಿಂಗಯ್ಯ’: ಅಗಲಿದ ಕವಿಗೆ ನುಡಿನಮನ

ಗೀತ ಗಾಯನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 18 ಜುಲೈ 2021, 5:32 IST
Last Updated 18 ಜುಲೈ 2021, 5:32 IST
ಕಾರ್ಯಕ್ರಮವನ್ನು ಸಂಸದ ಡಿ.ಕೆ. ಸುರೇಶ್ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಎಚ್‌.ಸಿ. ಬಾಲಕೃಷ್ಣ, ಜ್ಞಾನಪ್ರಕಾಶ ಸ್ವಾಮೀಜಿ, ಸಿ.ಎಂ. ಲಿಂಗಪ್ಪ, ಕೆ. ರಾಜು ಇದ್ದರು
ಕಾರ್ಯಕ್ರಮವನ್ನು ಸಂಸದ ಡಿ.ಕೆ. ಸುರೇಶ್ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು. ಎಚ್‌.ಸಿ. ಬಾಲಕೃಷ್ಣ, ಜ್ಞಾನಪ್ರಕಾಶ ಸ್ವಾಮೀಜಿ, ಸಿ.ಎಂ. ಲಿಂಗಪ್ಪ, ಕೆ. ರಾಜು ಇದ್ದರು   

ರಾಮನಗರ: ಬಂಡಾಯ ಕವಿ ಸಿದ್ಧಲಿಂಗಯ್ಯ ಅವರು ಬುದ್ಧ, ಬಸವಣ್ಣ, ಅಂಬೇಡ್ಕರ್‌ರಂತಹ ಮಹಾನ್‌ ಸಮಾಜ ಸುಧಾರಕರ ಸಾಲಿಗೆ ಸೇರಿದವರು ಎಂದು ಸಂಸದ ಡಿ.ಕೆ. ಸುರೇಶ್
ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾನ ಮನಸ್ಕರ ವೇದಿಕೆಯು ಶನಿವಾರ ಹಮ್ಮಿಕೊಂಡಿದ್ದ ಕವಿ ಡಾ.ಸಿದ್ಧಲಿಂಗಯ್ಯ ಅವರಿಗೆ ನುಡಿ ನಮನ ಮತ್ತು ಅವರ ಕವಿತೆಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಮಟ್ಟದ ಪ್ರಶಸ್ತಿಗೆ ಕವಿ ಸಿದ್ಧಲಿಂಗಯ್ಯ ಅರ್ಹರಿದ್ದಾರೆ. ಈ ವಿಚಾರದಲ್ಲಿ ತಾವು ರಾಜ್ಯದ ಸಂಸದರ ಜೊತೆ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರ ವನ್ನು ಒತ್ತಾಯಿಸುತ್ತೇನೆ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ, ‘ಸಿದ್ಧಲಿಂಗಯ್ಯ ತಮಗೆ ಆಪ್ತರಾಗಿದ್ದರು. ಬಹಳ ಸರಳಿ ಜೀವಿ. ಮಗುವಿನಂತಹ ಮನಸ್ಸು. ಅವರ ಸಾವಿನ ಸುದ್ದಿ ಕೇಳಿ ಕೆಲಕಾಲ ದಿಗ್ಮೂಢನಾಗಿದ್ದೆ’ ಎಂದು ನೆನೆದರು. ಅವರ ನೆನಪಿನಲ್ಲಿ ಕವನವೊಂದನ್ನು ವಾಚಿಸಿದರು.

ಸಿದ್ಧಲಿಂಗಯ್ಯ ಅವರು ಲೌಕಿಕವಾಗಿ ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಕವಿತೆಯ ಸಾಲುಗಳು ಎಲ್ಲರ ಮನಸ್ಸಿನಲ್ಲಿ ನಾಟಿದ್ದು, ನಮ್ಮೊಡನೆ ಇದ್ದಾರೆ ಎಂದರು.

ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಸಿದ್ಧಲಿಂಗಯ್ಯ ಕೊರಳಿನ ಸಾಹಿತಿಯಾಗಿರಲಿಲ್ಲ. ಕರುಳಿನ ಸಾಹಿತಿಯಾಗಿದ್ದರು. ಜಿಲ್ಲೆಯಲ್ಲಿ ಪ್ರಮುಖ ರಸ್ತೆಯೊಂದಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕು’ ಎಂದು ಒತ್ತಾಯಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಂ, ರಂಗಕರ್ಮಿ ಎ.ಆರ್. ಗೋವಿಂದಸ್ವಾಮಿ, ಸಿದ್ಧಲಿಂಗಯ್ಯ ಅವರ ಪುತ್ರಿ ಡಾ.ಮಾನಸ ಮಾತನಾಡಿದರು. ನುಡಿ ನಮನ ಕಾರ್ಯಕ್ರಮಕ್ಕೆ ಮುನ್ನ ಗಣ್ಯರು ಸಿದ್ಧಲಿಂಗಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂಸದ ಡಿ.ಕೆ. ಸುರೇಶ್ ಡೊಳ್ಳು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಯುವ ಮುಖಂಡ ರಾಂಪುರ ನಾಗೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಸಕ ಎ. ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ನಗರಸಭೆ ಸದಸ್ಯ ಕೆ. ಶೇಷಾದ್ರಿ, ಆರ್.ಪಿ.ಐ ರಾಜ್ಯ ಘಟಕದ ಅಧ್ಯಕ್ಷ ವೆಂಕಟಸ್ವಾಮಿ, ಮಾಜಿ ಶಾಸಕ ಕೆ. ರಾಜು, ಪ್ರಮುಖರಾದ ರಾ.ಸಿ. ದೇವರಾಜ್, ಚೆಲುವರಾಜು, ಶಿವಶಂಕರ್, ಶಿವಕುಮಾರಸ್ವಾಮಿ, ನಾಗರಾಜ್ ಹಾಜರಿದ್ದರು. ಸಿದ್ಧಲಿಂಗಯ್ಯ ಅವರ ಕವನಗಳ ಗಾಯನ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.