ADVERTISEMENT

ಪ್ರಭಾರ ಸಿಇಒ ಗೋವಿಂದೇಗೌಡ ಆಯ್ಕೆಗೆ ತೀವ್ರ ಆಕ್ಷೇಪ: ಸಹಕಾರ ಸಂಘದ ಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2018, 13:24 IST
Last Updated 24 ಸೆಪ್ಟೆಂಬರ್ 2018, 13:24 IST
ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸಭೆಯಲ್ಲಿ ಪೊಲೀಸರ ನಡುವೆಯೆ ಗದ್ದಲ ನಡೆಯಿತು
ಚನ್ನಪಟ್ಟಣ ತಾಲ್ಲೂಕಿನ ಸೋಗಾಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಸಭೆಯಲ್ಲಿ ಪೊಲೀಸರ ನಡುವೆಯೆ ಗದ್ದಲ ನಡೆಯಿತು   

ಚನ್ನಪಟ್ಟಣ: ತಾಲ್ಲೂಕಿನ ಸೋಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸೋಮವಾರ ಕರೆಯಲಾಗಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಆರಂಭಕ್ಕೂ ಮುನ್ನವೇ ರದ್ದುಗೊಳಿಸಿದ ಪ್ರಸಂಗ ನಡೆಯಿತು.

ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ನಿವೃತ್ತಿ ಹೊಂದಿರುವ ಕಾರಣ ಖಾಲಿ ಸ್ಥಾನಕ್ಕೆ ಸಂಘದ ಅಧ್ಯಕ್ಷ ಸಿದ್ದರಾಮು ಅವರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾದ ಪ್ರಭಾರ ಸಿಇಒ ಗೋವಿಂದೇಗೌಡ ಅವರು ಕರೆದಿದ್ದ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಗೋವಿಂದೇಗೌಡ ಮತ್ತು ಉಪಾಧ್ಯಕರು, 5 ಮಂದಿ ನಿರ್ದೇಶಕರು ಉತ್ತರಿಸಲಾಗದೆ ತಬ್ಬಿಬ್ಬಾದರು. ಕಾರಣ, ಅವರಿಗೆ ಸಭೆಯನ್ನು ಕರೆಯುವ ಹಾಗೂ ಸಭೆಯನ್ನು ನಡೆಸುವ ಅಧಿಕಾರ ಇಲ್ಲ ಎಂದು ಸರ್ವ ಸದಸ್ಯರು ತರಾಟೆಗೆ ತೆಗೆದುಕೊಂಡರು. ಬಳಿಕ ಸಭೆಯನ್ನು ರದ್ದುಗೊಳಿಸಲಾಯಿತು.

ಸಭೆಯ ಆರಂಭದಲ್ಲಿ ಸಂಘದ ಸದಸ್ಯ ಎಂ.ಲಿಂಗೇಗೌಡ ಅವರು ಪ್ರಭಾರ ಸಿಇಒ ಗೋವಿಂದೇಗೌಡ ಅವರಿಗೆ ‘ನೀವು ಸಂಘದ ಪ್ರಭಾರ ಸಿಇಒ ಎಂದು ಸಭೆಯನ್ನು ಕರೆದಿದ್ದೀರಿ, ನಿಮಗೆ ಈ ಅಧಿಕಾರ ನೀಡಿರುವವರು ಯಾರು’ ಎಂದು ಪ್ರಶ್ನೆ ಮಾಡಿದರು.

ADVERTISEMENT

ಇದಕ್ಕೆ ಉತ್ತರಿಸಿ ಗೋವಿಂದೇಗೌಡ ‘ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, 5 ಮಂದಿ ನಿರ್ದೇಶಕರು ನನ್ನನ್ನು ಪ್ರಭಾರ ಸಿಇಒ ಮಾಡಿ ಅನುಮೋದನೆ ನೀಡಿದ್ದಾರೆ’ ಎಂದರು.

ಇದಕ್ಕೆ ಲಿಂಗೇಗೌಡ ಅವರು, ‘ನಿಮ್ಮನ್ನು ಆಯ್ಕೆ ಮಾಡಿರುವ ಅಧ್ಯಕ್ಷರ ಅನುಮೋದನೆಗೆ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿದೆ. ನೀವು ಈಗ ಸಂಘದ ನೌಕರ ಅಷ್ಟೇ. ನಿಮಗೆ ಸಭೆಯನ್ನು ಕರೆಯುವ ಹಾಗೂ ಸಭೆಯನ್ನು ನಡೆಸುವ ಅಧಿಕಾರ ಇಲ್ಲ ಎಂದು ದಾಖಲೆಯನ್ನು ನೀಡಿ, ನೀವು ಪ್ರಭಾರ ಸಿಇಒ ಅನ್ನುವುದಕ್ಕೆ ಲಿಖಿತ ದಾಖಲೆ ಇದ್ದರೆ ಸಭೆ ಮಾಡಿ, ಇಲ್ಲವೆ ಸಭೆಯನ್ನು ರದ್ದು ಮಾಡಿ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ತಬ್ಬಿಬ್ಬಾದ ಗೋವಿಂದೇಗೌಡ ಮತ್ತು ನಿರ್ದೇಶಕರು ತಮ್ಮಲ್ಲಿ ಯಾವುದೇ ದಾಖಲೆ ಇಲ್ಲದ ಕಾರಣ ಮೌನಕ್ಕೆ ಶರಣಾದರು. ಬಳಿಕ ಸಂಘದ ನಿರ್ದೇಶಕರು ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆಯನ್ನು ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.

ಆದರೆ ಸದಸ್ಯರು ಸಂಘದ ಸಿಇಒ ಇಲ್ಲ ಎಂದರೆ ಯಾವುದೇ ಸಭೆಯನ್ನು ನಡೆಸಲು ಸಾಧ್ಯವಿಲ್ಲ. ಅದು ಕಾನೂನು ಬಾಹಿರವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲರ ವಿರೋಧದ ನಡುವೆಯೂ ಗೋವಿಂದೇಗೌಡ ಸಭೆಯ ನೋಟಿಸ್ ಓದಲು ಮುಂದಾದಾಗ ಆಕ್ರೋಶಗೊಂಡ ಸದಸ್ಯರು ನೋಟಿಸ್ ಓದದಂತೆ ಗದ್ದಲ ಮಾಡಿದರು. ಈ ವೇಳೆ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಎಚ್ಚೆತ್ತು ಎಲ್ಲರನ್ನು ಶಾಂತಗೊಳಿಸಿ ಸಭೆಯನ್ನು ರದ್ದು ಮಾಡುವಂತೆ ಸೂಚನೆ ನೀಡಿದರು.

ಸಂಘದ ಅಧ್ಯಕ್ಷ ಸಿದ್ದರಾಮು, ಉಪಾಧ್ಯಕ್ಷೆ ಕೆಂಪಾಜಮ್ಮ, ನಿರ್ದೇಶಕರಾದ ಎಲ್.ರವಿಕುಮಾರ್, ಎನ್.ಎಸ್.ಉಮೇಶ್, ಶಶಿಧರ್, ದೊಡ್ಡತಮ್ಮಯ್ಯ, ಚಿಕ್ಕಣ್ಣ, ಗರಕಹಳ್ಳಿ ಕೃಷ್ಣೇಗೌಡ, ಅಂದಾನಿಹೆಗ್ಗಡೆ, ತಿಮ್ಮಮ್ಮ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ್, ಗ್ರಾ.ಪಂ. ಸದಸ್ಯ ಲೋಕೇಶ್, ನೇರಳೂರು ಲಿಂಗೇಗೌಡ, ಕೃಷ್ಣಾಪುರ ಶಿವನಂಜೇಗೌಡ, ಯಾಲಕ್ಕಿಗೌಡ, ಸೋಗಾಲ ಜವರಾಯಿಗೌಡ, ಕುಮಾರ್, ದೇವೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.