ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಾಲಶೆಟ್ಟಿಹಳ್ಳಿಯಲ್ಲಿ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.
ಮಣ್ಣು ಮತ್ತು ನೀರಿನ ಸದ್ಬಳಕೆಯೇ ಕೃಷಿಯ ಒಳಗುಟ್ಟು. ಫಲವತ್ತಾದ ಮಣ್ಣು ಸಸ್ಯಗಳಿಗೆ ಎಲ್ಲಾ ಪೋಷಕಾಂಶಗಳನ್ನು ಪೂರೈಸಬಲ್ಲದು. ಉತ್ಪಾದನಾ ಶಕ್ತಿ ಹೆಚ್ಚಿಸಲು ಸಾವಯವ ಗೊಬ್ಬರ ಬಳಸಿ. ಮಣ್ಣು ಪರೀಕ್ಷೆ ಮಾಡಿಸಿ ಅದರ ಆಧಾರದ ಮೇಲೆ ಬೆಳೆಗಳನ್ನು ಬೆಳೆಯಿರಿ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೀತು ಡಿ.ಸಿ. ತಿಳಿಸಿದರು.
ಸಾಮಾನ್ಯವಾಗಿ ಬೆಳೆಯನ್ನು ಬಿತ್ತುವ ಒಂದು ತಿಂಗಳು ಮೊದಲೇ ಮಣ್ಣು ಪರೀಕ್ಷೆ ಮಾಡಿಸಿ. ಇದರಿಂದ ಮುಂದೆ ಬೆಳೆಯಬೇಕಾದ ಸೂಕ್ತ ಬೆಳೆ ಹಾಗೂ ಉಪಯೋಗಿಸಬೇಕಾದ ಸೂಕ್ತ ಗೊಬ್ಬರಗಳ ಪ್ರಮಾಣ ತಿಳಿಯಬಹುದು ಎಂದರು.
ರೈತರು ಮಣ್ಣಿನ ಮಾದರಿಯನ್ನು ಪರೀಕ್ಷೆಗೆ ಅರ್ಧ ಕೆ.ಜಿ. ಕಳುಹಿಸಿದರೆ ಸಾಕು. ಈ ಮಣ್ಣು 2-3 ಹೆಕ್ಟೇರ್ ಭೂ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಮಣ್ಣಿನ ಮಾದರಿಯನ್ನು ವೈಜ್ಞಾನಿಕ ಶಿಫಾರಸು ಪ್ರಕಾರ ಸಂಗ್ರಹಿಸಬೇಕು ಎಂದರು.
ಕೇಂದ್ರದ ವಿಜ್ಞಾನಿ ಡಾ.ಪ್ರಮೋದ್, ರೈತರು, ಕೇಂದ್ರದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.