ಮಾಗಡಿ: ಮಾಗಡಿಯ ಅವಿಭಾಜ್ಯ ಅಂಗವಾದ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಲು ಇತ್ತೀಚೆಗೆ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ. ಕ್ಷೇತ್ರ ಪುನರ್ ವಿಂಗಡಣೆಯಾದಾಗ ತಾವರೆಕರೆ ಕಳೆದುಕೊಂಡಿದ್ದ ತಾಲ್ಲೂಕಿಗೆ, ಇದೀಗ ಸೋಲೂರು ಸಹ ಕೈ ತಪ್ಪುವ ಹಂತದಲ್ಲಿದೆ.
ಸರ್ಕಾರದ ನಿರ್ಧಾರಕ್ಕೆ ಪರ–ವಿರೋಧದ ಚರ್ಚೆಗಳು ಹೆಚ್ಚಾಗಿವೆ. ಮಾಗಡಿ ಭಾಗದಲ್ಲಿ ದಿನದಿಂದ ದಿನಕ್ಕೆ ವಿರೋಧದ ಕಾವು ಹೆಚ್ಚಾಗುತ್ತಿದೆ. ಮತ್ತೊಂದೆಡೆ ಹೋಬಳಿ ಸೇರ್ಪಡೆ ನಿರ್ಧಾರಕ್ಕೆ ಸೋಲೂರು ಸೇರಿದಂತೆ, ನೆಲಮಂಗಲ ಭಾಗದ ಜನ ಸ್ವಾಗತಿಸಿದ್ದಾರೆ.
ಹೋಬಳಿ ಸೇರ್ಪಡೆ ವಿಷಯವು ಕೇವಲ ಎರಡು ತಾಲ್ಲೂಕಿನ ವಿಷಯವಾಗಿರದೆ, ಎರಡು ಜಿಲ್ಲೆ ಹಾಗೂ ಎರಡು ಲೋಕಸಭಾ ಕ್ಷೇತ್ರಗಳ ನಡುವಣ ವಿಷಯವಾಗಿರುವುದು ಚರ್ಚೆಯನ್ನು ಗರಿಗೆದರಿಸಿದೆ. ಸೇರ್ಪಡೆ ನಿರ್ಧಾರ ರಾಜಕೀಯ ತಿರುವು ಪಡೆದುಕೊಂಡಿದ್ದು, ಜನಪ್ರತಿನಿಧಿಗಳಿಂದಲೂ ಪರ–ವಿರೋಧ ನಿಲುವು ವ್ಯಕ್ತವಾಗುತ್ತಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಸೋಲೂರು ಹೋಬಳಿಯ ಕಂದಾಯ ಮತ್ತು ಆಡಳಿತಾತ್ಮಕ ವ್ಯಾಪ್ತಿ ಮಾಗಡಿ ತಾಲ್ಲೂಕು ಆಗಿದ್ದರೂ, ಅದು ಬರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ. ಲೋಕಸಭಾ
ಕ್ಷೇತ್ರದ ವಿಷಯದಲ್ಲೂ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಒಳಪಡುತ್ತದೆ.
ಪುನರ್ ವಿಂಗಡಣೆ ನೆಪ: 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಮಾಗಡಿ ತಾಲ್ಲೂಕು ಹಾಗೂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಇದ್ದ ಸೋಲೂರನ್ನು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮತ್ತು ತಾವರೆಕೆರೆ ಹೋಬಳಿಯನ್ನು ಯಶವಂತಪುರ ಕ್ಷೇತ್ರಕ್ಕೆ ಸೇರಿಸಲಾಯಿತು.
ಪ್ರತಿಯಾಗಿ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ರಾಮನಗರ ತಾಲ್ಲೂಕಿನ ಬಿಡದಿ ಮತ್ತು ಕೂಟಗಲ್ ಹೋಬಳಿ ಸೇರಿಸಲಾಯಿತು. ಹೋಬಳಿ ಸೇರ್ಪಡೆ ವಿಷಯಕ್ಕೆ ಹಗ್ಗಜಗ್ಗಾಟ ನಡೆಯುತ್ತಿರುವ ಮಾಗಡಿ ಮತ್ತು ನೆಲಮಂಗಲ ಎರಡೂ ಕಡೆ ಕಾಂಗ್ರೆಸ್ ಶಾಸಕರೇ ಇರುವುದು ವಿಶೇಷ.
ವಿರೋಧಿಸದ ಶಾಸಕ: ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವ ಸರ್ಕಾರದ ನಿರ್ಧಾರಕ್ಕೆ ಸ್ಥಳೀಯ ಶಾಸಕ ಎಚ್.ಸಿ. ಬಾಲಕೃಷ್ಣ ಯಾವುದೇ ಪ್ರತಿರೋಧ ತೋರದೆ ಕೈ ಚೆಲ್ಲಿದ್ದಾರೆ. ಹೋಬಳಿ ಸೇರ್ಪಡೆಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಒಲವು ಸಹ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸೇರ್ಪಡೆ ನಿರ್ಧಾರದ ವಿರುದ್ದ ತಾಲ್ಲೂಕಿನಲ್ಲಿ ರೈತ ಸಂಘ, ವಕೀಲರ ಸಂಘ, ಕನ್ನಡಪರ ಸಂಘಟನೆಗಳು, ತಾಲ್ಲೂಕು ಜೆಡಿಎಸ್ ಸೇರಿದಂತೆ ಹಲವರು ನಿಧಾನವಾಗಿ ವಿರೋಧದ ದನಿ ಮೊಳಗಿಸತೊಡಗಿದ್ದಾರೆ. ಇದರಿಂದಾಗಿ, ಬಾಲಕೃಷ್ಣ ಸಹ ತಮ್ಮ ದನಿಯನ್ನು ಸ್ಪಲ್ಪ ಬದಲಾಯಿಸುತ್ತಿದ್ದಾರೆ.
ಜನ ಸಾಥ್ ಕೊಡಲಿಲ್ಲ: ‘ನಾನು ವಿರೋಧಿಸಿದಾಗ ತಾಲ್ಲೂಕಿನ ಜನ ಸಾಥ್ ಕೊಡಲಿಲ್ಲ. ಹಾಗಾಗಿ, ಸುಮ್ಮನಾದೆ. ಹೋಬಳಿ ಉಳಿಸಿಕೊಳ್ಳಲು ಜನ ಹೋರಾಟ ಮಾಡಿದರೆ, ನಾನೂ ಕೈ ಜೋಡಿಸುವೆ’ ಎನ್ನುತ್ತಿದ್ದಾರೆ ಶಾಸಕ ಬಾಲಕೃಷ್ಣ. ಆ ಮೂಲಕ, ತಮ್ಮ ತಾಲ್ಲೂಕಿನ ಹೋಬಳಿ ಕೈ ತಪ್ಪದಂತೆ ತಡೆಯುವ ಹೋರಾಟದ ಮುಂದಾಳತ್ವವನ್ನು ವಹಿಸುವುದಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ.
ತಾಲ್ಲೂಕಿನಲ್ಲಿ ವಿರೋಧಧ ಕಿಚ್ಚು ನಿಧಾನವಾಗಿ ಹೆಚ್ಚುತ್ತಿದೆ. ಅದಕ್ಕೆ ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಶಾಸಕ ಎ. ಮಂಜುನಾಥ್ ಸೇರಿದಂತೆ ಕೆಲವರು ದನಿಯಾಗುತ್ತಿದ್ದಾರೆ. ಹೋಬಳಿ ಸೇರ್ಪಡೆ ವಿರುದ್ಧ ವಕೀಲರು ಹಾಗೂ ವಿವಿಧ ಸಂಘಟನೆಗಳ
ನೇತೃತ್ವದಲ್ಲಿ ರಾಜ್ಯಪಾಲರಿಗೂ ಮನವಿ
ಸಲ್ಲಿಕೆಯಾಗಿದೆ.
ಚುನಾವಣೆಗಳಲ್ಲಿ ಸೋಲೂರಿನವರು ಮತ ಚಲಾಯಿಸುವುದು ನೆಲಮಂಗಲ ಕ್ಷೇತ್ರಕ್ಕಾದರೂ, ಅವರ ಕೆಲಸ–ಕಾರ್ಯಗಳಿಗೆ ಆಸರೆಯಾಗಿರುವುದು ಮಾಗಡಿ ತಾಲ್ಲೂಕು. ಕಂದಾಯ ಹಾಗೂ ಇತರ ಸರ್ಕಾರಿ ಇಖಾಲೆಗಳ ಕೆಲಸಗಳಿಗೆ ಅಲ್ಲಿನ ಜನ ಮಾಗಡಿಯನ್ನೇ ಅವಲಂಬಿಸಿದ್ದಾರೆ.
ಆರ್ಥಿಕ ಚಟುವಟಿಕೆ ಕೇಂದ್ರ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಸೋಲೂರು ಹೋಬಳಿಯಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಿದೆ. ಬಿಪಿಸಿಎಲ್, ಮಠ–ಮಾನ್ಯಗಳು, ಶಿಕ್ಷಣ ಸಂಸ್ಥೆಗಳು ಇಲ್ಲಿದ್ದು, ಉದ್ಯೋಗಾವಕಾಶಗಳು ಸಹ ಹೆಚ್ಚಾಗಿವೆ.
ಈ ಭಾಗದಲ್ಲಿ ದಿನದಿಂದ ದಿನಕ್ಕೆ ರಿಯಲ್ ಎಸ್ಟೇಟ್ ಬೆಳೆಯುತ್ತಿದೆ. ಮತ್ತೊಂದೆಡೆ ನೆಲಮಂಗಲ ಕೂಡ ವಿಸ್ತರಣೆಯಾಗುತ್ತಾ ಬರುತ್ತಿದೆ. ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಹೋಬಳಿಯಲ್ಲಿ ಜಾಗ ಗುರುತಿಸಿ ಸರ್ವೆ ನಡೆಸಲಾಗಿದೆ. ಒಂದು ವೇಳೆ ನಿಲ್ದಾಣ ಬಂದರೆ ಹೋಬಳಿಯ ಗತಿಯೇ ಬದಲಾಗಲಿದೆ. ಭೂಮಿಗೆ ಚಿನ್ನದ
ಬೆಲೆ ಬರಲಿದೆ.
ಲಕ್ಕೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಮಾಡಲು ಈಗಾಗಲೇ ಸರ್ವೆ ಕಾರ್ಯ ಮಾಡಲಾಗುತ್ತಿದೆ. ನನೆಗುದಿಗೆ ಬಿದ್ದಿದ್ದ ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ವರ್ತುಲ ರಸ್ತೆಗೆ ಕೇಂದ್ರ ಸರ್ಕಾರ ಚಾಲನೆ ಕೊಟ್ಟಿದ್ದು, ಆ ರಸ್ತೆಯು ಸೋಲೂರು ಮೂಲಕ ಹಾದು ಹೋಗಲಿದೆ. ಇದು ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ನೀಡಲಿದೆ.
ನಂಜುಂಡಪ್ಪ ವರದಿ ಪ್ರಕಾರ ಸಾಕಷ್ಟು ಹಿಂದುಳಿದ ತಾಲ್ಲೂಕಾಗಿರುವ ಮಾಗಡಿಯಿಂದ ಸೋಲೂರು ಕೈ ಬಿಟ್ಟರೆ, ತಾಲ್ಲೂಕು ಮತ್ತಷ್ಟ ಹಿಂದುಳಿಯಲಿದೆ. ಇದರಿಂದ ಮಾಗಡಿಗೆ ಹೆಚ್ಚು ನಷ್ಟವಾಗಲಿದೆ. ಇದನ್ನು ಸ್ಥಳೀಯ ಶಾಸಕರು ಅರ್ಥ ಮಾಡಿಕೊಂಡು ಹೋಬಳಿ ಉಳಿಸಿಕೊಳ್ಳಲು ಮುಂದಾಗಬೇಕು ಎಂಬ ಅಭಿಪ್ರಾಯ ಮಾಗಡಿ ಜನರದ್ದು.
ನೆಲಮಂಗಲಕ್ಕೆ ಸೋಲೂರು ಸೇರ್ಪಡೆ ಸ್ವಾಗತಾರ್ಹ. ಸರ್ಕಾರದ ನಿರ್ಧಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಈಗಾಗಲೇ ಮಾಗಡಿ ತಾಲ್ಲೂಕಿನಲ್ಲಿ ವಿರೋಧ ವ್ಯಕ್ತವಾಗಿದೆ. ಅಧಿಕೃತವಾಗಿ ಸೇರಿಸಲು ಕ್ರಮವಾಗಬೇಕುಜಗದೀಶ್ ಚೌಧರಿ, ತಾಲ್ಲೂಕು ಅಧ್ಯಕ್ಷ, ಬಿಜೆಪಿ ನೆಲಮಂಗಲ ಘಟಕ
ಸೋಲೂರು ಸೇರ್ಪಡೆಯಿಂದ ಕಂದಾಯ ಇಲಾಖೆಯ ಕಡತಗಳನ್ನು ಪಡೆಯುವುದು ಸಮಸ್ಯೆಯಾಗಲಿದೆ. ಆದರೂ, ಮತದಾನ ಮಾಡುವ ಕ್ಷೇತ್ರಕ್ಕೆ ಹೋಬಳಿ ಸೇರಿಸಿರುವುದು ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದು
‘ಹೋರಾಟ ರೂಪಿಸಿದರೆ ಬೆಂಬಲಿಸುವೆ’
‘ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾನು ಸಾಕಷ್ಟು ಪ್ರಯತ್ನ ಮಾಡಿದೆ. ಆದರೆ, ಅದಕ್ಕೆ ಜನ ಬೆಂಬಲ ಸಿಗಲಿಲ್ಲ. ನನ್ನ ಮಾತಿಗೆ ಯಾರೂ ದನಿಗೂಡಿಸಿ ಶಕ್ತಿ ತುಂಬಲಿಲ್ಲ. ಸೋಲೂರು ಹೋಬಳಿಯವರೇ ನಾವು ನೆಲಮಂಗಲಕ್ಕೆ ಸೇರಿಕೊಳ್ಳುತ್ತೇವೆ, ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ ಎಂದು ನನ್ನ ಮೇಲೆ ಒತ್ತಡ ಹಾಕಿದರು. ಚಿಕ್ಕಬಳ್ಳಾಪುರ ಸಂಸದರು ಸಹ ದನಿ ಎತ್ತಿದರು. ನೆಲಮಂಗಲ ಶಾಸಕ ಶ್ರೀನಿವಾಸ್ ಹೋಬಳಿಯನ್ನ ತಮ್ಮ ತಾಲ್ಲೂಕಿಗೆ ಸೇರಿಸಿದರೆ ಹೆಚ್ಚು ಅನುಕೂಲವಾಗುತ್ತದೆ ಎಂದು ಹೇಳಿ, ಸಚಿವ ಸಂಪುಟದಲ್ಲಿ ಹೋಬಳಿ ಸೇರ್ಪಡೆ ವಿಷಯಕ್ಕೆ ಒಪ್ಪಿಗೆ ಪಡೆದಿದ್ದಾರೆ. ಈಗಲೂ ಕಾನೂನಾತ್ಮಕವಾಗಿ ಸರ್ಕಾರದ ಮೇಲೆ ಒತ್ತಡ ತಂದು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಿಕೊಳ್ಳುವ ಜವಾಬ್ದಾರಿ ತಾಲ್ಲೂಕಿನ ಜನರ ಮೇಲಿದೆ. ಈ ಕುರಿತು, ಸಂಘಟನೆಗಳ ಮುಖಂಡರು ಹಾಗೂ ಸೋಲೂರು ಹೋಬಳಿಯವರು ಸೇರಿ ಹೋರಾಟ ರೂಪಿಸಿ ಜನರೊಂದಿಗೆ ಬೀದಿಗಿಳಿದರೆ ನಾನು ಸಹ ಹೋರಾಟಕ್ಕೆ ಕೈ ಜೋಡಿಸುವೆ. ಅದು ಬಿಟ್ಟು ರಾಜ್ಯಪಾಲರು ಸೇರಿದಂತೆ ಯಾರ‍್ಯಾರಿಗೊ ಮನವಿ ಕೊಟ್ಟು ಡವ್ ಮಾಡುವುದನ್ನು ಬಿಡಬೇಕು’ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ
‘ಚುನಾವಣಾ ಭರವಸೆ ಈಡೇರಿಸಿರುವೆ’
‘ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹಾಗೂ ಮಾಗಡಿ ತಾಲ್ಲೂಕಿನ ಕಂದಾಯ ವ್ಯಾಪ್ತಿಗೆ ಬರುವ ಸೋಲೂರು ಹೋಬಳಿಯನ್ನು ಸಂಪೂರ್ಣವಾಗಿ ನೆಲಮಂಗಲಕ್ಕೆ ಸೇರಿಸುವುದಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೋಬಳಿಯ ಜನರಿಗೆ ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಪುಟದ ಎಲ್ಲಾ ಸಚಿವರಿಗೂ ನೆಲಮಂಗಲ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸುವೆ. ನೆಲಮಂಗಲದ ಭಾಗವಾಗಿರುವ ಹೋಬಳಿಯ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ’.ಎನ್. ಶ್ರೀನಿವಾಸ್, ನೆಲಮಂಗಲ ಶಾಸಕ
‘ಕಾನೂನಾತ್ಮಕ ಹೋರಾಟಕ್ಕೆ ತಯಾರಿ’
‘ಸೋಲೂರು ಹೋಬಳಿ ಭಾವನಾತ್ಮಕವಾಗಿ ಮಾಗಡಿ ತಾಲ್ಲೂಕಿನ ಅವಿಭಾಜ್ಯ ಅಂಗ. ಐದು ಬಾರಿ ಶಾಸಕರಾಗಿರುವ ಬಾಲಕೃಷ್ಣ ಅವರು ಇಷ್ಟು ಸುಲಭವಾಗಿ ಸೋಲೂರು ಹೋಬಳಿಯನ್ನು ಪಕ್ಕದ ನೆಲಮಂಗಲಕ್ಕೆ ಬಿಟ್ಟು ಕೊಟ್ಟಿದ್ದಾರೆ ಎಂದರೆ ನಂಬಲು ಆಗುತ್ತಿಲ್ಲ. ಇದು ಆಡಳಿತಾರೂಢ ಪಕ್ಷದ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ. ಹೋಬಳಿ ಸೇರ್ಪಡೆಗೆ ಇರುವ ಎಲ್ಲಾ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ಮುಂದೆ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಹೋಬಳಿಯನ್ನು ಯಾವ ತಾಲ್ಲೂಕಿಗೆ ಸೇರಿಸಬೇಕು ಎಂಬ ಗೊಂದಲ ಸೃಷ್ಟಿಯಾಗುತ್ತದೆ. ಹಾಗಾಗಿ, ಯಾವುದೇ ಕಾರಣಕ್ಕೂ ಮಾಗಡಿ ತಾಲ್ಲೂಕಿನಿಂದ ಸೋಲೂರು ಕೈ ಬಿಡಬಾರದು. ಈ ಬಗ್ಗೆ ಶಾಸಕರು ಹೋರಾಟ ಮಾಡಬೇಕು. ಹೋಬಳಿಯನ್ನು ನಮ್ಮಲ್ಲೇ ಉಳಿಸಿಕೊಳ್ಳಲು ಕಾನೂನಾತ್ಮಕ ಹೋರಾಟ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ’.ಎ. ಮಂಜುನಾಥ್, ಮಾಜಿ ಶಾಸಕ ಹಾಗೂ ಜೆಡಿಎಸ್ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ
ಸೋಲೂರು ಜನರಿಗೆ ಅನುಕೂಲ
‘47 ವರ್ಷದಿಂದ ಸಂಕಷ್ಟದಲ್ಲಿದ್ದ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಿದ್ದು ಸಂತೋಷದ ವಿಚಾರ. ಹಿಂದಿನ ಸರ್ಕಾರವೇ ಈ ಕೆಲಸ ಮಾಡಬೇಕಿತ್ತು. ಈಗಿನ ಶಾಸಕ ಶ್ರೀನಿವಾಸ್ ಅವರ ಶ್ರಮದಿಂದ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ನಮ್ಮ ಹಿರಿಯ ಶ್ರೀಗಳು ಸಹ ಸೋಲೂರನ್ನು ನೆಲಮಂಗಲಕ್ಕೆ ಸೇರಿಸುವಂತೆ ಅನೇಕ ಬಾರಿ ಜನಪ್ರತಿನಿಧಿಗಳಿಗೆ ಸಲಹೆ ನೀಡಿದ್ದರು. ನೆಲಮಂಗಲ ಭೌಗೋಳಿಕವಾಗಿ ದೊಡ್ಡದಾಗಿದೆ. ಸೋಲೂರು ಸೇರ್ಪಡೆಯಿಂದ ಮಾಗಡಿಗೆ ಯಾವುದೇ ಸಮಸ್ಯೆ ಇಲ್ಲ. ಇದರಿಂದ ನಮ್ಮ ಭಾಗದ ಜನರಿ ಅನುಕೂಲವಾಗಲಿದೆ’ಮಹಾಲಿಂಗ ಸ್ವಾಮೀಜಿ, ಬಂಡೆ ಮಠ, ಸೋಲೂರು
ಮಾಗಡಿಯ ಅವಿಭಾಜ್ಯ ಅಂಗ
ಕೆಂಪೇಗೌಡರ ಮಾಗಡಿಯ ಅವಿಭಾಜ್ಯ ಅಂಗ ಸೋಲೂರು. ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆಯಾದ ನಂತರ, ಹೋಬಳಿಯನ್ನು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿ ಜನರಲ್ಲಿ ಗೊಂದಲ ಉಂಟು ಮಾಡಲಾಯಿತು. ಮಾಗಡಿ ತಾಲ್ಲೂಕು ಕಂದಾಯ ವ್ಯಾಪ್ತಿಯಲ್ಲಿದ್ದ ಸೋಲೂರನ್ನು ಇದೀಗ ಪೂರ್ಣವಾಗಿ ನೆಲಮಂಗಲಕ್ಕೆ ಸೇರಿಸಿರುವುದನ್ನು ನಾವು ವಿರೋಧಿಸುತ್ತೇವೆ. ಬದಲಿಗೆ, ಸೋಲರನ್ನು ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿಸಿದ್ದರೆ ಹೆಚ್ಚು ಸೂಕ್ತವಾಗುತ್ತಿತ್ತು.ಹೊಸಪಾಳ್ಯ ಲೋಕೇಶ್, ಅಧ್ಯಕ್ಷ, ಮಾಗಡಿ ತಾಲ್ಲೂಕು ರೈತ ಸಂಘ
ವರ್ಷಗಳ ಬೇಡಿಕೆ ಈಡೇರಿದೆ
ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವಂತೆ ಹಲವು ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಕುರಿತು, ಮಾಜಿ ಶಾಸಕ ಡಾ. ಶ್ರೀನಿವಾಸ್ ಜೊತೆಗೂ ಪತ್ರ ವ್ಯವಹಾರ ಮಾಡಲಾಗಿತ್ತು. ಜಿಲ್ಲಾಧಿಕಾರಿಗೂ ಪತ್ರ ಬರೆದು ನೆಲಮಂಗಲಕ್ಕೆ ಸೇರಿಸುವಂತೆ ಕೋರಲಾಗಿತ್ತು. ಕಡೆಗೆ ಶಾಸಕ ಎನ್. ಶ್ರೀನಿವಾಸ್ ಅವರ ಶ್ರಮದಿಂದಾಗಿ ಹೋಬಳಿಯು ನೆಲಮಂಗಲಕ್ಕೆ ಸೇರ್ಪಡೆಯಾಗಿದೆ.ಮುಜಾಹೀದ್ ಪಾಷ, ಅಧ್ಯಕ್ಷ, ಸೋಲೂರು ಗ್ರಾಮ ಪಂಚಾಯಿತಿ
ಮಾಗಡಿ ಕ್ಷೇತ್ರಕ್ಕೆ ಸೇರಿಸಲಿ
‘ಸೋಲೂರು ಹೋಬಳಿಯು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿಗೆ ಸೇರುತ್ತದೆ. ನೆಲಮಂಗಲವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕು. ಹೀಗಿರುವಾಗ, ಒಂದು ಜಿಲ್ಲೆಯ ಹೋಬಳಿಯನ್ನು ಮತ್ತೊಂದು ಜಿಲ್ಲೆಗೆ ಸೇರಿಸಲು ಅವಕಾಶವಿಲ್ಲ. ಬದಲಿಗೆ, ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಸೋಲೂರನ್ನು ವಾಪಸ್ ಮಾಗಡಿಗೆ ಸೇರಿಸಿಕೊಳ್ಳಬೇಕು. ಈ ಕುರಿತು ರಾಜ್ಯಪಾಲರಿಗೆ ತಾಲ್ಲೂಕಿನ ಹೋರಾಟಗಾರರ ನಿಯೋಗದಿಂದ ಮನವಿ ಸಲ್ಲಿಸಿದ್ದೇವೆ’.ಕನ್ನಡ ಕುಮಾರ್, ಪ್ರಗತಿಪರ ರೈತ, ಮಾಗಡಿ
‘ಎಲ್ಲಿ ಮತ ಹಾಕುತ್ತೇವೊ, ಅಲ್ಲೇ ಇರುತ್ತೇವೆ’
‘ನಮ್ಮ ಹೋಬಳಿ ಸೇರುವುದು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ. ನಾವು
ಎಲ್ಲಿಗೆ ಮತ ಹಾಕುತ್ತೇವೊ, ಅಲ್ಲಿಯೇ ಇರುತ್ತೇವೆ. ಮಾಗಡಿಗಿಂತ ನೆಲಮಂಗಲವೇ ನಮಗೆ ಹತ್ತಿರ. ಎಲ್ಲದಕ್ಕೂ ಅನುಕೂಲ’ ಎನ್ನುವ ಮೂಲಕ ಸೋಲೂರಿನ ಸ್ಥಳೀಯರು
ನೆಲಮಂಗಲಕ್ಕೆ ಹೋಬಳಿ ಸೇರಿಸುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಮತ ಹಾಕುವುದು ಒಂದು ಕಡೆ, ಕೆಲಸ–ಕಾರ್ಯಕ್ಕಾಗಿ ಕಚೇರಿಗಳಿಗೆ ಅಲೆಯುವುದು ಮತ್ತೊಂದು ಕಡೆಗೆ ಆಗಿರುವುದರಿಂದ ನಮಗೆ ತೊಂದರೆಯಾಗುತ್ತಿದೆ. ಇದು ಅಂತ್ಯವಾಗಬೇಕೆಂಬ ನಮ್ಮ ಒತ್ತಾಯಕ್ಕೆ ಇದೀಗ ಸರ್ಕಾರ ಮನ್ನಣೆ ನೀಡಿದೆ. ಹಾಗಾಗಿ, ನಾವು ನೆಲಮಂಗಲದಲ್ಲೇ
ಇರುತ್ತೇವೆ ಎನ್ನುವುದು ಅಲ್ಲಿನ ಬಹುತೇಕರ ಅಭಿಪ್ರಾಯ. ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ–75ಗೆ ಹೊಂದಿಕೊಂಡಂತಿರುವ ಸೋಲೂರು ಹೋಬಳಿ ಕೇಂದ್ರವು ನೆಲಮಂಗಲಕ್ಕೆ 21 ಕಿ.ಮೀ. ಹಾಗೂ ಮಾಗಡಿಗೆ 24 ಕಿ.ಮೀ. ಅಂತರದಲ್ಲಿದೆ. ಮಾಗಡಿಗೆ ಹೋಲಿಸಿದರೆ, ನೆಲಮಂಗಲಕ್ಕೆ ಸುಲಭ ಸಂಪರ್ಕ ವ್ಯವಸ್ಥೆ ಇದೆ. ಸ್ಥಳೀಯರು
ನೆಲಮಂಗಲಕ್ಕೆ ತಮ್ಮನ್ನು ಸೇರಿಸಿ ಎಂದು ಕೇಳಲು ಇದೂ ಒಂದು ಪ್ರಮುಖ ಕಾರಣ.
ಅಲ್ಲದೆ, ನೆಲಮಂಗಲ ಶಾಸಕ ಎನ್. ಶ್ರೀನಿವಾಸ್ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸುವ ಭರವಸೆಯೊಂದಿಗೆ ಈ ಭಾಗದಲ್ಲಿ ಪ್ರಚಾರ ನಡೆಸಿದ್ದರು.
ತಾಲ್ಲೂಕಿನ ಮುಕುಟವೇ ಹೋದಂತಾಗುತ್ತದೆ
ಸೋಲೂರು ಹೋಬಳಿ ವ್ಯಾಪ್ತಿಗೆ ಸೋಲೂರು, ಬಾಣವಾಡಿ, ಬಿಟ್ಟಸಂದ್ರ, ಗುಡೇಮಾರನಹಳ್ಳಿ, ಲಕ್ಕೇನಹಳ್ಳಿ ಹಾಗೂ ಮೋಟಗೊಂಡನಹಳ್ಳಿ ಸೇರಿ 6 ಗ್ರಾಮ ಪಂಚಾಯಿತಿಗಳು ಬರುತ್ತಿವೆ. ಇಲ್ಲಿನ ಒಟ್ಟು ಜನಸಂಖ್ಯೆ 35,677. ಹೋಬಳಿ ಏನಾದರೂ ನೆಲಮಂಗಲಕ್ಕೆ ಸೇರಿದಂತೆ ಕೆಂಪೇಗೌಡರ ನಾಡಿನ ಮಾಗಡಿ ತಾಲ್ಲೂಕಿನ ಮುಕುಟವೇ ಹೋದಂತಾಗುತ್ತದೆ. ಇದರಿಂದ ಹೋಬಳಿ ಜನಕ್ಕೂ ತೊಂದರೆಯಾಗಲಿದೆ. ಅವರು ಎಸಿ ಕೋರ್ಟ್‌ಗೆ ದೊಡ್ಡಬಳ್ಳಾಪುರಕ್ಕೆ, ಜಿಲ್ಲಾಧಿಕಾರಿ ಕಚೇರಿ ಮತ್ತು ಕೋರ್ಟ್‌ಗಳಿಗೆ ದೇವನಹಳ್ಳಿಗೆ ಹೋಗಬೇಕಾಗುತ್ತದೆ. ಅದರ ಬದಲು, ಮಾಗಡಿ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಸಮೀಪವಾಗಲಿದೆ. ಹೋಬಳಿ ಸೇರ್ಪಡೆಯಿಂದ ಕಂದಾಯ ದಾಖಲೆಗಳ ತಿದ್ದುಪಡಿ ಸೇರಿದಂತೆ ಹಲವು ಗೊಂದಲಗಳು ಸೃಷ್ಟಿಯಾಗಿ ಜನ ಪರದಾಡಬೇಕಾಗುತ್ತದೆ.
ಅಲ್ಲದೆ, ಜಿಲ್ಲಾ ಪಂಚಾಯಿತಿ ಕ್ಷೇತ್ರ, 3 ತಾಲ್ಲೂಕು ಪಂಚಾಯಿತಿ, 6 ಗ್ರಾಮ ಪಂಚಾಯಿತಿಗಳು ಕೈ ತಪ್ಪಲಿವೆ. ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ 75, ಪ್ರಸಿದ್ಧ ಮಠಗಳಾದ ಚಿಲುಮೆ ಮಠ, ಗುಡೆಮಾರನಹಳ್ಳಿ ಜಗಣ್ಣ ದೇವರ ಮಠ, ಕಂಚಗಲ್ ಬಂಡೆಮಠ, ಗದ್ದುಗೆ ಮಠ, ಸೋಲೂರು ಆರ್ಯ ಈಡಿಗರ ಮಠ, ಪಾಲನಹಳ್ಳಿ ಸಿದ್ದರಾಜು ಸ್ವಾಮೀಜಿ ಮಠ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ವೀರಾಪುರ ಗ್ರಾಮವು ಮಾಗಡಿಯ ಕೈ ತಪ್ಪಲಿದೆ. ಪ್ರಮುಖ ಕೈಗಾರಿಕೆಗಳಾದ ಎಜಕಿ, ಸನ್ ಪ್ಯೂರ್, ಬಿಪಿಸಿಎಲ್, ಬಮುಲ್ ಹಾಲು ಶಿಥಿಲೀಕರಣ ಕೇಂದ್ರ, ಖಾಸಗಿ ಎಂಆರ್‌ಆರ್ ಆಸ್ಪತ್ರೆ ಸೇರಿದಂತೆ ಹಲವು ಪ್ರಮುಖ ಕೇಂದ್ರಗಳು ನೆಲಮಂಗಲದ ಪಾಲಾಗಲಿವೆ. ಹಾಗಾಗಿ, ಭಾವನಾತ್ಮಕವಾಗಿಯೂ ಮಾಗಡಿ ಜೊತೆಗಿರುವ ಸೋಲೂರು ನಮ್ಮಲ್ಲೇ ಉಳಿಯಬೇಕು ಎಂಬುದು ಸ್ಥಳೀಯರ ವಾದ.
ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ
ಸೋಲೂರು ಹೋಬಳಿಯ 68 ಗ್ರಾಮಗಳನ್ನು ನೆಲಮಂಗಲಕ್ಕೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯು ಸೆ. 9ರಂದು ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿದೆ. ಆ ದಿನಾಂಕದಿಂದ ಒಂದು ತಿಂಗಳು ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ. ಆಕ್ಷೇಪಣೆಗಳನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೊಠಡಿ ಸಂಖ್ಯೆ: 505, ಬಹು ಮಹಡಿಗಳ ಕಟ್ಟಡ, ಡಾ. ಬಿ.ಆರ್. ಅಂಬೇಡ್ಕ್ ವಿಧಿ, ಬೆಂಗಳೂರು–560001 ಈ ವಿಳಾಸಕ್ಕೆ ಲಿಖಿತವಾಗಿ ಸಲ್ಲಿಸಬಹುದಾಗಿದೆ.
ವಿರೋಧಿಸಿ ರಾಜ್ಯಪಾಲರಿಗೆ ಮನವಿ
ಮಾಗಡಿಯಲ್ಲೇ ಸೋಲೂರು ಹೋಬಳಿ ಉಳಿಸಿಕೊಳ್ಳಬೇಕು ಎಂದು ದನಿ ಎತ್ತಿರುವ ವಕೀಲ ಸಂಘದವರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರ ನೇತೃತ್ವದಲ್ಲಿ, ಇತ್ತೀಚೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೂ ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.