ಮಾಗಡಿ: ‘ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳಲು ಆರಂಭದಲ್ಲಿಯೇ ನಾನು ಎತ್ತಿದ ಧ್ವನಿಗೆ ಯಾರಿಂದಲೂ ಸೂಕ್ತ ಸ್ಪಂದನೆ ಸಿಗಲಿಲ್ಲ. ಈಗ ಸೋಲೂರು ಬೇಕು ಎಂದು ಪ್ರತಿಭಟನೆ ಮಾಡಿ ಏನು ಪ್ರಯೋಜನ? ರೈಲು ಹೋದ ಮೇಲೆ ಟಿಕೆಟ್ ಕೊಂಡಂತೆ ಆಗಿದೆ ನಿಮ್ಮ ಸ್ಥಿತಿ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಅಸಹಾಯಕತೆ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಅವರು, ‘ಸೋಲೂರು ಹೋಬಳಿ ಉಳಿಸಿಕೊಳ್ಳಲು ಎತ್ತಿದ ಧ್ವನಿಗೆ ಜನರಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.
‘ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕಂಡು ಸೋಲೂರನ್ನು ಮಾಗಡಿ ತಾಲ್ಲೂಕಿನಲ್ಲಿಯೇ ಉಳಿಸಿಕೊಡುವಂತೆ ಮನವಿ ಮಾಡಿದ್ದೆ. ಜನರು ಬೆಂಬಲಿಸಲಿಲ್ಲ. ಬದಲಾಗಿ ಅಸಹಕಾರ ತೋರಿದರು. ಈ ವಿಚಾರದಲ್ಲಿ ತಲೆ ಹಾಕದಂತೆ ಕೆಲವರು ನೇರವಾಗಿ ಹೇಳಿದರು. ಹಾಗಾಗಿ ನಾನು ತಟಸ್ಥನಾದೆ’ ಎಂದರು.
ಕೇವಲ ಮಾಗಡಿ ಜನ ಹೋರಾಟ ಮಾಡಿದರೆ ಪ್ರಯೋಜನ ಆಗುವುದಿಲ್ಲ. ಸೋಲೂರು ಭಾಗದ ಜನರೂ ಒಗ್ಗಟ್ಟಿನಿಂದ ಪ್ರತಿಭಟನೆ ಮಾಡಬೇಕು. ಆಗ ಮಾತ್ರ ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸಲು ಸರ್ಕಾರದ ಮೇಲೆ ಒತ್ತಡ ಹಾಕಬಹುದು ಎಂದು ಭರವಸೆ ನೀಡಿದರು.
ನವೆಂಬರ್ ತಿಂಗಳ ಮೊದಲ ಭಾನುವಾರ ಸೋಲೂರು ಪ್ರವಾಸಿ ಮಂದಿರದಲ್ಲಿ ಸೋಲೂರು ಹೋಬಳಿಯ ಕನಿಷ್ಟ ಐದು ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಸಭೆ ಆಯೋಜಿಸಿ. ಅಲ್ಲಿ ಜನಗಳ ತೀರ್ಮಾನ ನೋಡಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡೋಣ ಎಂದು ಬಾಲಕೃಷ್ಣ ಭರವಸೆ ನೀಡಿದರು.
‘ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಲ್ಲೇ ಉಳಿಸುವಂತೆ ಆಕ್ಷೇಪಣೆ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಸೋಲೂರು ಹೋಬಳಿಯನ್ನು ಮಾಗಡಿಯಲ್ಲೇ ಉಳಿಸುವ ಕೆಲಸ ಮಾಡಬೇಕು. ಇಲ್ಲವಾದರೆ ರೈತರು ಪ್ರತಿ ಕೆಲಸಕ್ಕೂ ದೊಡ್ಡಬಳ್ಳಾಪುರಕ್ಕೆ ತೆರಳುವ ಅನಿವಾರ್ಯತೆ ನಿರ್ಮಾಣವಾಗಲಿದೆ. ನಾವು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ನಮ್ಮ ಜೊತೆ ನೀವು ನಿಲ್ಲಬೇಕು’ ಎಂದು ಪ್ರಗತಿಪರ ರೈತ ಕನ್ನಡ ಕುಮಾರ್ ಮನವಿ ಮಾಡಿದರು.
ಸೋಲೂರು ಹೋಬಳಿಯನ್ನು ಮಾಗಡಿ ತಾಲ್ಲೂಕಿನಲ್ಲೇ ಉಳಿಸುವಂತೆ ನೂರಾರು ರೈತರು,ಸಾರ್ವಜನಿಕರು ಶಾಸಕ ಹಾಗೂ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.