ಹಾರೋಹಳ್ಳಿ: ಬೆಂಗಳೂರಿನಿಂದ ದಿಂಡಿಗಲ್‌ವರೆಗೆ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಬಳಿಕ ಟಿಕೆಟ್ ದರವೂ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಕಷ್ಟವಾಗುತ್ತಿದೆ.
ಸೋಮನಹಳ್ಳಿ ಬಳಿ ಟೋಲ್ ನಿರ್ಮಿಸಿರುವುದರಿಂದ ಹಾರೋಹಳ್ಳಿ ಹಾಗೂ ಕನಕಪುರ ಜನತೆಗೆ ಹಲವು ಸಮಸ್ಯೆ ಎದುರಾಗಿದೆ. ಜೊತೆಗೆ ಬಸ್ ಟಿಕೆಟ್ ದರವೂ ಹೆಚ್ಚಾಗಿದೆ. ಕೆಎಸ್ಆರ್‌ಟಿಸಿ ಬಸ್‌ನಲ್ಲಿ ₹7 ಹಾಗೂ ಬಿಎಂಟಿಸಿಯಲ್ಲಿ ₹5 ದರ ಒಮ್ಮೆಲೆ ಏರಿಕೆ ಮಾಡಲಾಗಿದೆ.
ಮೊದಲು ಕನಕಪುರದಿಂದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ₹70 ಪಾವತಿಸಬೇಕಿತ್ತು. ಇದೀಗ ಒಂದೆಡೆ ₹77 ಪಾವತಿಸಬೇಕಿದೆ. ಇನ್ನು ಬಿಎಂಟಿಸಿಯಲ್ಲಿ ₹30 ಇದ್ದು, ಈಗ ₹35 ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಬಸ್‌ಗಳು ಸೋಮನಹಳ್ಳಿ ಟೋಲ್ ಮೂಲಕ ಸಂಚರಿಸುತ್ತಿದ್ದು, ಟೋಲ್ ₹290 ಪಾವತಿಸಬೇಕಾಗಿರುವುದರಿಂದ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣ ಟೋಲ್ ಪಾವತಿಸಲೇಬೇಕಾಗಿದೆ.
ಬೆಂಗಳೂರಿನಿಂದ ದಿಂಡಿಗಲ್‌ವರೆಗೆ ನಿರ್ಮಿಸಿರುವ ರಸ್ತೆಯು ಸಂಪೂರ್ಣ ಅವೈಜ್ಞಾನಿಕ ಮತ್ತು ಕಳಪೆ ಗುಣಮಟ್ಟದಿಂದ ಕೂಡಿದ್ದು, ಸುರಕ್ಷತೆ ಇಲ್ಲವಾಗಿದೆ. ಆಗಿದ್ದರೂ ಟೋಲ್ ಮೂಲಕ ಹಣವನ್ನು ಹಗಲು ದರೋಡೆ ಮಾಡುತ್ತಿದ್ದಾರೆ ಎಂಬುದು ವಾಹನ ಸವಾರರ ಆರೋಪವಾಗಿದೆ.
ಟೋಲ್‌ನಲ್ಲಿ ಕನಕಪುರ, ಹಾರೋಹಳ್ಳಿ ಇತರೆ ಸ್ಥಳೀಯ ಭಾಗದ ರೈತರು ಪ್ರತಿನಿತ್ಯ ಸಂಚರಿಸುತ್ತಿದ್ದು, ಟೋಲ್ ಕಟ್ಟಿ ಸಂಚರಿಸಬೇಕಾಗಿದೆ. ಹಾಗಾಗಿ ಸರ್ವಿಸ್ ರಸ್ತೆ ನಿರ್ಮಿಸುವವರೆಗೂ ಟೋಲ್ ಮುಚ್ಚಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಟೋಲ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಈಗಾಗಲೇ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ರಸ್ತೆ ಪೂರ್ಣಗೊಳಿಸಿ, ಸರ್ವಿಸ್ ರಸ್ತೆ ನಿರ್ಮಿಸಬೇಕೆಂದು ಪ್ರತಿಭಟನೆ ಮಾಡಿದ್ದರೂ ಇವರೆಗೂ ಬೇಡಿಕೆ ಈಡೇರಿಸದೆ ತರಾತುರಿಯಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ ಎಂದು ಹೋರಾಟಗಾರರ ಮಾತಾಗಿದೆ.
ಕೆಲ ದಿನಗಳ ಹಿಂದ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳು ಬಸ್ ಪ್ರಯಾಣದರ ಏರಿಕೆ ಮಾಡಿದ್ದು, ಈಗ ಹಿಂದೆಯೇ ಟೋಲ್ ಸಂಗ್ರಹದಿಂದ ಬಸ್ ದರ ಹೆಚ್ಚಳವಾಗಿದ್ದು ಪ್ರಯಾಣಿಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾಗಿ ಬಸ್ ಪ್ರಯಾಣ ದರ ಕಡಿಮೆಯಾಗಲಿ ಮತ್ತು ಸರ್ವಿಸ್ ರಸ್ತೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ.
ಸೋಮನಹಳ್ಳಿ ಟೋಲ್ ಬಳಿ ಸರ್ವಿಸ್ ರಸ್ತೆ ಮಾಡಿದರೆ ಅದೇ ರಸ್ತೆಯಲ್ಲಿ ಬಸ್‌ಗಳು ಸಂಚರಿಸುತ್ತವೆ. ಟಿಕೆಟ್ ದರ ಏರಿಕೆಯಾಗುವುದಿಲ್ಲಸಚಿನ್, ಕೆಎಸ್ಆರ್‌ಟಿಸಿ ಹಾರೋಹಳ್ಳಿ ಘಟಕ ಡಿಪೋ ಮ್ಯಾನೇಜರ್
ದಿನನಿತ್ಯ ಉದ್ಯೋಗ ಹರಸಿ ಹಾರೋಹಳ್ಳಿಯಿಂದ ಬೆಂಗಳೂರಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಸಂಚರಿಸುತ್ತಿದ್ದು ಟೋಲ್‌ನಿಂದ ಏಕಾಏಕಿ ಟಿಕೆಟ್ ದರ ಹೆಚ್ಚಳವಾಗಿರುವುದು ಕಷ್ಟವಾಗುತ್ತಿದೆ. ಹಾಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು.ಕಿರಣ್, ಪ್ರಯಾಣಿಕ, ಹಾರೋಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.