
ರಾಮನಗರ: ತಾಲ್ಲೂಕಿನ ಸಂಗಬಸವನದೊಡ್ಡಿ ಬಳಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚೆಗೆ ಬಸ್ ಡಿಕ್ಕಿಯಿಂದಾಗಿ ಕಾರೊಂದು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ವೃದ್ದ ದಂಪತಿ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅವರ ಧರಿಸಿದ್ದ ಸೀಟ್ ಬೆಲ್ಟ್!
ವೃದ್ಧ ಅಬ್ದುಲ್ ಫಜಲ್ ಅವರು ಪತ್ನಿಯೊಂದಿಗೆ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಕಾರಿನಲ್ಲಿ ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿದ್ದ ಅವರ ಕಾರು ಸಂಗಬಸವನದೊಡ್ಡಿ ಬಳಿಗೆ ಬರುವಾಗ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ಪಕ್ಕದ ರಸ್ತೆ ವಿಭಜಕದ ಮೇಲೆ ಬಿದ್ದಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾದರೂ, ದಂಪತಿಗೆ ಸಣ್ಣಪುಟ್ಟ ಗಾಯವಾಗಿರುವುದು ಬಿಟ್ಟರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳೀಯರು ಸ್ಥಳಕ್ಕೆ ತೆರಳಿ ಇಬ್ಬರನ್ನೂ ಕಾರಿನಿಂದ ಹೊರಕ್ಕೆ ಎಳೆದಿದ್ದಾರೆ.
ದಂಪತಿ ಸೀಟ್ ಬೆಲ್ಟ್ ಧರಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಾಹನ ಸವಾರರು ಚಾಲನೆ ಮಾಡುವಾಗ ತಪ್ಪದೆ ಸೀಟ್ ಬೆಲ್ಟ್ ಧರಿಸುವ ಜೊತೆಗೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.