ADVERTISEMENT

ಮಾಗಡಿ: ಪುರಸಭೆಗೆ ದಕ್ಷಿಣ ಕೊರಿಯಾ ತಂತ್ರಜ್ಞರ ಭೇಟಿ

ಇ–ಸಿಟಿ ಯೋಜನೆಯಡಿ ಅಭಿವೃದ್ಧಿಗೆ ಒತ್ತು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 4:44 IST
Last Updated 16 ಏಪ್ರಿಲ್ 2022, 4:44 IST
ಮಾಗಡಿ ಪುರಸಭೆಗೆ ಭೇಟಿ ನೀಡಿದ್ದ ದಕ್ಷಿಣ ಕೊರಿಯಾ ತಂತ್ರಜ್ಞರು ಮತ್ತು ಕೈಗಾರಿಕೋದ್ಯಮಿಗಳ ತಂಡದೊಂದಿಗೆ ಮುಖ್ಯಾಧಿಕಾರಿ ರಮೇಶ್‌, ಅಧ್ಯಕ್ಷೆ ವಿಜಯಲಕ್ಷ್ಮಿ ರೂಪೇಶ್‌ ಚರ್ಚಿಸಿದರು. ಶಿವಮೂರ್ತಿ ಹಿರೇಮಠ್‌, ಸುನಿಲ್‌ ಮಿಶ್ರಾ, ಸೀಯೆನ್‌ ಪಾರ್ಕ್‌, ರಾಯ್‌ ಕಿಮ್‌, ಜೋಶುಹಾ ಕಿಮ್‌ ಇದ್ದರು
ಮಾಗಡಿ ಪುರಸಭೆಗೆ ಭೇಟಿ ನೀಡಿದ್ದ ದಕ್ಷಿಣ ಕೊರಿಯಾ ತಂತ್ರಜ್ಞರು ಮತ್ತು ಕೈಗಾರಿಕೋದ್ಯಮಿಗಳ ತಂಡದೊಂದಿಗೆ ಮುಖ್ಯಾಧಿಕಾರಿ ರಮೇಶ್‌, ಅಧ್ಯಕ್ಷೆ ವಿಜಯಲಕ್ಷ್ಮಿ ರೂಪೇಶ್‌ ಚರ್ಚಿಸಿದರು. ಶಿವಮೂರ್ತಿ ಹಿರೇಮಠ್‌, ಸುನಿಲ್‌ ಮಿಶ್ರಾ, ಸೀಯೆನ್‌ ಪಾರ್ಕ್‌, ರಾಯ್‌ ಕಿಮ್‌, ಜೋಶುಹಾ ಕಿಮ್‌ ಇದ್ದರು   

ಮಾಗಡಿ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮತ್ತು ಶಾಸಕ ಎ. ಮಂಜುನಾಥ್‌ ಅವರ ಮನವಿ ಮೇರೆಗೆ ಬೆಂಗಳೂರಿನ ಗ್ರಾಂಡ್‌ ರೀಜೆನ್ಸ್‌ ಹಾಸ್ಪಿಟಾಲಿಟಿ ಸಹಯೋಗದಡಿ ದಕ್ಷಿಣ ಕೊರಿಯಾ ದೇಶದ ತಂತ್ರಜ್ಞರು ಮತ್ತು ಕೈಗಾರಿಕೋದ್ಯಮಿಗಳ ತಂಡ ಗುರುವಾರ ಪುರಸಭೆಗೆ ಭೇಟಿ ನೀಡಿತು.

ದುಬೈನ ಡಿಕೋಡೆಡ್‌ ಕ್ಯಾಪಿಟಲ್‌ ನಿರ್ದೇಶಕ ಶಿವಮೂರ್ತಿ ಹಿರೇಮಠ್‌ ಮಾತನಾಡಿ, ಬೆಂಗಳೂರಿಗೆ ಸಮೀಪವಿರುವ ಪುರಸಭೆಗಳನ್ನು ಇ–ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತದೆ. ಇ–ಸಿಟಿಯಾಗಿ ಪರಿವರ್ತಿಸಲು ದಕ್ಷಿಣ ಕೊರಿಯಾ ತಂತ್ರಜ್ಞರು ಮತ್ತು ಕೈಗಾರಿಕೋದ್ಯಮಿಗಳು ಭೇಟಿ ನೀಡಿದ್ದಾರೆ ಎಂದರು.

ಶಿಕ್ಷಣ, ಆರೋಗ್ಯ, ಸ್ಯಾನಿಟೇಷನ್‌, ಶುದ್ಧ ಕುಡಿಯುವ ನೀರು, ಸುಂದರ ಪರಿಸರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಸ್ಥಳೀಯವಾಗಿ ದೊರೆಯುವ ಸಂಪನ್ಮೂಲ ಬಳಸಿಕೊಂಡು ಯುವಕರಿಗೆ ಸ್ವಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ. ಚಾರಿತ್ರಿಕ ಸ್ಮಾರಕಗಳ ರಕ್ಷಣೆ, ಜಲಮೂಲ, ಪರಿಸರ ಹಾಗೂ ಬೆಟ್ಟಗುಡ್ಡಗಳ ಸಂರಕ್ಷಣೆ, ಬಡವರಿಗೆ ಸ್ಥಳೀಯವಾಗಿ ಸ್ವಉದ್ಯೋಗ ಕಲ್ಪಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ವರ್ಗದ ಬಡವರನ್ನು ಗುರುತಿಸಿ ಸ್ವಾವಲಂಬಿ ಬದುಕಿಗೆ ಬೇಕಾದ ಕೌಶಲಾಭಿವೃದ್ಧಿ, ತಂತ್ರಜ್ಞಾನ ಕುರಿತು ತರಬೇತಿ ನೀಡಲಾಗುವುದು. ಮಹಿಳಾ ಸಬಲೀಕರಣಗೊಳಿಸಲು ಸ್ವಸಹಾಯ ಸಂಘಗಳ ಮೂಲಕ ಗುಡಿ ಕೈಗಾರಿಕೆಗಳಿಗೆ ಅಗತ್ಯ ಸವಲತ್ತು ಒದಗಿಸಲಾಗುವುದು. ಕೆಂಪೇಗೌಡರ ತವರೂರನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದರು.

ಜಿಂಟೆಲ್‌ ಇಂಡಿಯಾ ಪ್ರೈವೇಟ್‌ ವ್ಯವಸ್ಥಾಪಕ ನಿರ್ದೇಶಕ ಸುನಿಲ್‌ ಮಿಶ್ರಾ, ದಕ್ಷಿಣ ಕೊರಿಯಾದ ಎಐಡಿಎ ನಿರ್ದೇಶಕರಾದ ಸೀಯೆನ್‌ ಪಾರ್ಕ್‌, ರಾಯ್‌ ಕಿಮ್‌, ಸಹಾಯಕ ನಿರ್ದೇಶಕ ಜೋಶುಹಾ ಕಿಮ್‌ ಯೋಜನೆ ಬಗ್ಗೆ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ ರೂಪೇಶ್‌, ಉಪಾಧ್ಯಕ್ಷ ರಹಮತ್‌, ಮುಖ್ಯಾಧಿಕಾರಿ ರಮೇಶ್‌, ಸದಸ್ಯ ಅಶ್ವತ್ಥ, ಪರಿಸರ ಎಂಜಿನಿಯರ್‌ ಸುಷ್ಮಾ, ಆರೋಗ್ಯಾಧಿಕಾರಿ ಮಹಮದ್‌ ನದಾಫ್‌, ರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.