ADVERTISEMENT

ಠಾಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆರೋಪಿ | ಲಾಕಪ್‌ ಡೆತ್ ಅಲ್ಲ: SP ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 2:15 IST
Last Updated 21 ಆಗಸ್ಟ್ 2025, 2:15 IST
<div class="paragraphs"><p>ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</p></div>

ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

   

ಚನ್ನಪಟ್ಟಣ: ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಬಂಧಿಸಲಾದ ಆರೋಪಿ ರಮೇಶ್ ಕುಟುಂಬದವರು ಹೇಳುವಂತೆ ಪೊಲೀಸರ ಹಲ್ಲೆಯಿಂದ ಲಾಕ್‌ಅಪ್ ಡೆತ್ ಆಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದು ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಹೇಳಿದ್ದಾರೆ.

ಆತ್ಮಹತ್ಯೆ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಸಿಬ್ಬಂದಿಯನ್ನು ಸಹ ವಿಚಾರಣೆ ನಡೆಸಲಾಗಿದೆ. ಶವದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಈ ವಿಷಯದಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯ ಕಂಡುಬಂದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು. 

ADVERTISEMENT

ಶೌಚಾಲಯದಲ್ಲಿ ರಮೇಶ್ ನರಳಾಟದ ಶಬ್ದ ಕೇಳಿ ಆತನನ್ನು ಬದುಕಿಸಲು ಪ್ರಯತ್ನಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂಬುದು ಸಿಐಡಿಗೆ ತನಿಖೆಯಿಂದ ಗೊತ್ತಾಗಲಿದೆ ಎಂದರು.

ಆರೋಪಿ ರಮೇಶ್ ನಾಲ್ಕು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಅದಾಗಲೇ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದ. ಆತನ ಮಗ ಮಂಜು ವಿರುದ್ಧವೂ ನಾಲ್ಕೈದು ಕಳ್ಳತನ ಪ್ರಕರಣಗಳಿವೆ ಎಂದು ಎಸ್‌.ಪಿ ಮಾಹಿತಿ ನೀಡಿದರು.

‘ಏಣಿ ವ್ಯಾಪಾರದ ನೆಪದಲ್ಲಿ ಪೊಲೀಸರು ಕರೆದೊಯ್ದಿದ್ದರು’

‘ಏಣಿ ವ್ಯಾಪಾರದ ನೆಪದಲ್ಲಿ ಪೊಲೀಸರು ಆ. 18ರಂದು ಬೆಳಗ್ಗೆಯೇ ಮನೆಗೆ ಬಂದಿದ್ದರು.‌ ಮಲಗಿದ್ದ ತಂದೆಯನ್ನು ಎಬ್ಬಿಸಿ, ಬಿದಿರು ಏಣಿ ವ್ಯಾಪಾರ ಮಾಡುವುದಿದೆ ಎಂದು ಹೇಳಿ ‌ಜೊತೆಯಲ್ಲಿ ಕರೆದುಕೊಂಡು ಹೋಗಿದ್ದರು‘ ಎಂದು ಮೃತ ರಮೇಶ್ ಪುತ್ರಿ ಮಂಜುಳಾ ಮಾಧ್ಯಮಗಳಿಗೆ ಹೇಳಿದರು.

‘ನನ್ನ ತಮ್ಮ ಮಂಜುನನ್ನು ಬೆಂಗಳೂರಿನ ಬಿಳೇಕಹಳ್ಳಿಯಿಂದ ಕರೆದೊಯ್ದಿದ್ದರು. ಅಂದಿನಿಂದ ಇಬ್ಬರೂ ಎಲ್ಲಿದ್ದಾರೆಂದು ಗೊತ್ತಿರಲಿಲ್ಲ. ಇಂದು ಬೆಳಗ್ಗೆ ನನ್ನ ತಮ್ಮನ ಹೆಂಡತಿಗೆ ಕರೆ ಮಾಡಿದ್ದ ಪೊಲೀಸರು, ನಿಮ್ಮ ಮಾವ ಬೆಳಗ್ಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನ ನಾವು ಹೇಗೆ ನಂಬೋದು. ನಮಗೆ ನ್ಯಾಯ ಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.