ADVERTISEMENT

ಅಧಿಕಾರಿಗಳ ವಿರುದ್ಧ ಉಗುಳು ಚಳವಳಿ

ಎಸ್‌ಬಿಐ ಶಾಖೆ ಪುನರಾರಂಭಕ್ಕೆ ರೈತ ಸಂಘ, ಗ್ರಾಹಕರ ವೇದಿಕೆಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 13:51 IST
Last Updated 12 ಜುಲೈ 2019, 13:51 IST
ಮಾಗಡಿಯಲ್ಲಿ ಮುಚ್ಚಿರುವ ಎಸ್‌ಬಿಐನ ಶಾಖೆಯನ್ನು ಪುನರಾರಂಭಿಸುವಂತೆ ಆಗ್ರಹಿಸಿ ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು
ಮಾಗಡಿಯಲ್ಲಿ ಮುಚ್ಚಿರುವ ಎಸ್‌ಬಿಐನ ಶಾಖೆಯನ್ನು ಪುನರಾರಂಭಿಸುವಂತೆ ಆಗ್ರಹಿಸಿ ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು   

ಮಾಗಡಿ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದ ಭಾರತೀಯ ಸ್ಟೇಟ್‌ ಬ್ಯಾಂಖ್‌ನ (ಎಸ್‌ಬಿಐ) ಎರಡು ಶಾಖೆಗಳ ಪೈಕಿ ಒಂದನ್ನು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಗ್ರಾಹಕರ ಗಮನಕ್ಕೆ ತಾರದೆ ಮುಚ್ಚಿಸಿದ್ದಾರೆ. ಶಾಖೆ ಪುನರಾರಂಭಿಸುವಂತೆ ಆಗ್ರಹಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ, ಗ್ರಾಹಕರ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ರೈತರ ಆತ್ಮಹತ್ಯೆಗೆ ಬ್ಯಾಂಕಿನ ಅಧಿಕಾರಿಗಳೇ ಕಾರಣ. ಮುಖ್ಯ ರಸ್ತೆಯಲ್ಲಿದ್ದ ಎಸ್‌ಬಿಐ ಶಾಖೆ ಗ್ರಾಹಕರಿಗೆ ಅನುಕೂಲಕರವಾಗಿತ್ತು. ವಾಹನ ನಿಲ್ಲಿಸಲು ಜಾಗವಿತ್ತು. ಎರಡು ಶಾಖೆಗಳಲ್ಲಿ ಒಂದನ್ನು ಮುಚ್ಚಿ ಕಿರಿದಾಗಿರುವ, ಗಾಳಿ ಬೆಳಕು ಮತ್ತು ವಾಹನ ನಿಲ್ಲಿಸಲು ಸ್ಥಳಾವಕಾಶವಿಲ್ಲದ ಖಾಸಗಿ ಕಟ್ಟಡದಲ್ಲಿ ಆರಂಭಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಯ್ಯ ಮಾತನಾಡಿ ಉದ್ಯಮಿ, ವರ್ತಕ, ಸಿರಿವಂತರಿಗೆ ಕೇಳಿದಷ್ಟು ಸಾಲ ನೀಡುವ ಬ್ಯಾಂಕ್‌ಗಳ ವ್ಯವಸ್ಥಾಪಕರು ಬಡ ರೈತರನ್ನು ಗುಲಾಮರಂತೆ ನೋಡುತ್ತಿರುವುದು ಸರಿಯಲ್ಲ. ಸರ್ಕಾರದಿಂದ ಸಬ್ಸಿಡಿ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಧುಗೌಡ ಮಾತನಾಡಿ, ಎಸ್‌ಬಿಐನ ಹಿರಿಯ ಅಧಿಕಾರಿಗಳು ಗ್ರಾಮೀಣ ಭಾಗದ ರೈತರ ಹಿತಾಸಕ್ತಿಯತ್ತ ಗಮನಹರಿಸುತ್ತಿಲ್ಲ. ಪಾಸ್‌ಪುಸ್ತಕ ನೋಂದಣಿ ಮಾಡಿಸಲು ಒಂದು ತಿಂಗಳು ಕಾಯಬೇಕಿದೆ. ಎಟಿಎಂ ಇದ್ದರೂ ಖಾತೆಯಲ್ಲಿರುವ ಹಣ ಪಡೆಯಲು ಹರಸಾಹಸ ಪಡಬೇಕಿದೆ ಎಂದರು.

ರೈತ ಸಂಘದ ಕಾರ್ಯದರ್ಶಿ ನೆಸೆಪಾಳ್ಯ ಮಂಜುನಾಥ, ಮುಖಂಡರಾದ ಮತ್ತದ ಹನುಮಂತರಾಯಪ್ಪ, ರಂಗಸ್ವಾಮಯ್ಯ, ಕುಂಬಳಕಾಯಿ ಗಂಗಣ್ಣ, ನಾರಾಯಣಪ್ಪ, ಗಾಡಿ ಕೆಂಚಪ್ಪ, ಗಿರೀಶ್, ತಿಮ್ಮಪ್ಪರಾಜು, ದೊಡ್ಡರಂಗಯ್ಯ, ಮಂಜುನಾಥ್, ಮಾರಪ್ಪ, ಲೋಕೇಶ್, ಆನಂದ್, ಗೊಲ್ಲರಹಟ್ಟಿ ಜಯಣ್ಣ, ವಿನಯ್ ಮಾತನಾಡಿದರು.

ಎತ್ತಿನಗಾಡಿಗಳೊಂದಿಗೆ ಮೆರವಣಿಗೆಯಲ್ಲಿ ಬಂದ ರೈತ ಸಂಘದ ಪದಾಧಿಕಾರಿಗಳು ಶಾಖೆ ಎದುರು ಪ್ರತಿಭಟನಾ ಧರಣಿ ನಡೆಸಿ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಉಗುಳುವ ಚಳವಳಿ ನಡೆಸಿ ಗಮನ ಸೆಳೆದರು.

ಬ್ಯಾಂಕ್‌ನ ಹಿರಿಯ ಅಧಿಕಾರಿ ನಾಗಶ್ರೀ ಮಾಧ್ಯಮದವರನ್ನು ಕಂಡು ಸಿಡಿಮಿಡಿಗೊಂಡರು. ಮುಚ್ಚಿರುವ ಶಾಖೆ ಪುನರಾರಂಭಿಸುವ ಬಗ್ಗೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಭರವಸೆ ನೀಡಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.