ADVERTISEMENT

ರಾಮನಗರ: ಎಸ್‌ಎಸ್‌ಎಲ್‌ಸಿ ಪರಿಪೂರ್ಣ ಫಲಿತಾಂಶಕ್ಕೆ ‘ಪ್ರಗತಿ ಪಥ’

ಶೇ 100ರಷ್ಟು ಫಲಿತಾಂಶದತ್ತ ಶಾಲಾ ಶಿಕ್ಷಣ ಇಲಾಖೆ ಚಿತ್ತ; ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಮಾಲಿಕೆ ಕೈಪಿಡಿ

ಓದೇಶ ಸಕಲೇಶಪುರ
Published 31 ಜನವರಿ 2026, 4:44 IST
Last Updated 31 ಜನವರಿ 2026, 4:44 IST
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ಧಪಡಿಸಿರುವ ‘ಪ್ರಗತಿ ಪಥ’ ವಿದ್ಯಾರ್ಥಿ ಕೈಪಿಡಿ
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಶಾಲಾ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ವಿತರಿಸಲು ಸಿದ್ಧಪಡಿಸಿರುವ ‘ಪ್ರಗತಿ ಪಥ’ ವಿದ್ಯಾರ್ಥಿ ಕೈಪಿಡಿ   

ರಾಮನಗರ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗಾಗಿ ಶಾಲಾ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಶತ ಪ್ರಯತ್ನ ನಡೆಸುತ್ತಿದೆ. ವಿಶೇಷ ತರಗತಿಗಳು, ಕಿರು ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಸರಣಿಯೋಪಾದಿಯಲ್ಲಿ ನಡೆಸುತ್ತಿರುವ ಇಲಾಖೆ, ಇವೆಲ್ಲವುಗಳಿಗೆ ಪೂರಕವಾಗಿ ‘ಪ್ರಗತಿ ಪಥ’ ಎಂಬ ವಿದ್ಯಾರ್ಥಿ ಕೈಪಿಡಿ ಸಿದ್ದಪಡಿಸಿದೆ.

ಕನ್ನಡ, ಇಂಗ್ಲಿಷ್, ಹಿಂದಿ, ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಸೇರಿ ಆರೂ ವಿಷಯಗಳ ಪ್ರಮುಖ ಪ್ರಶ್ನೋತ್ತರಗಳನ್ನು ಈ ಕೈಪಿಡಿ ಒಳಗೊಂಡಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಹೊರತಂದಿರುವ ಈ ಕೈಪಿಡಿಯನ್ನು ವಿದ್ಯಾರ್ಥಿಗಳು ಓದಿ ಅರ್ಥೈಸಿಕೊಂಡರೆ, ಉತ್ತಮ ಅಂಕಗಳೊಂದಿಗೆ ಪರೀಕ್ಷೆಯಲ್ಲಿ ಪಾಸಾಗುತ್ತಾರೆ.

8 ಸಾವಿರ ಮುದ್ರಣ: ‘ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣಾ ಕ್ರಿಯಾಯೋಜನೆ ಭಾಗವಾಗಿ, ಶೇ 100ರಷ್ಟು ಫಲಿತಾಂಶದ ಗುರಿಯೊಂದಿಗೆ ಪ್ರಗತಿ ಪಥ ಕೈಪಿಡಿಯನ್ನು ಸಿದ್ದಪಡಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಆಡಳಿತ ವಿಭಾಗದ ಉಪ ನಿರ್ದೇಶಕ ಎಸ್. ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸರ್ಕಾರಿ ಶಾಲೆಗಳ ಸಂಪನ್ಮೂಲ ಶಿಕ್ಷಕರನ್ನೇ ಬಳಸಿಕೊಂಡು ಸುಮಾರು 8 ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ. ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಕೈಪಿಡಿ ತಲುಪಿಸಲಾಗುತ್ತಿದೆ’ ಎಂದು ಹೇಳಿದರು.

ಗುಣಾತ್ಮಕ ಫಲಿತಾಂಶ: ‘ಈಗಾಗಲೇ ಎರಡು ಪೂರ್ವಸಿದ್ದತಾ ಪರೀಕ್ಷೆಗಳನ್ನು ಎದುರಿಸಿರುವ ವಿದ್ಯಾರ್ಥಿಗಳಿಗೆ ಕೈಪಿಡಿಸಿ ತಲುಪಿದ್ದು, ಇದೀಗ ಮೂರನೇ ಪರೀಕ್ಷೆಗೆ ಅಣಿಯಾಗುತ್ತಿದ್ದಾರೆ. ಈಗಾಗಲೇ ಒಂದು ಪರೀಕ್ಷೆಯಲ್ಲಿ ಗುಣಾತ್ಮಕ ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕರಿಗೂ ಸ್ಫೂರ್ತಿ ತುಂಬಲಾಗುತ್ತಿದೆ’ ಎಂದು ಹೇಳಿದರು.

‘ಕೈಪಿಡಿಯ ಸಾಫ್ಟ್‌ ಕಾಪಿಯನ್ನು ಜಿಲ್ಲೆಯಲ್ಲಿರುವ ಅನುದಾನರಹಿತ ಖಾಸಗಿ ಪ್ರೌಢಶಾಲೆಗಳಿಗೆ ಕೊಡುತ್ತೇವೆ. ಅವರು ಪ್ರಿಂಟ್ ತೆಗೆದು ಅಥವಾ ಮುದ್ರಿಸಿ ಹಂಚಬಹುದು. ಒಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲಿ ಈ ವರ್ಷ ಶೇ 100ರಷ್ಟು ಫಲಿತಾಂಶದ ಗುರಿಯೊಂದಿಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ’ ಎಂದರು.

ವರ್ಕ್‌ಶೀಟ್‌ ವಿತರಣೆ:  ಪರೀಕ್ಷೆಗೆ ತಯಾರಿ ನಡೆಸುವ ಪ್ರತಿ ವಿದ್ಯಾರ್ಥಿಗಳಿಗೆ 200 ವರ್ಕ್‌ಶೀಟ್‌ಗಳನ್ನು ಇಲಾಖೆ ವಿತರಿಸುತ್ತಿದೆ. ಎಷ್ಟೋ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಸೇರಿದಂತೆ ಇತರ ವಿಷಯಗಳಿಗೆ ತಯಾರಾಗಲು ಅಗತ್ಯವಿರುವ ವರ್ಕ್‌ಶೀಟ್ ಖರೀದಿಗೂ ಆರ್ಥಿಕ ಸಮಸ್ಯೆ ಇರುತ್ತದೆ. ಹಾಗಾಗಿ, ಎಲ್ಲಾ ವಿದ್ಯಾರ್ಥಿಗಳಿಗೆ ವರ್ಕ್‌ಶೀಟ್‌ ವಿತರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಸಿಎಸ್‌ಆರ್‌ ನೆರವು: ಶಿಕ್ಷಣ ಇಲಾಖೆಯ ಎಸ್‌ಎಸ್‌ಎಲ್‌ಪಿ ಪರೀಕ್ಷೆ ಸುಧಾರಣೆ ಪ್ರಯತ್ನಕ್ಕೆ ಟ್ರಾನ್‌ಸಿಸ್ಟಮ್ ಎಂಬ ಕಂಪನಿ ಕೈ ಜೋಡಿಸಿದೆ. ಇಲಾಖೆ ಸಿದ್ದಪಡಿಸಿರುವ ಕೈಪಿಡಿಯನ್ನು ಈ ಕಂಪನಿ ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್‌) ಮುದ್ರಣ ಮಾಡಿ ಕೊಟ್ಟಿದೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಗಣ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಜಿ.ಪಂ. ಸಿಇಒ ಅನ್ಮೋಲ್ ಜೈನ್ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಅವರು ‘ಪ್ರಗತಿ ಪಥ’ ವಿದ್ಯಾರ್ಥಿ ಕೈಪಿಡಿ ಬಿಡುಗಡೆ ಮಾಡಿದ ಸಂದರ್ಭ. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಹಾಗೂ ಇತರರು ಇದ್ದಾರೆ

‘ಪ್ರಗತಿ– ಪ್ರಕಾಶ– ಪ್ರಜ್ವಲ’

ವಿದ್ಯಾರ್ಥಿಗಳ ಕಲಿಕಾ ಮಟ್ಟ ಆಧರಿಸಿ ‘ಪ್ರಗತಿ–ಪ್ರಕಾಶ–ಪ್ರಜ್ವಲ’ ಎಂದು ವಿಂಗಡಿಸಿ ಫಲಿತಾಂಶ ಸುಧಾರಣೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಜಸ್ಟ್ ಪಾಸ್ ಆಗುವ ಕಲಿಕಾ ಮಟ್ಟದ ವಿದ್ಯಾರ್ಥಿಗಳನ್ನು ‘ಪ್ರಗತಿ’ಯಡಿ ಕನಿಷ್ಠ ಶೇ 50ಕ್ಕಿಂತ ಹೆಚ್ಚು ಅಂಕ ಪಡೆಯುವಂತೆ ಅವರನ್ನು ಅಣಿಗೊಳಿಸಲಾಗುತ್ತಿದೆ. ‘ಪ್ರಕಾಶ’ದಡಿ ಅತ್ತುತ್ತಮ ದರ್ಜೆಯಲ್ಲಿ ಪಾಸಾಗುವವರ ಪ್ರಮಾಣ ಹೆಚ್ಚಿಸಲು ಗಮನ ಕೇಂದ್ರಿಕರಿಸಿದ್ದೇವೆ. ‘ಪ್ರಜ್ವಲ’ದಡಿ ರಾಜ್ಯಮಟ್ಟದಲ್ಲಿ ಪ್ರತಿ ಶಾಲೆಯ ವಿದ್ಯಾರ್ಥಿಗಳು ಸಹ ಸ್ಥಾನ ಪಡೆಯುವಂತೆ ಮಾಡುವ ಗುರಿಯೊಂದಿಗೆ ನಮ್ಮ ಶಿಕ್ಷಕರು ಶ್ರಮಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಪ್ರಗತಿ ಪಥ ಕೈಪಿಡಿ ಸಿದ್ಧಪಡಿಸಲಾಗಿದೆ’ ಎಂದು ಇಲಾಖೆಯ ಉಪ ನಿರ್ದೇಶಕ ಎಸ್. ಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಸಿದಿದ್ದ ಫಲಿತಾಂಶ

ಜಿಲ್ಲೆಯಲ್ಲಿ 2023–24ನೇ ಸಾಲಿನಲ್ಲಿ ಶೇ 71.16ರಷ್ಟಿದ್ದ ಎಸ್‌ಎಸ್‌ಎಲ್‌ಸಿ ಫಲಿತಾಂಶವು ನಂತರದ 2024–25ನೇ ಸಾಲಿನಲ್ಲಿ ಶೇ 63.12ಕ್ಕೆ ಕುಸಿದಿತ್ತು. ಆ ವರ್ಷವೂ ‘ಪರಿಪೂರ್ಣ ಫಲಿತಾಂಶದೆಡೆಗೆ ನಮ್ಮ ನಡೆ’ ಎಂಬ ಆಶಯದೊಂದಿಗೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ‘ಯಶಸ್ಸು’ ಎಂಬ ಕೈಪಿಡಿಯನ್ನು ಇಲಾಖೆ ಹೊರತಂದಿತ್ತು. ವಿಷಯವಾರು ತಜ್ಞರು ತಯಾರಿಸಿರುವ ಕನಿಷ್ಠ 100ರಿಂದ 150 ಪುಟಗಳಷ್ಟಿರುವ ಆರೂ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಕೈಪಿಡಿಯನ್ನು ವಿದ್ಯಾರ್ಥಿಗಳಿಗೆ ಹಂಚಲಾಗಿತ್ತು. ಪರೀಕ್ಷೆ ಸಮೀಪಿಸುತ್ತಿದ್ದಂತೆ ಕೈಪಿಡಿ ಆಧರಿಸಿ ಶಿಕ್ಷಕರು ಮಕ್ಕಳನ್ನು ಅಣಿಗೊಳಿಸಿದ್ದರು. ಆದರೂ ಫಲಿತಾಂಶ ತೃಪ್ತಿಯದಾಯಕವಾಗಿರಲಿಲ್ಲ. ಈ ಸಾಲಿನಲ್ಲಿ ಫಲಿತಾಂಶ ಸುಧಾರಣೆಗಾಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಮಾರ್ಗದರ್ಶನದಲ್ಲಿ ಮತ್ತಷ್ಟು ಸರಳೀಕರಿಸಿದ ವಿಷಯವಾರು ಪ್ರಶ್ನೋತ್ತರಗಳನ್ನು ಒಳಗೊಂಡ 100 ಪುಟಗಳ ‘ಪ್ರಗತಿ ಪಥ’ ಕೈಪಿಡಿಯನ್ನು ಇಲಾಖೆ ತಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.