ADVERTISEMENT

‘ಬಲಗೊಳ್ಳುತ್ತಿದೆ ರೈತ ಸಂಘಟನೆ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 7:33 IST
Last Updated 14 ಜನವರಿ 2022, 7:33 IST
ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಳ ಗ್ರಾಮದಲ್ಲಿ ನಡೆದ ರೈತ ಸಂಘಟನಾ ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ರೈತ ಸಂಘಟನೆಗೆ ಸೇರ್ಪಡೆಗೊಂಡ ರೈತರಿಗೆ ಪ್ರಮಾಣ ವಚನ ಬೋಧಿಸಲಾಯಿತು
ಚನ್ನಪಟ್ಟಣ ತಾಲ್ಲೂಕಿನ ಕನ್ನಮಂಗಳ ಗ್ರಾಮದಲ್ಲಿ ನಡೆದ ರೈತ ಸಂಘಟನಾ ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ರೈತ ಸಂಘಟನೆಗೆ ಸೇರ್ಪಡೆಗೊಂಡ ರೈತರಿಗೆ ಪ್ರಮಾಣ ವಚನ ಬೋಧಿಸಲಾಯಿತು   

ಚನ್ನಪಟ್ಟಣ: ‘ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರಿಗೆ ಅನ್ಯಾಯವಾಗದಂತೆ ಎಚ್ಚರವಹಿಸುವ ಕಾಲ ಸನ್ನಿಹಿತವಾಗುತ್ತಿದೆ’ ಎಂದು ರೈತ ಮುಖಂಡ ವಿಠಲೇನಹಳ್ಳಿ ಹೊಂಬಾಳೇಗೌಡ ತಿಳಿಸಿದರು.

ತಾಲ್ಲೂಕಿನ ಕನ್ನಮಂಗಲ ಗ್ರಾಮದ ಹೊರವಲಯದಲ್ಲಿರುವ ಕಂತೆಸ್ವಾಮಿ ಮತ್ತು ಮಂಟೇಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ನಡೆದ ರೈತ ಸಂಘಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ರೈತ ಸಂಘ ಎಂದರೆ ಮೂಗು ಮುರಿಯುವ ಕಾಲ ದೂರವಾಗುತ್ತಿದೆ ಎಂದರು.

80ರ ದಶಕದ ರೈತ ಸಂಘಟನೆ ಮತ್ತೆ ಮರುಕಳಿಸುತ್ತಿದೆ. ಚನ್ನಪಟ್ಟಣ ತಾಲ್ಲೂಕು ಒಂದರಲ್ಲೇ ಈಗಾಗಲೇ ಸಮಾನ ಮನಸ್ಕರ ವೇದಿಕೆಯಿಂದ ನಲವತ್ತು ಗ್ರಾಮಗಳಲ್ಲಿ ಸಂಘಟನೆ ಚಿಗುರೊಡೆದಿದೆ ಎಂದರು.

ADVERTISEMENT

ಹಳೆಬೇರಿನ ಜೊತೆ ಹೊಸ ಚಿಗುರು ಸೇರಿದ್ದು ಸೊಬಗಿನ ಜೊತೆಗೆ ಬುಡ ಭದ್ರವಾಗುತ್ತಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಕೆಲಸದ ಬಗ್ಗೆ ಆಸ್ಥೆವಹಿಸಲು ಕಾರಣಕರ್ತರಾಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಘಟನೆ ಆಗುವಂತೆ ಮುಂದಡಿ ಇಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆವಹಿಸಿದ್ದ ರೈತ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ಹಸಿರು ಶಾಲು ಹಾಕಿಕೊಳ್ಳುವುದು ಎಂದರೆ ಅದೊಂದು ಜವಾಬ್ದಾರಿ. ರೈತರಿಗೆ ಆಗಿರುವ ಅನ್ಯಾಯದ ವಿರುದ್ಧ ಸಿಡಿದೇಳಲು ಇದೊಂದು ಸದಾವಕಾಶ. ಹಾಗಾಗಿ, ನೀವು ರೈತ ಸಂಘಟನೆಗೆ ಸೇರುವ ಮೂಲಕ ನಿಮಗೆ ಮತ್ತು ನಿಮ್ಮ ಗ್ರಾಮಕ್ಕೆ ಆಗುವ ಅನ್ಯಾಯದ ವಿರುದ್ಧ ಹೋರಾಡಲು ಸಜ್ಜಾಗಬೇಕು ಎಂದು ತಿಳಿಸಿದರು.

ನಮ್ಮ ಶ್ರಮದ ಬದುಕನ್ನು ಬಂಡವಾಳಶಾಹಿಗಳು ಕೊಳ್ಳೆ ಹೊಡೆಯುತ್ತಿದ್ದಾರೆ. ರಾಜಕಾರಣಿಗಳು ರೈತರ ಹೆಸರೇಳಿ, ಶಾಲು ಹಾಕಿಕೊಂಡು ರೈತರಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ. ರೈತರಿಗೆ ಬೇಕಾಗಿರುವುದು ವೈಜ್ಞಾನಿಕ ಬೆಲೆ, ಪ್ರಾಮಾಣಿಕತೆಯ ಅಧಿಕಾರಿಗಳು, ನೀರು, ವಿದ್ಯುತ್. ಇದನ್ನು ಕೊಡುವುದು ಸರ್ಕಾರದ ಕೆಲಸ. ಕೊಡದಿದ್ದರೂ ಪಡೆದುಕೊಳ್ಳುವುದು ನಮ್ಮ ಹಕ್ಕು. ಹಾಗಾಗಿ, ಇಂದಿನ ಸಂಘಟನೆ ರೈತರ ಬದುಕಿಗೆ ಆಶಾದಾಯಕವಾಗಲಿದೆ ಎಂದು ತಿಳಿಸಿದರು.

ರೈತ ಮುಖಂಡರಾದ ಪ್ರಕಾಶ್, ನಂಜಪ್ಪ, ಪ್ರಗತಿಪರ ರೈತರಾದ ಶಿವಕುಮಾರ್, ಮಹೇಶ್ ನಾಗೇಶ್, ಸಾಮಾಜಿಕ ಹೋರಾಟಗಾರರಾದ ಗೋ.ರಾ. ಶ್ರೀನಿವಾಸ, ರಾಂಪುರ ಧರಣೀಶ್, ರಾಂಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕನ್ನಮಂಗಲ ಯೋಗಿ, ರೈತ ಮುಖಂಡ ಚಲುವೇಗೌಡ ಮಾತನಾಡಿದರು.

ಕನ್ನಮಂಗಲ ಮತ್ತು ಅಂಗರಹಳ್ಳಿ ಗ್ರಾಮಗಳ ನಲವತ್ತಕ್ಕೂ ಹೆಚ್ಚು ಮಂದಿ ಸಮಾನ ಮನಸ್ಕರ ರೈತ ಸಂಘಟನೆಗೆ ಹಸಿರು ಶಾಲು ಧರಿಸುವ ಮೂಲಕ ಸೇರ್ಪಡೆಗೊಂಡರು.

ಸೇರ್ಪಡೆಗೊಂಡವರಿಗೆ ಪ್ರಮಾಣ ವಚನ ಬೋಧಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.