ADVERTISEMENT

ಎಸ್‌ಟಿಆರ್‌ಆರ್‌ ಯೋಜನೆ ರದ್ದಾಗದು: ನಿರ್ಮಲಾ ಸೀತಾರಾಮನ್ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 5:58 IST
Last Updated 21 ಫೆಬ್ರುವರಿ 2026, 5:58 IST
ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ  ವೇದನಾದ ಗುರುಕುಲ ನಿರ್ಮಾಣಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಪತ್ನಿ ಅನಸೂಯ ಮಂಜುನಾಥ್, ಗುರುಕುಲದ ಗೋವಿಂದ ಪ್ರಕಾಶ ಭಟ್ ಹಾಗೂ ಇತರರು ಇದ್ದಾರೆ
ರಾಮನಗರ ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ  ವೇದನಾದ ಗುರುಕುಲ ನಿರ್ಮಾಣಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು. ಸಂಸದ ಡಾ. ಸಿ.ಎನ್. ಮಂಜುನಾಥ್, ಪತ್ನಿ ಅನಸೂಯ ಮಂಜುನಾಥ್, ಗುರುಕುಲದ ಗೋವಿಂದ ಪ್ರಕಾಶ ಭಟ್ ಹಾಗೂ ಇತರರು ಇದ್ದಾರೆ   

ರಾಮನಗರ: ‘ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕಿರುವ ಸ್ಯಾಟಲೈಟ್ ಟೌನ್ ರಿಂಗ್ ರೋಡ್(ಎಸ್‌ಟಿಆರ್‌ಆರ್‌) ಯೋಜನೆಯು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಪರಿಹಾರ ಪಾವತಿಸಲಾಗುವುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.

ತಾಲ್ಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ಕಲ್ಯಾಣಪುರಿ ವೈದಿಕ ಸಭಾ ವತಿಯಿಂದ ವೇದನಾದ ಗುರುಕುಲ ನಿರ್ಮಾಣಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಯೋಜನೆ ಭೂಸ್ವಾಧೀನಕ್ಕೆ ಗುರುತಿಸಿರುವ ಭೂಮಿಯನ್ನು ಇನ್ನೂ ಸ್ವಾಧೀನ ಮಾಡಿಕೊಂಡಿಲ್ಲ. ರೈತರೇ ಅಲ್ಲಿ ಕೃಷಿ ಮಾಡುತ್ತಿದ್ದಾರೆ’ ಎಂದರು.

‘ಭೂ ಸ್ವಾಧೀನ ಪ್ರಕ್ರಿಯೆ ತಡವಾಗಿರುವ ಕಾರಣಕ್ಕೆ ಯೋಜನೆಯೇ ನಿಂತು ಹೋಗಿದೆ ಎಂದು ರೈತರು ಆತಂಕಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲುವುದಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. ಪರಿಹಾರ ಕುರಿತು ಸಂಬಂಧಪಟ್ಟ ಇಲಾಖೆ ನಿರ್ಧಾರ ಕೈಗೊಳ್ಳುತ್ತದೆ’ ಎಂದು ತಿಳಿಸಿದರು.

ADVERTISEMENT

‘ಯೋಜನೆ ಬಗ್ಗೆ ಇಲ್ಲಿನ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಈಗಾಗಲೇ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಯೋಜನೆಗೆ ಸಂಬಂಧಿಸಿದ ಪರಿಹಾರ ಸೇರಿದಂತೆ ರೈತರು ವ್ಯಕ್ತಪಡಿಸುತ್ತಿರುವ ಆತಂಕವನ್ನು ಸಚಿವರ ಗಮನಕ್ಕೆ ತಂದಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆ ರದ್ದಾಗುವುದಿಲ್ಲ. ರೈತರಿಗೆ ಈ ವಿಷಯದಲ್ಲಿ ಗೊಂದಲ ಬೇಡ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.