ರಾಮನಗರ: ಗ್ರಾಮಗಳ ಮಟ್ಟದಲ್ಲಿರುವ ಸರ್ಕಾರಿ ಶಾಲೆ, ಶುದ್ಧ ಕುಡಿಯುವ ನೀರಿನ ಘಟಕ, ಸಾರ್ವಜನಿಕರ ಆಸ್ಪತ್ರೆ, ಗ್ರಂಥಾಲಯ, ಬಸ್ ನಿಲ್ದಾಣ, ತಂಗುದಾಣ, ಅಂಗನವಾಡಿ, ಬ್ಯಾಂಕು, ಅಂಚೆ ಕಚೇರಿ, ದೇವಸ್ಥಾನ, ಕಲ್ಯಾಣಿ, ರಸ್ತೆಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ಕಟ್ಟಡಗಳ ಆವರಣ ಸ್ವಚ್ಛಗೊಳಿಸುವ ‘ಸ್ವಚ್ಛ ಶುಕ್ರವಾರ’ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮತ್ತೆ ಶುರು ಮಾಡಿದೆ.
2020ರ ಜೂನ್‌ನಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದ ಇಕ್ರಂ ಅವರು, ಪ್ರತಿ ಶುಕ್ರವಾರ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯ ನಡೆಸುವ ಕಾರ್ಯಕ್ರಮವನ್ನು ಶುರು ಮಾಡಿದ್ದರು. ಪಂಚಾಯಿತಿಗಳಲ್ಲಿ ಜನಪ್ರಿಯವಾಗಿದ್ದ ಈ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು.
ಮರು ಚಾಲನೆ: ವಿವಿಧ ಕಾರಣಗಳಿಗಾಗಿ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ‘ಸ್ವಚ್ಛ ಶುಕ್ರವಾರ’ ಕಾರ್ಯಕ್ರಮವನ್ನು ಈಗಿನ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್ ಅವರು ಹೆಚ್ಚಿನ ಆಸಕ್ತಿಯೊಂದಿಗೆ ಮತ್ತೆ ಆರಂಭಿಸಿದ್ದಾರೆ.
ಜಿಲ್ಲೆಯಾದ್ಯಂತ ಇರುವ 126 ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಪ್ರತಿ ಶುಕ್ರವಾರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಂಚಾಯಿತಿ ಮಟ್ಟದಲ್ಲಿರುವ ವಾಟರ್‌ಮ್ಯಾನ್‌ಗಳು, ಸ್ವಚ್ಛತಾಗಾರರು ಪೂರ್ಣಪ್ರಮಾಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಇದರ ಜೊತೆಗೆ ಸರ್ಕಾರದ ಸೂಚನೆಯಂತೆ, ಪ್ರತಿ ತಿಂಗಳ ಮೊದಲ ಶನಿವಾರವನ್ನು ಸ್ವಚ್ಛ ಶನಿವಾರವನ್ನಾಗಿ ಆಚರಿಸಲಾಗುತ್ತಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಪ್ರತಿ ಶುಕ್ರವಾರ ಸ್ವಚ್ಛ ಶುಕ್ರವಾರ ಮತ್ತು ತಿಂಗಳ ಮೊದಲ ಶನಿವಾರ ಸ್ವಚ್ಛತಾ ಕಾರ್ಯಗಳು ನಡೆಯುತ್ತಿದೆ.
ಮೇಲ್ವಿಚಾರಣೆ: ‘ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಜಿ.ಪಂ. ಜಿಲ್ಲಾಮಟ್ಟದ ಸಮಾಲೋಚಕರಿಗೆ ಸ್ವಚ್ಛ ಶುಕ್ರವಾರ ಮತ್ತು ಸ್ವಚ್ಛ ಶನಿವಾರ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ತಾಲ್ಲೂಕುವಾರು ವಹಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಮಾಲೋಚಕರು ತಮಗೆ ವಹಿಸಿದ ಪಂಚಾಯಿತಿಗಳ ಪಿಡಿಒಗಳೊಂದಿಗೆ ಬೆಳಿಗ್ಗೆ 9 ಗಂಟೆಯಿಂದ 12ರವರೆಗೆ ಕಾರ್ಯಕ್ರಮ ಆಚರಿಸುವಂತೆ ನೋಡಿಕೊಳ್ಳಬೇಕು. ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಆಚರಿಸುವ ಕಾರ್ಯಕ್ರಮವನ್ನು ಫೋಟೊ ಸಮೇತ ಮೇಲಧಿಕಾರಿಗಳಿಗೆ ವರದಿ ನೀಡಬೇಕು. ನಿರ್ಲಕ್ಷ್ಯ ವಹಿಸಿದರೆ ಕ್ರಮದ ಎಚ್ಚರಿಕೆ ಸಹ ನೀಡಲಾಗಿದೆ’ ಎಂದು ಹೇಳಿದರು.
ಮತ್ತೆ ಆರಂಭಿಸಿರುವ ‘ಸ್ವಚ್ಛ ಶುಕ್ರವಾರ’ ಕಾರ್ಯಕ್ರಮದ ಜೊತೆಗೆ ತಿಂಗಳಿಗೊಮ್ಮೆ ಆಚರಿಸುತ್ತಿರುವ ‘ಸ್ವಚ್ಛ ಶನಿವಾರ’ಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವೆಡೆ ಪಂಚಾಯಿತಿ ಸದಸ್ಯರು ಸಹ ಕೈ ಜೋಡಿಸುತ್ತಿದ್ದಾರೆ– ಚಿಕ್ಕಸುಬ್ಬಯ್ಯ ಮುಖ್ಯ ಯೋಜನಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲಾ ಪಂಚಾಯಿತಿ
ಪರಿಣಾಮಕಾರಿ ಅನುಷ್ಠಾನಕ್ಕೆ ವೇಳಾಪಟ್ಟಿ
ಎರಡು ವರ್ಷದ ನಂತರ ಮರು ಚಾಲನೆ ಸಿಕ್ಕಿರುವ ಕಾರ್ಯಕ್ರಮವನ್ನು ಕಟ್ಟುನಿಟ್ಟಾಗಿ ಮಾಡುವುದಕ್ಕಾಗಿ ಜಿ.ಪಂ.ನಿಂದಲೇ ವೇಳಾಪಟ್ಟಿ ಸಿದ್ದಪಡಿಸಲಾಗಿದೆ. ಯಾವ ದಿನಾಂಕದಂದು ಯಾವ ಸರ್ಕಾರಿ ಕಚೇರಿ ಮತ್ತು ಸ್ಥಳಗಳನ್ನು ಸ್ವಚ್ಛಗೊಳಿಸಬೇಕು ಎಂಬುದರ ಪಟ್ಟಿಯನ್ನು ಎರಡು ತಿಂಗಳು ಮುಂಚೆಯೇ ಸಿದ್ಧಪಡಿಸಿ ಪಂಚಾಯಿತಿಗಳಿಗೆ ನೀಡಲಾಗಿದೆ. ಅದರಂತೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ಮಾಡಬೇಕಿದೆ. ‘ಜುಲೈ 25ರಂದು ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳನ್ನು ಸ್ವಚ್ಛಗೊಳಿಸಲಾಗಿದೆ. 29ರಂದು ಸಹ ಶಾಲೆಗಳ ಸ್ವಚ್ಛತೆ ನಡೆಯಲಿದೆ. ಆಗಸ್ಟ್ 2 ಹಾಗೂ ಸೆ. 6ರಂದು ಅಂಗನವಾಡಿ ಕಟ್ಟಡಗಳು ಆಗಸ್ಟ್ 8 ಹಾಗೂ ಸೆ. 12ರಂದು ಸರ್ಕಾರಿ ಕಟ್ಟಡ (ಬ್ಯಾಂಕ್ ಆಸ್ಪತ್ರೆ ಅಂಚೆ ಕಚೇರಿಗಳು) ಆಗಸ್ಟ್ 15 ಹಾಗೂ ಸೆ. 19ರಂದು ಕುಡಿಯುವ ನೀರಿನ ಘಟಕಗಳು ಮತ್ತು ಆಗಸ್ಟ್ 22 ಹಾಗೂ ಸೆ. 26ರಂದು ರಸ್ತೆ ಚರಂಡಿ ಸಮುದಾಯ ಭವನ ಹಾಗೂ ಇತರ ಕಟ್ಟಡಗಳನ್ನು ಸ್ವಚ್ಛಗೊಳಿಸಬೇಕು ಎಂದು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಜನರಲ್ಲಿ ಸ್ವಚ್ಛತೆ ಪ್ರಜ್ಞೆಗೆ ಪೂರಕ
ಸರ್ಕಾರಿ ಕಚೇರಿಗಳು ಕಟ್ಟಡಗಳು ಹಾಗೂ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ನಿಟ್ಟಿನಲ್ಲಿಆರಂಭಿಸಿದ್ದ‘ಸ್ವಚ್ಛ ಶುಕ್ರವಾರ’ ಕಾರ್ಯಕ್ರಮವು ಪರಿಣಾಮಕಾರಿಯಾಗಿತ್ತು. ಇದೀಗ ಮತ್ತೆ ಆರಂಭಿಸಿರುವುದು ಉತ್ತಮ ಬೆಳವಣಿಗೆ. ನಾಗರಿಕರು ತಮ್ಮ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ನೈರ್ಮಲ್ಯದಿಂದ ಇಟ್ಟುಕೊಳ್ಳುವ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು.
ಅದಕ್ಕೆ ಇಂತಹ ಕಾರ್ಯಕ್ರಮಗಳು ಪೂರಕವಾಗಲಿವೆ. ಸದ್ಯ ಸಿಬ್ಬಂದಿ ಮಾಡುತ್ತಿರುವ ಕೆಲಸಕ್ಕೆ ಮುಂದೆ ಗ್ರಾಮಸ್ಥರು ಸಹ ತಮ್ಮೂರಿನ ಸ್ವಚ್ಛತೆಗೆ ಕೈ ಜೋಡಿಸುತ್ತಾರೆ. ಹಿಂದಿನ ಸಿಇಒ ಇಕ್ರಂ ಅವರು ಕಾರ್ಯಕ್ರಮವನ್ನು ಉತ್ತಮವಾಗಿ ಅನುಷ್ಠಾನ ಮಾಡುವ ಪಂಚಾಯಿತಿಗಳನ್ನು ಗುರುತಿಸಿ ಬಹುಮಾನ ಹಾಗೂ ಸ್ವಚ್ಛತಾ ಪರಿಕರ ನೀಡುತ್ತಿದ್ದರು. ಈಗಲೂ ಆ ರೀತಿ ಮಾಡುವ ಆಲೋಚನೆ ಇದೆ ಎಂದು ಜಿ.ಪಂ. ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.