
ರಾಮನಗರ: ‘ಸ್ವಾಮಿ ವಿವೇಕಾನಂದ ಅವರು ದೇಶಕ್ಕೆ ಅದರಲ್ಲೂ ಯುವ ಸಮೂಹಕ್ಕೆ ಸಾರ್ವಕಾಲಿಕ ಪ್ರೇರಣೆಯಾಗಿದ್ದಾರೆ. ಶಿಕ್ಷಣ ಹಾಗೂ ಯುವಶಕ್ತಿಯಿಂದ ದೇಶದ ಗತಿಯನ್ನೇ ಬದಲಿಸಬಹುದು ಎಂಬುದನ್ನು ವಿವೇಕಾನಂದ ಅವರು ತೋರಿಸಿಕೊಟ್ಟರು’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ. ಕೆಂಪಯ್ಯ ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲಾ ವಕೀಲರ ಸಂಘವು ನಗರದ ಕೋರ್ಟ್ ಆವರಣದಲ್ಲಿರುವ ತನ್ನ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ರ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಭಾರತವನ್ನು ಹಾವಾಡಿಗರ, ಬಡವರ, ಭಿಕ್ಷುಕರ ದೇಶ ಎಂದು ಹೀಯಾಳಿಸುತ್ತಿದ್ದ ಕಾಲದಲ್ಲಿ ಭಾರತದ ಅಂತಃಶಕ್ತಿ ಏನು ಎಂಬುದನ್ನು ವಿಶ್ವಕ್ಕೆ ವಿವೇಕಾನಂದ ಅವರು ತೋರಿಸಿದರು. ಚಿಕ್ಕ ವಯಸ್ಸಿನಲ್ಲೇ ಹೆಚ್ಚಿನ ಅಧ್ಯಯನದೊಂದಿಗೆ ವಿದ್ವತ್ತು ಪಡೆದ ಅವರು, ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದರು’ ಎಂದರು.
ಹಿರಿಯ ವಕೀಲರಾದ ಸುಬ್ಬಾಶಾಸ್ತ್ರಿ, ಜೆ.ಕೆ. ರಂಗಸ್ವಾಮಿ, ಕೆ. ಶಾಂತಯ್ಯ, ಶಿವಣ್ಣ ಗೌಡ ಮಾತನಾಡಿದರು. ಗಣ್ಯರು ವಿವೇಕಾನಂದ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸಂಘದ ಸದಸ್ಯರಿಗೆ ವಿವೇಕಾನಂದ ಅವರ ‘ವಿದ್ಯುತ್ ವಾಣಿ’ ಪುಸ್ತಕವನ್ನು ವಿತರಿಸಲಾಯಿತು. ವಕೀಲರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.