ADVERTISEMENT

ಕೆಬ್ಬೆದೊಡ್ಡಿ ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 6:51 IST
Last Updated 17 ಸೆಪ್ಟೆಂಬರ್ 2024, 6:51 IST
ಹಾರೋಹಳ್ಳಿಯ ಕೆಬ್ಬೆದೊಡ್ಡಿ ಗ್ರಾಮಕ್ಕೆ ತಹಸೀಲ್ದಾರ್ ಸಿ.ಆರ್ ಶಿವಕುಮಾರ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಹಾರೋಹಳ್ಳಿಯ ಕೆಬ್ಬೆದೊಡ್ಡಿ ಗ್ರಾಮಕ್ಕೆ ತಹಸೀಲ್ದಾರ್ ಸಿ.ಆರ್ ಶಿವಕುಮಾರ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆ ಆಲಿಸಿದರು.   

ಹಾರೋಹಳ್ಳಿ: ತಹಶೀಲ್ದಾರ್ ಸಿ.ಆರ್. ಶಿವಕುಮಾರ್ ಸೋಮವಾರ ಕೆಬ್ಬೆದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲನೆ ಮಾಡಿ, ಗ್ರಾಮಸ್ಥರೊಂದಿಗೆ ಮಾತನಾಡಿದರು.  ಸ್ಥಳ ಪರಿಶೀಲನೆ ಮಾಡದೆ ಕೆಬ್ಬೆದೊಡ್ಡಿ ಗ್ರಾಮದ 23 ಕುಟುಂಬಗಳು ವಾಸಿಸುತ್ತಿರುವ ಜಾಗವನ್ನು ಬೇರೊಬ್ಬರ ಹೆಸರಿಗೆ ಪೌತಿ ಖಾತೆ ಮಾಡಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಅವರು ಈ ಭೇಟಿ ಮಾಡಿದರು.

ಹಾರೋಹಳ್ಳಿ ತಾಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ ಈ ಹಿಂದೆ ದಾನವಾಗಿ ಬಂದಿದ್ದ 1ಎಕರೆ 16ಗುಂಟೆ ಜಮೀನಿನಲ್ಲಿ ಸುಮಾರು 23ಕುಟುಂಬಗಳು ವಾಸಿಸುತ್ತಿವೆ.  ಅಲ್ಲದೇ ಅದೇ ಜಾಗಕ್ಕೆ ಅಷ್ಟೂ ಮಂದಿಗೂ ಹಕ್ಕು ಪತ್ರವನ್ನೂ ಸಹ ನೀಡಲಾಯಿತು. ಅಲ್ಲದೇ ಜಮೀನನ್ನು ದಾನವಾಗಿ ನೀಡಿದ್ದ ಗಫರ್ ಖಾನ್ ಅವರಿಗೆ 5000ಸಹಾಯಧನವನ್ನೂ ಸರ್ಕಾರ ನೀಡಿತ್ತು. ಹೀಗಿರುವಾಗ ಅವರ ಸೊಸೆ ಪೌತಿ ಖಾತೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ತೆಗೆದುಕೊಂಡ ಗ್ರಾಮ ಲೆಕ್ಕಾಧಿಕಾರಿ ಸ್ಥಳ ಪರಿಶೀಲಿಸದೇ ಪೌತಿ ಖಾತೆಯನ್ನು ಅವರ ಹೆಸರಿಗೆ ಮಾಡಿಕೊಟ್ಟಿದ್ದರು. ಅದರ ವಿರುದ್ಧ ಗ್ರಾಮಸ್ಥರು ಸುದ್ದಿಗೋಷ್ಠಿ ನಡೆಸಿ, ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಮಹಿಳೆಯರ ಅಳಲು: ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಶಿವಕುಮಾರ್ ಅವರ ಮುಂದೆ ಗ್ರಾಮದ ಮಹಿಳೆಯರು ಹತ್ತು ಹಲವು ಕಷ್ಟಗಳನ್ನು ಹೇಳಿಕೊಂಡರು. ಈ ಗ್ರಾಮಕ್ಕೆ ಚರಂಡಿ ವ್ಯವಸ್ಥೆ ಇಲ್ಲ, ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ, ನಮ್ಮ ಜಮೀನು ನಮ್ಮ ಹೆಸರಿನಲ್ಲಿದ್ದರೂ ಬೆಂಗಳೂರು ಮೂಲದ ಉದ್ಯಮಿ ರಾಜ್ ಕುಮಾರ್ ಮತ್ತು ಆತನ ಮಗ ಜಮೀನಿನ ಕಡೆ ಹೋದರೆ ತೊಂದರೆ ನೀಡುತ್ತಾರೆ. ಅವರ ವಿರುದ್ಧ ಎಷ್ಟು ದೂರು ನೀಡಿದರೂ ಸಮಸ್ಯೆ ಸರಿ ಹೋಗಿಲ್ಲ. ದುಡ್ಡಿನ ಮದದಿಂದ ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದಾರೆ. ಅದೆಷ್ಟೋ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಲು ಮುಂದಾದರೂ ಅವರ ಪ್ರಯತ್ನ ಕೈಗೂಡಲಿಲ್ಲ. ನೀವಾದರೂ ನಮ್ಮ ಸಮಸ್ಯೆ ಬಗೆ ಹರಿಸಿ ಎಂದು ಮಹಿಳೆಯರು ತಹಶೀಲ್ದಾರ್ ಮುಂದೆ ಅವಲತ್ತುಕೊಂಡರು.

ADVERTISEMENT

ಮಹಿಳೆಯರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ ತಹಶೀಲ್ದಾರ್ ಶಿವಕುಮಾರ್, ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು. 

ಶಾಸಕರ ಸೂಚನೆ ಮೇರೆಗೆ ಕೆಬ್ಬೆದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ನೀಡಲಾಗಿದೆ. ಮೇಲ್ನೋಟಕ್ಕೆ ಗ್ರಾಮ ಲೆಕ್ಕಾಧಿಕಾರಿಯ ಬೇಜವಾಬ್ದಾರಿತನವೇ ಎಲ್ಲಾ ಸಮಸ್ಯೆಗಳಿಗೆ ಕಾರಣವಗಿರುವುದು ಕಂಡು ಬಂದಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಗ್ರಾಮಸ್ಥರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸಲಾಗುವುದು.

ಸಿ.ಆರ್. ಶಿವಕುಮಾರ್, ತಹಸೀಲ್ದಾರ್ ಹಾರೋಹಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.