ADVERTISEMENT

ಶಾಸಕ-ಜಿಲ್ಲಾಧಿಕಾರಿ ನಡುವೆ ಮಾತಿನ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 13:45 IST
Last Updated 18 ಜನವರಿ 2020, 13:45 IST
ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿಶಾ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಮಾತನಾಡಿದರು
ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ದಿಶಾ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಮಾತನಾಡಿದರು   

ರಾಮನಗರ: ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಜನಪ್ರತಿನಿಧಿಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಶಾಸಕ ಎ.ಮಂಜುನಾಥ್ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರೊಂದಿಗೆ ವಾಗ್ವಾದ ನಡೆಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಭವನದಲ್ಲಿ ಶನಿವಾರ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನದ ಕುರಿತ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ (ದಿಶಾ) ಸಭೆಯಲ್ಲಿ, ಬಾಲಗಂಗಾಧರನಾಥ ಸ್ವಾಮೀಜಿ ಜನಿಸಿದ ಬಾನಂದೂರು ಗ್ರಾಮದ ಅಭಿವೃದ್ಧಿ ವಿಚಾರವನ್ನು ಪ್ರಸ್ತಾಪಿಸಿದ್ದು ಶಾಸಕರು ಮತ್ತು ಜಿಲ್ಲಾಧಿಕಾರಿಗಳ ವಾಗ್ವಾದಕ್ಕೆ ಕಾರಣವಾಯಿತು.

ಎ.ಮಂಜುನಾಥ್, ‘ಕ್ಷೇತ್ರ ಅಭಿವೃದ್ಧಿ ವಿಚಾರವಾಗಿ ಜನರು ನಮ್ಮನ್ನು ಪ್ರಶ್ನಿಸುತ್ತಾರೆ. ಜನಪ್ರತಿನಿಧಿಗಳು ಅಂದರೆ ನಿಮಗೆ ನಿರ್ಲಕ್ಷ್ಯ ಆಗಿದೆ’ ಎಂದಾಗ ಜಿಲ್ಲಾಧಿಕಾರಿ ಎಂ.ಎಸ್ .ಅರ್ಚನಾ, ‘ನಮಗೆ ನಮ್ಮದೆ ಆದ ಅಧಿಕಾರವಿದೆ. ಅದರ ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಎಲ್ಲ ಕೆಲಸಗಳನ್ನು ಜನಪ್ರತಿನಿಧಿಗಳಿಂದಲೇ ಕೇಳಿ ಮಾಡಬೇಕೆಂದಿಲ್ಲ’ ಎಂದು ಪ್ರತ್ಯುತ್ತರ ನೀಡಿದರು.

ADVERTISEMENT

ಕೆರಳಿದ ಎ.ಮಂಜುನಾಥ್, ‘ನಿಮಗೆ ನಮ್ಮನ್ನು ಕೇಳಿಯೇ ಎಲ್ಲ ಕೆಲಸ ಮಾಡಿ ಅಂತ ಹೇಳುತ್ತಿಲ್ಲ. ನಮಗೂ ಅಧಿಕಾರವಿದೆ. ಅದನ್ನು ಎಲ್ಲಿ ಚಲಾಯಿಸಬೇಕು ಎಂಬುದು ಗೊತ್ತಿದೆ. ಚಲಾಯಿಸಿ ತೋರಿಸುತ್ತೇವೆ. ವೀರಾಪುರ ಮತ್ತು ಬಾನಂದೂರು ವಿಚಾರವಾಗಿ ಮಾಹಿತಿ ಕೇಳಿದರೆ ಶಾಸಕರಿಗೆ ಮಾಹಿತಿ ನೀಡಬೇಕಾಗಿಲ್ಲ ಎನ್ನುತ್ತೀರಿ. ಕ್ಷೇತ್ರದ ಶಾಸಕನಿಗೆ ನೀಡದ ಮಾಹಿತಿಯನ್ನು ಇನ್ಯಾರಿಗೆ ನೀಡುತ್ತೀರಿ. ನಾವು ಜಿಲ್ಲಾಧಿಕಾರಿಗಳನ್ನು ಕೇಳುತ್ತಿಲ್ಲ, ಸರ್ಕಾರವನ್ನು ಕೇಳುತ್ತಿದ್ದೇವೆ’ ಎಂದರು.

ಆಗ ಮಧ್ಯ ಪ್ರವೇಶಿಸಿದ ಸಂಸದ ಡಿ.ಕೆ.ಸುರೇಶ್ ರವರು, ಬಾಲಗಂಗಾಧರನಾಥ ಸ್ವಾಮೀಜಿಗಳ ಹುಟ್ಟೂರು ಬಾನಂದೂರು ಗ್ರಾಮದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ₹25 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆ ಹಣ ಏನಾಯಿತು, ಕ್ರಿಯಾ ಯೋಜನೆ ಸಿದ್ದವಾಗಿದೆಯೇ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ನಾವು ಏನೆಂದು ಉತ್ತರಿಸಬೇಕು ಎಂದು ಜಿಲ್ಲಾಧಿಕಾರಿಗಳನ್ನು ಕೇಳಿದರು.

ವೀರಾಪುರ ಮತ್ತು ಬಾನಂದೂರು ಅಭಿವೃದ್ಧಿ ವಿಚಾರವಾಗಿ ಸಂಸದರಾಗಲಿ, ಶಾಸಕರಾಗಲಿ ಏನನ್ನೂ ಕೇಳಬಾರದು ಎಂದು ಎ.ಮಂಜುನಾಥ್ ತಿಳಿಸಿದರು. ಅರ್ಚನಾ, ‘ಶಾಸಕರಿಗೆ ನೀವು, ನಾನು ಮಾತನಾಡಿದ್ದನ್ನು ತಿರುಚಿ ಹೇಳಬೇಡಿ. ನಾನು ಯಾವತ್ತೂ ನಿಮಗೆ ಮಾಹಿತಿ ಕೇಳಬೇಡಿ ಎಂದು ಹೇಳಿಲ್ಲ’ ಎಂದು ಸಮಜಾಯಿಷಿ ನೀಡಿದರು. ಹೀಗೆ ಮಾತಿನ ಜಟಾಪಟಿ ಮುಂದುವರಿಯಿತು.

‘ನನ್ನ ಕ್ಷೇತ್ರದಲ್ಲಿ ಏನಾದರು ನಡೆದರೆ ಮಾಹಿತಿ ನೀಡುವಂತೆ ಕೇಳುತ್ತಿದ್ದೇನೆ. ಪತ್ರವನ್ನು ಬರೆದಿದ್ದೇನೆ. ಅದಕ್ಕೆ ಯಾವುದೇ ಉತ್ತರ ನೀಡಿಲ್ಲವೇಕೆ’ ಎಂದು ಮಂಜುನಾಥ್ ಕೇಳಿದರು. ಶಾಸಕರನ್ನು ಸಮಾಧಾನ ಪಡಿಸಿದ ಸಂಸದರು, ರಾಜ್ಯ ಸರ್ಕಾರ ಬಜೆಟ್ ನಲ್ಲಿ ಬಾನಂದೂರು ಗ್ರಾಮಕ್ಕೆ ₹25 ಕೋಟಿ ಘೋಷಿಸಿದೆ. ಗ್ರಾಮದ ಅಭಿವೃದ್ಧಿ ಕುರಿತಂತೆ ಕಾರ್ಯಕ್ರಮ ರೂಪಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಅದಕ್ಕೂ ಮುನ್ನ ಶಾಸಕರ ಗಮನಕ್ಕೂ ತರಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಆ ಹಣವನ್ನು ಹೇಗೆ ಸದ್ಬಳಕೆ ಮಾಡಬೇಕೆಂದು ಹೇಳಿಲ್ಲ. ಹೀಗಾಗಿ ಸರ್ಕಾರಕ್ಕೆ ವರದಿ ಕಳುಹಿಸಿದ್ದೇನೆ. ಅದಕ್ಕೆ ಸರ್ಕಾರ ಸಮಿತಿ ರಚಿಸಿಕೊಂಡು ಏನೆಲ್ಲ ಕಾರ್ಯಕ್ರಮ ರೂಪಿಸಲು ಸಾಧ್ಯವಿದಿಯೋ ಅದನ್ನು ಮಾಡುವಂತೆ ಸೂಚನೆ ನೀಡಿದೆ. ಆದರೆ, ಶಾಸಕರು ಯಾರ್ಯಾರನ್ನೋ ಕರೆಯಬಾರದು. ಯಾರನ್ನು ಕರೆಯಬೇಕು ಎಂಬುದನ್ನು ನನ್ನನ್ನು ಕೇಳಿ ನಿರ್ಧರಿಸಬೇಕು ಎನ್ನುತ್ತಿದ್ದಾರೆ ಎಂದರು.

ಶಾಸಕ ಮಂಜುನಾಥ್, ‘ನಾನು ಹಾಗೆ ಹೇಳಿಯೇ ಇಲ್ಲ. ನೀವು ಒಬ್ಬರನ್ನು ಕರೆದುಕೊಂಡು ವೀರಾಪುರಕ್ಕೆ ಹೇಗೆ ಹೋದಿರಿ. ಯಾರು ಅವರು, ಆ ವ್ಯಕ್ತಿಗೆ ಯಾವ ಅಧಿಕಾರವಿದೆ. ಜಿಲ್ಲಾಧಿಕಾರಿಗಳನ್ನು ನಾನೇ ಕರೆದುಕೊಂಡು ಬಂದೆ ಎಂದು ಹೇಳಿದ್ದಾರಲ್ಲ. ಹಾಗಾದರೆ ನಮಗೇನು ಜವಾಬ್ದಾರಿ ಇಲ್ಲವೇ. ಹೋಗಲಿ ಸಂಸದರನ್ನು ಏನಾದರೂ ಕೇಳಿದ್ದೀರಾ, ಹಣ ತರುವುದರಲ್ಲಿ ನಮ್ಮ ಶ್ರಮವೂ ಇದೆ ಎಂಬುದನ್ನು ಮರೆಯಬೇಡಿ’ ಎಂದರು.

‘ವೀರಾಪುರಕ್ಕೆ ನಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ’ ಎಂದು ಜಿಲ್ಲಾಧಿಕಾರಿ ಸಮರ್ಥಿಸಿಕೊಳ್ಳಲು ಮುಂದಾದಾಗ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್. ಬಸಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಉಪ ಕಾರ್ಯದರ್ಶಿ ಉಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.