ADVERTISEMENT

7 ದಿನದಲ್ಲೇ ಸಮೀಕ್ಷೆ ಮುಗಿಸಿದ ಶಿಕ್ಷಕಿ

ಸಾಮಾಜಿಕ –ಶೈಕ್ಷಣಿಕ ಸಮೀಕ್ಷೆ: ಶಾಂತಮ್ಮಗೆ ಜಿಲ್ಲಾಧಿಕಾರಿ ಅಭಿನಂದನೆ; ನಗದು ಬಹುಮಾನ ವಿತರಣೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2025, 2:26 IST
Last Updated 30 ಸೆಪ್ಟೆಂಬರ್ 2025, 2:26 IST
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ ಮನೆಗಳನ್ನು ಕೇವಲ 7 ದಿನದಲ್ಲಿ ಪೂರ್ಣಗೊಳಿಸಿದ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯ ಯುಜಿಎಚ್‌ಪಿಎಸ್ ಸಹ ಶಿಕ್ಷಕಿ ಶಾಂತಮ್ಮ ಅವರಿಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಮ್ಮ ಕಚೇರಿಯಲ್ಲಿ ಸೋಮವಾರ ಅಭಿನಂದನಾ ಪತ್ರ ನೀಡಿದರು. ಶಾಂತಮ್ಮ ಅವರ ಪತಿ ಶಿವರಾಜ್ ಇದ್ದಾರೆ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ ಮನೆಗಳನ್ನು ಕೇವಲ 7 ದಿನದಲ್ಲಿ ಪೂರ್ಣಗೊಳಿಸಿದ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯ ಯುಜಿಎಚ್‌ಪಿಎಸ್ ಸಹ ಶಿಕ್ಷಕಿ ಶಾಂತಮ್ಮ ಅವರಿಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಮ್ಮ ಕಚೇರಿಯಲ್ಲಿ ಸೋಮವಾರ ಅಭಿನಂದನಾ ಪತ್ರ ನೀಡಿದರು. ಶಾಂತಮ್ಮ ಅವರ ಪತಿ ಶಿವರಾಜ್ ಇದ್ದಾರೆ   

ರಾಮನಗರ: ರಾಜ್ಯ ಸರ್ಕಾರವು ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸೆ. 22ರಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ತಮಗೆ ವಹಿಸಿದ ಮನೆಗಳನ್ನು ಕೇವಲ 7 ದಿನದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಅಂಬಾಡಹಳ್ಳಿಯು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ (ಯುಜಿಎಚ್‌ಪಿಎಸ್) ಸಹ ಶಿಕ್ಷಕಿ ಶಾಂತಮ್ಮ ಪೂರ್ಣಗೊಳಿಸಿದ್ದಾರೆ.

ಶಿಕ್ಷಕಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು, ಶಾಂತಮ್ಮ ಅವರನ್ನು ಸೋಮವಾರ ತಮ್ಮ ಕಚೇರಿಗೆ ಕರೆದು ವೈಯಕ್ತಿಕವಾಗಿ ₹1,001 ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿದ್ದಾರೆ. ತಮಗೆ ವಹಿಸಿದ ಕೆಲಸವನ್ನು ತ್ವರಿತವಾಗಿ ಮಾಡಿ ಮುಗಿಸಿರುವ ಶಿಕ್ಷಕಿಯ ವೃತ್ತಿಪರತೆಯನ್ನು ಕೊಂಡಾಡಿದ್ದಾರೆ.

86 ಮನೆಗಳ ಸಮೀಕ್ಷೆ: ಶಾಂತಮ್ಮ ಅವರಿಗೆ ತಾಲ್ಲೂಕಿನ ಹೊಡಿಕೆ ಹೊಸಹಳ್ಳಿ, ಚನ್ನಂಕೇಗೌಡನದೊಡ್ಡಿ ಹಾಗೂ ಗೋವಿಂದೇಗೌಡನದೊಡ್ಡಿ ಗ್ರಾಮದ 86 ಮನೆಗಳನ್ನು ಸಮೀಕ್ಷೆ ಮಾಡುವಂತೆ ನಿಗದಿಪಡಿಸಲಾಗಿತ್ತು. ಸಮೀಕ್ಷೆ ಪೂರ್ಣಕ್ಕೆ 15 ದಿನಗಳಿದ್ದರೂ, ಶಾಂತಮ್ಮ ಅವರು ಅವಧಿಗೂ ಮುಂಚೆ ಕೇವಲ ಏಳೇ ದಿನದಲ್ಲಿ ಅಷ್ಟೂ ಮನೆಗಳ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ಮುಗಿಸಿದ್ದರು.

ADVERTISEMENT

‘ಸಮೀಕ್ಷೆಯಲ್ಲಿ ನೀವು ತೋರಿದ ಆಸಕ್ತಿ, ಉತ್ಸಾಹ ಮತ್ತು ಪ್ರಾಮಾಣಿಕ ಪ್ರಯತ್ನವು ಸಮೀಕ್ಷೆ ಕಾರ್ಯ ತ್ವರಿತವಾಗಿ ಸಾಗಲು ಸಹಕಾರಿಯಾಗಿದೆ. ಸಮೀಕ್ಷಾ ಕಾರ್ಯಕ್ಕೆ ನೀವು ನೀಡಿದ ಸಹಕಾರ ಮತ್ತು ಉತ್ಸಾಹವನ್ನು ಜಿಲ್ಲಾಡಳಿತ ಪ್ರಶಂಸಿಸುತ್ತದೆ. ತಮ್ಮ ಈ ಕಾರ್ಯಶ್ರದ್ದೆಗೆ ನನ್ನ ಸ್ವಂತ ಹಣದಿಂದ ನಗದು ಬಹುಮಾನ ನೀಡಿ ಶ್ಲಾಘಿಸಿದ್ದೇನೆ. ಮುಂದೆಯೇ ನಿಮ್ಮಿಂದ ಇಂತಹದ್ದೇ ಕಾರ್ಯಕ್ಷಮತೆಯನ್ನು ಜಿಲ್ಲಾಡಳಿತ ಬಯಸುತ್ತದೆ’ ಎಂದು ಜಿಲ್ಲಾಧಿಕಾರಿ ಅಭಿನಂದನಾ ಪತ್ರದಲ್ಲಿ ತಿಳಿಸಿದ್ದಾರೆ.

ಈ ವೇಳೆ ಶಾಂತಮ್ಮ ಅವರ ಪತಿ ಶಿವರಾಜ್ ಇದ್ದರು.

- ‘ಬೆಳಿಗ್ಗೆ 6.30ಕ್ಕೆ ಶುರು ಮಾಡುತ್ತಿದ್ದೆ’

‘ಆರಂಭದಲ್ಲಿ ಎರಡು ದಿನ ಬೆಳಿಗ್ಗೆ ಕಚೇರಿ ಅವಧಿಯಲ್ಲಿ ಸಮೀಕ್ಷೆಗೆ ಹೋಗುತ್ತಿದ್ದೆ. ಆಗ ಸರ್ವರ್ ಸಮಸ್ಯೆಯಾಗುತ್ತಿತ್ತು. ಮಾಹಿತಿ ಸೇವ್ ಆಗುತ್ತಿರಲಿಲ್ಲ. ಪೋಟೊ ಅಪ್ಲೋಡ್ ಆಗುತ್ತಿರಲಿಲ್ಲ. ಸರ್ವರ್‌ಗಾಗಿ ಮನೆ ಬಳಿಯೇ ಕಾಯುತ್ತಾ ಕೂರುತ್ತಿದ್ದೆ. ಸಮೀಕ್ಷೆಗೆ ಮಾಹಿತಿ ಕೊಡುವವರು ಸಹ ಎಷ್ಟೊತ್ತು ಕಾಯಬೇಕು ಎಂದು ಕಿರಿಕಿರಿ ಮಾಡಿಕೊಳ್ಳುತ್ತಿದ್ದರು. ಮೂರನೇ ದಿನದಿಂದ ಬೆಳಿಗ್ಗೆ 6.30ಕ್ಕೆ ಪತಿ ಶಿವರಾಜ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಗ್ರಾಮಗಳಿಗೆ ಹೋಗಿ ಮಾಹಿತಿ ಸಂಗ್ರಹಿಸುತ್ತಿದ್ದೆ. ಜನ ಕೆಲಸ–ಕಾರ್ಯಗಳಿಗೆ ತೆರಳುವವರೆಗೆ ಸಮೀಕ್ಷೆ ಮಾಡಿ ಮನೆಗೆ ಹಿಂದಿರುಗುತ್ತಿದ್ದೆ. ಮತ್ತೆ ಸಂಜೆ 5ರ ನಂತರ ಹೋಗಿ ರಾತ್ರಿ 9.30ರವರೆಗೆ ಮಾಹಿತಿ ಸಂಗ್ರಹಿಸುತ್ತಿದ್ದೆ. ಇದರಿಂದಾಗಿ ನನಗೆ ವಹಿಸಿದ ಮನೆಗಳ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. ಜನ ಸಹ ಮಾಹಿತಿ ನೀಡಿ ಸಹಕರಿಸಿದರು’ ಎಂದು ಕೋಡಂಬಳ್ಳಿ ಗ್ರಾಮದವರಾದ ಶಾಂತಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.